ಪ್ರತಿಯೊಬ್ಬರು ರಕ್ತದಾನದ ಮಹತ್ವ ಅರಿಯಬೇಕಿದೆ ; ಪಿಎಸ್‌ಐ ಪ್ರವೀಣ್

0 0


ಹೊಸನಗರ : ಯಾವುದೇ ಅಪಘಾತ, ಅನಾಹುತದಂತಹ ತುರ್ತು ಸಂದರ್ಭದಲ್ಲಿ ವ್ಯಕ್ತಿಯ ಜೀವ ಉಳಿಸಲು ರಕ್ತದ ಅಗತ್ಯತೆ ಅನಿವಾರ್ಯವಾಗಿದೆ. ಓರ್ವ ಆರೋಗ್ಯವಂತ ಮನುಷ್ಯ ವರ್ಷದಲ್ಲಿ ಕನಿಷ್ಟ ಎರಡು ಬಾರಿ ರಕ್ತದಾನ ಮಾಡಬಹುದು. ಇದರಿಂದ ಜೀವ ಉಳಿಸಿದ ಸಾರ್ಥಕ ಭಾವ ಹೊಂದಬಹುದು. ಯುವಸಮೂಹ ರಕ್ತದಾನ ಕುರಿತು ಯಾವ ಹಿಂಜರಿಕೆ ಹೊಂದದೆ ರಕ್ತದಾನಕ್ಕೆ ಮುಂದಾಗಬೇಕು ಎಂದು ರಿಪ್ಪನ್‌ಪೇಟೆ ಶ್ರೀ ನಂದಿ ಹಾಸ್ಪಿಟಲ್‌ನ ಡಾ. ವೀರೇಶ್ ತಿಳಿಸಿದರು.


ಜಿಲ್ಲಾ ಮೆಗ್ಗಾನ್ ಸರಕಾರಿ ಆಸ್ಪತ್ರೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ರಿಪ್ಪನ್‌ಪೇಟೆಯ ಶ್ರೀ ನಂದಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ರಕ್ತದಾನ ಮಾಡುವ ಮೂಲಕ ವ್ಯಕ್ತಿ ಸಂಭವನೀಯ ಹೃದಯಾಘಾತ, ರಕ್ತದೊತ್ತಡ, ಲಿವರ್ ಸಮಸ್ಯೆ ಸೇರಿದಂತೆ ಹಲವು ಬಗೆಗೆ ರೋಗಗಳಿಂದ ಮುಕ್ತನಾಗಲು ಸಾಧ್ಯವಿದ್ದು, ಇದಕ್ಕೆ ನಿರಂತರ ರಕ್ತದಾನವೇ ತಕ್ಕ ಉತ್ತರವಾಗಿದೆ ಎಂದರು.
ಸ್ವಯಂ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ಪೊಲೀಸ್ ಠಾಣಾಧಿಕಾರಿ ಎಸ್.ಪಿ. ಪ್ರವೀಣ್ ಮಾತನಾಡಿ, ಪ್ರತಿಯೊಬ್ಬರು ರಕ್ತದ ಮಹತ್ವ ಅರಿಯಬೇಕು. ರಕ್ತದ ಅಗತ್ಯತೆ ಮನಗಾಣುವ ಮೂಲಕ ಯುವ ಜನತೆ ರಕ್ತದಾನದಂತಹ ಮಹತ್ಕಾರ್ಯಕ್ಕೆ ಹೆಚ್ಚು ಹೆಚ್ಚು ಕೈ ಜೋಡಿಸಬೇಕು. ಇದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗಲಿದೆ ಎಂದು ಸಾರ್ವಜನಿಕರಲ್ಲಿ ವಿನಂತಿಸಿದರು.


38 ಬಾರಿ ರಕ್ತದಾನ ಮಾಡಿರುವ, ಪರಿಸರಾಸಕ್ತ ಹೆಡ್ ಕಾನ್‌ಸ್ಟೇಬಲ್ ಹಾಲೇಶಪ್ಪ ಮಾತನಾಡಿ, ಪೊಲೀಸರ ಆರೋಗ್ಯ ಸುಸ್ಥಿತಿ ಕಾಯ್ದುಕೊಳ್ಳುವ ಮೂಲಕ ಸಮಾಜದ ಅಗತ್ಯತೆಯನ್ನು ಪೂರೈಸುವುದು ಈ ಶಿಬಿರದ ಮೂಲ ಉದ್ದೇಶವಾಗಿದ್ದು, ಇಲಾಖೆಯ ಮೇಲಾಧಿಕಾರಿಗಳ ಸಂಪೂರ್ಣ ಬೆಂಬಲ ಈ ಕಾರ್ಯಕ್ರಮಕ್ಕಿದೆ ಎಂದರು.


ಆಸ್ಪತ್ರೆಯ ಮಾಲೀಕರಾದ ಗರ್ತಿಕೆರೆ ಸಚಿನ್ ಸಹೋದರರು, ಡಾ. ಸುಲೇಖಾ, ಪೊಲೀಸ್ ಸಿಬ್ಬಂದಿಗಳಾದ ಉಮೇಶ್, ವಿಕ್ಟರ್, ಗ್ರಾ.ಪಂ. ಸದಸ್ಯ ನಿರೂಪ್, ಗರ್ತಿಕೆರೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಾಘವೇದ್ರ. ಸಮಾಜ ಸೇವಕಿ ಶೀಲಾ ಸೇರಿದಂತೆ ಹಲವರು ಸಾರ್ವಜನಿಕರು ಶಿಬಿರದಲ್ಲಿ ಉಪಸ್ಥಿತರಿದ್ದು, ರಕ್ತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆ ನೀಡಿದರು.

ಒಟ್ಟಾರೆ 60 ಯೂನಿಟ್ ರಕ್ತ ಸಂಗ್ರಹವಾಯಿತು. ತೀರ್ಥಹಳ್ಳಿ ಡಿವೈಎಸ್‌ಪಿ ಅವರ ಮಾರ್ಗದರ್ಶನ, ಪಿಎಸ್‌ಐ ಪ್ರವೀಣ್ ನೇತೃತ್ವ ಹಾಗೂ ಹೆಡ್‌ಕಾನ್ಸ್‌ಟೇಬಲ್ ಹಾಲೇಶಪ್ಪ ಅವರ ಮುಂದಾಳತ್ವದಲ್ಲಿ ಈ ರಕ್ತದಾನ ಶಿಬಿರವು ಯಶಸ್ವಿಯಾಗಿ ಸಂಪೂರ್ಣಗೊಂಡಿತು.

Leave A Reply

Your email address will not be published.

error: Content is protected !!