ಯುವ ವರ್ತಕ ಪೊಲೀಸ್ ವಶಕ್ಕೆ ; ತಾಲೂಕು ಬ್ರಾಹ್ಮಣ ಸಭಾ ಖಂಡನೆ

0 0

ಹೊಸನಗರ : ತಾಲೂಕಿನ ಕಾರಣಗಿರಿಯ ಯುವ ವರ್ತಕ, ಬಿಜೆಪಿ ಕಾರ‍್ಯಕರ್ತ ವಿನಾಯಕ ಅರೇಮನೆ ಅವರನ್ನು ಪೊಲೀಸರು ವಶಕ್ಕೆ ಪಡೆದ ಕ್ರಮವನ್ನು ತಾಲೂಕು ಬ್ರಾಹ್ಮಣ ಮಹಾಸಭಾ ತೀವ್ರವಾಗಿ ಖಂಡಿಸಿದೆ.


ಈ ಬಗ್ಗೆ ಮಹಾಸಭಾದ ಕಾರ‍್ಯದರ್ಶಿ ಕೆ.ಎನ್.ಸ್ವರೂಪ್ ಪತ್ರಿಕಾ ಹೇಳಿಕೆ ನೀಡಿದ್ದು, ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ಪ್ರಚಾರ ಸಭೆ ನಡೆಯುವ ವೇಳೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ವಿನಾಯಕ ಅರೇಮನೆ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಇದನ್ನು ಗಮನಿಸಿದ ಪೊಲೀಸರು ವಿನಾಯಕ ಅವರ ಮನೆಗೆ ತೆರಳಿ ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಬಿಜೆಪಿ ಪ್ರಚಾರ ಸಭೆ ನಡೆಯುವ ವೇಳೆ ಸುಮಾರು 4 ಗಂಟೆಗಳ ಕಾಲ ಅವರನ್ನು ಠಾಣೆಯಲ್ಲಿಯೇ ಇರಿಸಿಕೊಂಡಿದ್ದಾರೆ. ತಾನು ಯಾವುದೇ ರೀತಿ ಪ್ರತಿಭಟನೆ ಮಾಡುವುದಿಲ್ಲ ಎಂದು ಹೇಳಿದ ಮೇಲೂ ಪೊಲೀಸರು ಅವರನ್ನು ಬಿಟ್ಟಿಲ್ಲ. ಸಾಮಾಜಿಕ ಸಮಸ್ಯೆ ಕುರಿತು ಧ್ವನಿ ಎತ್ತುವುದೇ ಅಕ್ಷಮ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿರುವುದು ವಿಪರ‍್ಯಾಸ. ದಬ್ಬಾಳಿಕೆಯ ರಾಜಕಾರಣ ಮಿತಿ ಮೀರಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವಿನಾಯಕ ಅರೇಮನೆ ಅವರು ಸ್ವತಃ ಬಿಜೆಪಿ ಕಾರ‍್ಯಕರ್ತರೂ ಆಗಿದ್ದಾರೆ. ಹಲವಾರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಇಂತಹವರ ವಿರುದ್ಧ ಸಹಾ ಇಷ್ಟು ಕೀಳಾಗಿ ನಡೆಸಿಕೊಂಡಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಎನ್. ಸ್ವರೂಪ್


ಸುಮಾರು 10 ವರ್ಷಗಳ ಹಿಂದೆಯೇ ಹೊಸನಗರದ ವಿದ್ಯುತ್ ಕೇಂದ್ರ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈವರೆಗೂ ಕಾಮಗಾರಿ ಆಗಿಲ್ಲ. ನಾಡಿಗೆ ಬೆಳಕು ಕೊಟ್ಟ ಹೊಸನಗರ ತಾಲೂಕಿನ ಜನತೆ ವಿದ್ಯುತ್ ಸಮಸ್ಯೆಯಿಂದ ನಲುಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಜನಪ್ರತಿನಿಗಳು ಈ ವಿಷಯದಲ್ಲಿ ಆಸಕ್ತಿ ತೋರದಿರುವುದು ಸಮಸ್ಯೆಯನ್ನು ಜ್ವಲಂತವಾಗಿರಿಸಿದೆ. ಅನುಭವಿಸುತಿರುವ ತೊಂದರೆಗಳ ಕುರಿತು ದ್ವನಿ ಎತ್ತುವುದು ತಪ್ಪೇ ಎಂದು ಅವರು ಪ್ರಶ್ನಿಸಿದರು.

ಟಿ.ಆರ್.ಕೃಷ್ಣಪ್ಪ ಕೂಡಾ ವಶಕ್ಕೆ:
ಇದೇ ವೇಳೆ ಅರಸಾಳಿನಲ್ಲಿ ರೈಲು ನಿಲುಗಡೆ ಕೋರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ಬಂದಿದ್ದ ಸಾಮಾಜಿಕ ಹೋರಾಟಗಾರ ರಿಪ್ಪನ್‌ಪೇಟೆಯ ಟಿ.ಆರ್.ಕೃಷ್ಣಪ್ಪ ಅವರನ್ನು ಸಹಾ ಪೊಲೀಸರು ವಶಕ್ಕೆ ಪಡೆದರು. ಸಭೆ ಮುಗಿದ ಬಳಿಕ ಬಿಡುಗಡೆಗೊಳಿಸಲಾಯಿತು.

Leave A Reply

Your email address will not be published.

error: Content is protected !!