ಪಶ್ಚಿಮ ಘಟ್ಟಗಳ ವೈವಿದ್ಯತೆ ನಾಶದಿಂದ ಮನುಕುಲವೂ ಅಪಾಯದ ಅಂಚಿಗೆ ; ಕೆ. ಪಿ. ಕೃಷ್ಣಮೂರ್ತಿ
ಹೊಸನಗರ : ಪ್ರಕೃತಿ ಅತ್ಯಂತ ಸಹಜ ವಿಜ್ಞಾನದ ಮೂಲಕ ನಿರ್ಮಾಣಗೊಂಡಿದೆ. ಆದರೆ ಮನುಷ್ಯನ ಮಧ್ಯ ಪ್ರವೇಶದಿಂದಾಗಿ ಪ್ರಕೃತಿ ನಾಶವಾಗುತ್ತಿರುವುದು ಇಡೀ ಜೀವ ಸಂಕುಲದ ನಾಶಕ್ಕೆ ಮುನ್ನುಡಿ ಎಂದು ನಿವೃತ್ತ ಸೇನಾನಿ ಹಾಗೂ ಶ್ರೀ ವ್ಯಾಸ ಮಹರ್ಷಿ ಗುರುಕುಲದ ಮಾರ್ಗದರ್ಶಕ ಕೆ. ಪಿ. ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು.
ಶುಕ್ರವಾರ ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲದಲ್ಲಿ ದೊಂಬೆಕೊಪ್ಪ ಸಾರ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ
ಸಹ್ಯಾದ್ರಿ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೀವ ಸಂಕುಲದ ನಿರ್ಮಾಣ ಮತ್ತು ಬೆಳವಣಿಗೆಗೆ ಕಾರಣವಾದ ಪ್ರಕೃತಿ ನಿರ್ಮಾಣ ಸಾವಿರಾರು ವರ್ಷಗಳ ಪ್ರಕ್ರಿಯೆ. ಇಡೀ ಪ್ರಕೃತಿ ಸೃಷ್ಟಿಯೇ ಕೆಲವೊಮ್ಮೆ ವಿಜ್ಞಾನಕ್ಕೇ ಸವಾಲು ಎನ್ನುವಂತಿದೆ. ಆದರೆ ಅಂತ ಪ್ರಕೃತಿ ನಾಶದಿಂದ ಇಡೀ ಜೀವಕುಲವೇ ನಾಶವಾಗುವ ಅಪಾಯವಿದೆ. ಇದರಲ್ಲಿ ನಮ್ಮ ಪಶ್ಚಿಮ ಘಟ್ಟಗಳು ಮೊದಲ ಸಾಲಿನಲ್ಲಿ ಇರುವುದು ಅತ್ಯಂತ ಆತಂಕದ ವಿಚಾರ ಎಂದು ಅವರು ಹೇಳಿದರು.
ಪಶ್ಚಿಮ ಘಟ್ಟಗಳ ಉಳಿವಿನ ಬಗ್ಗೆ ಅರಿವು ಮೂಡಿಸುವುದು ಸರ್ಕಾರ, ಸಂಘ ಸಂಸ್ಥೆಗಳ ಕಾರ್ಯವಾಗಬೇಕಿದೆ. ಆದರೆ ಅದು ಇದುವರೆಗೆ ಸಮರ್ಥವಾಗಿ ಕೈಗೂಡಿರಲಿಲ್ಲ. ಇದೀಗ ಸಾರ ಸಂಸ್ಥೆ ಅಂತ ಮಹತ್ವದ ಕಾರ್ಯಕ್ಕೆ ಕೈ ಹಾಕಿರುವುದು ನಿಜಕ್ಕೂ ಪ್ರಶಂಸನೀಯ ಹಾಗೂ ತುರ್ತಿನ ಕಾರ್ಯ ಎಂದು ಕೃಷ್ಣ ಮೂರ್ತಿ ಹೇಳಿದರು.
ಸಹಜ ಪ್ರಕೃತಿಗೆ ವಿರುದ್ಧವಾಗಿ ಇಂದು ಮನುಷ್ಯ ಕೃತಕ ಪರಿಸರ ನಿರ್ಮಾಣ ಮಾಡುತ್ತಿರುವುದು ಸಾವಿರಾರು ವರ್ಷದ ಪ್ರಕೃತಿ ಮೂಲ ತತ್ವಕ್ಕೆ ವಿರುದ್ಧವಾಗಿದೆ ಎಂದು ಶ್ರೀ ವ್ಯಾಸ ಮಹರ್ಷಿ ಗುರುಕುಲದ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ್ ಬ್ಯಾಣದ ಅಭಿಪ್ರಾಯಪಟ್ಟರು.
ಇಂತಹ ಅಸಹಜ ಪ್ರಕೃತಿ ನಿರ್ಮಾಣ ಕೇವಲ ಜೀವ ಸಂಕುಲದ ಆಯಸ್ಸು ಮಾತ್ರ ಕಡಿಮೆ ಮಾಡುತ್ತಿಲ್ಲ. ಬದಲಿಗೆ ಇಡೀ ಭೂಮಿಯ ಆಯಸ್ಸನ್ನೇ ಕಡಿಮೆ ಮಾಡುತ್ತಿದೆ. ಇದರಿಂದ ಇಡೀ ಜೀವ ಜಗತ್ತು ನಾಶವಾದರೂ ಅಚ್ಚರಿ ಇಲ್ಲ ಎಂದರು.
ಸಹ್ಯಾದ್ರಿ ಪರ್ವತ ಶ್ರೇಣಿಗಳು ವಿವಿಧ ಯೋಜನೆ ನಿರ್ಮಾಣ ಮತ್ತು ಮನುಷ್ಯ ಶ್ರೀಮಂತಿಕೆಗೆ ಸಿಲುಕಿ ನಲಗುತ್ತಿವೆ ಎಂದು ಸಹ್ಯಾದ್ರಿ ಸಂವಾದ ಕಾರ್ಯಕ್ರಮದ ಸಂಚಾಲಕ ಧನುಷ್ಕುಮಾರ್ ಅಭಿಪ್ರಾಯಪಟ್ಟರು.

ಸಹ್ಯಾದ್ರಿ ಸಂವಾದದ ಮೂಲಕ ನಿಜವಾದ ಪ್ರಕೃತಿ ರಕ್ಷಕರಾದ ಮಕ್ಕಳನ್ನು ತಲುಪುವುದು ಮತ್ತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ. ಮಕ್ಕಳೆಲ್ಲರೂ ಪ್ರಕೃತಿಗಾಗಿ ಜೀವ ವಿರೋಧಿ ಬದುಕು ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಅವರು ಕರೆನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿ ಬಿ. ಹೆಚ್.
ಸಾರ ಸಂಸ್ಥೆಯ ಶಿವಕುಮಾರ್, ಗುರುಕುಲದ ಮುಖ್ಯ ಶಿಕ್ಷಕ ಶಿವರಾಜ್, ಶಿಕ್ಷಕರಾದ ಸುಧಾ ಸೋರೆಕೊಪ್ಪ, ಪಾವನಿ, ಸುಧಾ ಮೊದಲಾದವರು ಉಪಸ್ಥಿತರಿದ್ದರು.
ಮಕ್ಕಳು ಒಂದು ಗಂಟೆಗಳ ಕಾಲ ಸಹ್ಯಾದ್ರಿ ಚಿತ್ರ ವೀಕ್ಷಿಸಿ, ಆಯೋಜಕರೊಂದಿಗೆ ಸಂವಾದ ಮೂಲಕ ಸಹ್ಯಾದ್ರಿಯ ಮಹತ್ವದ ಬಗ್ಗೆ ಚರ್ಚಿಸಿದರು.