ಪಟಗುಪ್ಪದಲ್ಲಿಂದು ‘ಶರಾವತಿ ಹಿನ್ನೀರ ಹಬ್ಬ’ ಏನೆಲ್ಲ ಕಾರ್ಯಕ್ರಮಗಳಿವೆ ಗೊತ್ತಾ ?

0 0

ಹೊಸನಗರ: ತಾಲ್ಲೂಕಿನ ಶರಾವತಿ ಮುಳುಗುಡೆ ಪ್ರದೇಶವಾದ ಪಟಗುಪ್ಪ ಸೇತುವೆ ಬಳಿ ಶನಿವಾರ ಶರಾವತಿ ಹಿನ್ನೀರ ಹಬ್ಬ ಎಂಬ ವಿನೂತನ ಕಾರ‍್ಯಕ್ರಮ ನಡೆಯಲಿದೆ ಎಂದು ಸಂಚಾಲನ ಸಮಿತಿ ಮುಖಂಡ ಸುರೇಶ ಸ್ವಾಮಿರಾವ್ ತಿಳಿಸಿದರು.


ತಾಲ್ಲೂಕಿನ ಸಾಂಸ್ಕೃತಿಕ ಹಬ್ಬವಾಗಿ ಈ ಶರಾವತಿ ಹಿನ್ನೀರ ಹಬ್ಬ ನಡೆಯಲಿದೆ. ಸಂಜೆ 4 ಗಂಟೆಯಿಂದ ಸಂಭ್ರಮದಲ್ಲಿ ಹಬ್ಬದ ಆಚರಣೆ ನಡೆಯಲಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ಸವಕ್ಕೆ ಚಾಲನೆ ನೀಡುವರು. ಸಂಜೆ 5:30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಉದ್ಘಾಟಿಸುವರು. ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಇಂಧನ ಸಚಿವ ಸುನೀಲ್ ಕುಮಾರ್, ಕೆಪಿಸಿ ಎಂ.ಡಿ. ಶ್ರೀಕರ್, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಡಾ.ಜಿ.ಡಿ.ನಾರಾಯಣಪ್ಪ ಆಗಮಿಸುವರು ಎಂದು ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.


ಹೆಜ್ಜೆನಾದ ಮಂಗಳೂರು ತಂಡದಿಂದ ನೃತ್ಯ ವೈಭವ, ಝೀ ಕನ್ನಡ ಸರಿಗಮಪ ಖ್ಯಾತಿಯ ಸಾಗರದ ದಿಯಾ ಹೆಗಡೆ, ಸಾನ್ವಿಭಟ್ ಅವರಿಂದ ಸಂಗೀತ ಸಂಜೆ ನಡೆಯಲಿದೆ. ಅಹೋರಾತ್ರಿ ನಡೆಯುವ ಹಿನ್ನೀರ ಹಬ್ಬದಲ್ಲಿ ವಿಶೇಷ ಆಕರ್ಷಣೆಯಾಗಿ ಬಾಳೆಕೊಪ್ಪ, ಗುಳ್ಳಹಳ್ಳಿ, ಸಂಪಳ್ಳಿ, ಕಾರೆಹೊಂಡ ತಂಡಗಳಿಂದ ಬಳೆ ಕೋಲಾಟ ನಡೆಯಲಿದೆ.
ಹಬ್ಬದಲ್ಲಿ ಮಲೆನಾಡ ಭಾಗದ ವಿಶೇಷ ಖಾದ್ಯಗಳನ್ನು ಸವಿಯಲು ಅವಕಾಶ ಮಾಡಲಾಗಿದ್ದು ಇಲ್ಲಿ ಮಾರಾಟ ನಡೆಯಲಿದೆ ಎಂದರು.


ಈ ಭಾಗದ ಜನರ ಒತ್ತಾಸೆಯ ಪಟಗುಪ್ಪ ಸೇತುವೆ ನಿರ್ಮಾಣದಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ಅವರ ಪಾತ್ರ ಹಿರಿದು. ಇಲ್ಲಿನ ಮುಳುಗಡೆ ಸಂತ್ರಸ್ಥರು ಬಂದು ಸೇರಲು ಅವಕಾಶ ಆಗುವಂತ ಹಬ್ಬದ ಆಚರಣೆ ನಡೆಸಬೇಕು ಎಂಬುದು ಅವರ ಕಲ್ಪನೆ ಆಗಿದೆ. ಈ ಹಿಂದೆ ಆ ಪ್ರದೇಶದಲ್ಲಿ ಹೊಳೆಹಬ್ಬ ಆಚರಿಸಲಾಗುತ್ತಿತ್ತು. ಆ ಮಾದರಿಯಲ್ಲಿ ಹಿನ್ನೀರ ಹಬ್ಬ ಆಯೋಜನೆ ನಡೆಯಲಿದೆ. ಬೇರೆ ಕಡೆಗಳಲ್ಲಿರುವ ಇಲ್ಲಿನ ಮುಳುಗಡೆ ಸಂತ್ರಸ್ಥರು ಬಂದು ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ ಎಂದರು.


ಗೋಷ್ಟಿಯಲ್ಲಿ ಪ್ರಮುಖರಾದ ಎಂ.ಎನ್. ಸುಧಾಕರ್, ಗಣಪತಿ ಬೆಳಗೋಡು, ನಿತಿನ್ ನಗರ, ಮಂಡಾನಿ ಮೋಹನ್, ಚಾಲುಕ್ಯ ಬಸವರಾಜ್, ಗಣೇಶ್, ಗೇರುಪುರ ಗಣಪತಿ, ಕಾಪಿ ಗೋಪಾಲ್, ರಾಜು ಗೌಡ ಇದ್ದರು.

Leave A Reply

Your email address will not be published.

error: Content is protected !!