ಮೀನುಗಾರ ಸಮುದಾಯಕ್ಕೆ ರಾಜಕೀಯವಾಗಿ ಕಡೆಗಣನೆ ; ಬಿ.ಡಿ.ರವಿಕುಮಾರ್

0 0


ಹೊಸನಗರ: 39 ಒಳಪಂಗಡಗಳನ್ನು ಹೊಂದಿರುವ ಮೀನುಗಾರರ ಸಮುದಾಯವನ್ನು ಪರಿಶಿಷ್ಠ ಪಂಗಡ ಗುಂಪಿಗೆ ಸೇರ್ಪಡೆಗೊಳಿಸಬೇಕು ಎಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಡಿ.ರವಿಕುಮಾರ್ ಆಗ್ರಹಿಸಿದ್ದಾರೆ.


ಅವರು ಬುಧವಾರ ಪಟ್ಟಣದ ಶೀತಲ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಮೊಗವೀರ, ಬೆಸ್ತ, ಕೋಲಿ, ಕಬ್ಬಲಿಗ, ಅಂಬಿಗ, ಗಂಗಾಮತಸ್ಥ ಮೊದಲಾದ ಹೆಸರಿನಿಂದ ಕರೆಯಲ್ಪಡುವ ಮೀನುಗಾರರ ಸಮುದಾಯ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದೆ. ರಾಜ್ಯದ ಎಲ್ಲಾ ಜಿಲ್ಲೆಗಳೂ ಸೇರಿರಾಜ್ಯದಲ್ಲಿ ಸುಮಾರು 70 ಲಕ್ಷಕ್ಕಿಂತ ಹೆಚ್ಚು ಮೀನುಗಾರ ಸಮುದಾಯದ ಮಂದಿ ಇದ್ದಾರೆ. ನಮ್ಮ ಸಮುದಾಯವನ್ನು ಎಸ್‌ಟಿ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿದ್ದು, ಇದರ ಪರಿಣಾಮವಾಗಿ ರಾಜ್ಯ ಸರ್ಕಾರ ಮೂರು ಬಾರಿ ಎಸ್‌ಟಿ ಮೀಸಲಾತಿಗೆ ಪ್ರಸ್ತಾವನೆ ಕಳಿಸಿದೆ. ಆದರೆ, ಕೇಂದ್ರ ಸರಕಾರ ಈ ಪ್ರಸ್ತಾವನೆಯನ್ನು ಇನ್ನೂ ಅನುಮೋದನೆಗೊಳಿಸಿಲ್ಲ. ಇದರಿಂದ ಎಸ್‌ಟಿ ಮೀಸಲಾತಿ ವಂಚಿತ ಸಮುದಾಯದ ಜನರಿಗೆ ಅನ್ಯಾಯವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.


ಒಳನಾಡು ಮೀನುಗಾರರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮೀನು ಹಿಡಿಯುವ ಗುತ್ತಿಗೆ ಹಕ್ಕಿನ ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ. ಇದನ್ನು ಪುನರ್‌ ಸ್ಥಾಪಿಸಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.


ರಾಷ್ಟ್ರೀಯ ಪಕ್ಷಗಳಲ್ಲಿ ಹಲವು ವರ್ಷಗಳಿಂದ ಜನಾಂಗದ ಜನರು ಕಾರ್ಯಕರ್ತರಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಆಕಾಂಕ್ಷಿಗಳಿಗೆ ಚುನಾವಣೆ ಸಮಯದಲ್ಲಿ ಸ್ಪರ್ಧೆಗೆ ಅವಕಾಶ ನೀಡಲಾಗುತ್ತಿಲ್ಲ. ಇದರಿಂದ ರಾಜಕೀಯ ಕ್ಷೇತ್ರದಲ್ಲಿಯೂ ಸಮುದಾಯದ ವ್ಯಕ್ತಿಗಳು ಹಿಂದುಳಿಯುವಂತಾಗಿದೆ. ಸೂಕ್ತ ಸ್ಥಾನಮಾನ ನೀಡಲು ರಾಜಕೀಯ ಪಕ್ಷಗಳು ಮುಂದಾಗಬೇಕು. ಚುನಾವಣೆ ಬಂದಾಗ ಬಳಸಿಕೊಂಡು ಬಳಿಕ ನಿರ್ಲಕ್ಷ್ಯ ತೋರುವ ಮನೋಭಾವ ಅಂತ್ಯಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದರು.


ಸಂಘದರಾಜ್ಯ ಪ್ರಮುಖರಾದ ವೆಂಕಟೇಶ್ ಚಂದಳ್ಳಿ, ಧರ್ಮರಾವ್, ತ.ಮ.ನರಸಿಂಹ, ಗಣಪತಿ ಎಡೇಹಳ್ಳಿ, ಉಮೇಶ್ ಮಳವಳ್ಳಿ, ಗಣಪತಿ, ನಾಗೇಂದ್ರ ಹುಳಿಗದ್ದೆ ಮತ್ತಿತರರು ಗೋಷ್ಠಿಯಲ್ಲಿ ಹಾಜರಿದ್ದರು.

Leave A Reply

Your email address will not be published.

error: Content is protected !!