ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೊಸನಗರ ಬಿಜೆಪಿ ರೈತ ಮೋರ್ಚದಿಂದ ಪ್ರತಿಭಟನೆ ; ಮನವಿ ಸಲ್ಲಿಕೆ

0 0


ಹೊಸನಗರ: ರಾಜ್ಯದಲ್ಲಿ ಮಳೆ ಅಭಾವದಿಂದ ಬರಗಾಲ ಸೃಷ್ಠಿಯಾಗಿದೆ ವಿದ್ಯುತ್ ಈಗಾಗಲೇ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ‌. ರಾಜ್ಯ ಸರ್ಕಾರ ರೈತಪರ ಯೋಜನೆಗಳನ್ನು ರದ್ದು ಪಡಿಸುತ್ತಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು ರಾಜ್ಯ ಸರ್ಕಾರದ ದುರಡಾಳಿತದ ವಿರುದ್ಧ ಹೊಸನಗರ ತಾಲ್ಲೂಕು ಬಿಜೆಪಿ ಯುವ ರೈತ ಮೋರ್ಚ ಅಧ್ಯಕ್ಷ ನಾಗರಾಜ್‌ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಹೊಸನಗರ ತಹಶೀಲ್ದಾರ್ ರಾಕೇಶ್‌ರವರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರಕ್ಕೆ ಕಳುಹಿಸಲು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲದ ಸಮಸ್ಯೆ ಉಂಟಾಗಿದೆ. ರಾಜ್ಯದ ಎಲ್ಲ ಜಲಾಶಯಗಳಲ್ಲಿ ಪ್ರತಿ ವರ್ಷ ಸಂಗ್ರಹವಾಗಬೇಕಿದ್ದ ನೀರಿನ ಪ್ರಮಾಣವೂ ಕುಸಿತ ಕಂಡಿದ್ದು ಇದರಿಂದಾಗಿ ರೈತರ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವ ಅಂತಕ ಉಂಟಾಗಲಿದೆ. ಅದರ ಜೊತೆಗೆ ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಅಭಾವದಿಂದ ರೈತರ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕಾಗಿತ್ತು ಆದರೆ ಇತ್ತೀಚೆಗೆ ನಿಯಮಿತ ಲೋಡ್ ಶೆಡಿಂಗ್‌ಗಳ ಪರಿಣಾಮ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಹೀಗಾಗಿ ಬರಗಾಲಕ್ಕೆ ತುತ್ತಾಗಿರುವ ರೈತರು ಈಗಾಗಲೇ ಶೇ.80 ರಷ್ಟು ಬೆಳೆಗಳನ್ನು ಬಿತ್ತನೆ ಮಾಡಿದ್ದು ಅವುಗಳನ್ನು ರಕ್ಷಿಸಿಕೊಳಲು ವಿದ್ಯುತ್ ಸಮಸ್ಯೆ ಉಂಟಾಗಿ ಪರದಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಅಲ್ಲದೇ ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಲವಾರು ರೈತಪರ ಯೋಜನೆಗಳಾದ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆ, ಶ್ರಮಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋ ಶಾಲೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಈ ಎಲ್ಲ ಯೋಜನೆಗಳನ್ನು ರದ್ಧು ಮಾಡುವ ಮೂಲಕ ಕೃಷಿ ಕ್ಷೇತ್ರವನ್ನು ನಿರ್ಲಕ್ಷ್ಯಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 42 ಜನ ರೈತರು ಆತ್ಮಹತ್ಯೆ ಪ್ರಕರಣಗಳ ವರದಿಯಾಗಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ ಎಂದು ಆರೋಪಿಸಿ ಮನವಿ ಪತ್ರ ಸಲ್ಲಿಸಿದರು.


ಈ ಪ್ರತಿಭಟನೆ, ಮನವಿ ಪತ್ರ ನೀಡುವ ಸಂದರ್ಭದಲ್ಲಿ ಕಟ್ಟೆ ಮಂಜುನಾಥ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಗಣಪತಿ ಬಿಳಗೋಡು, ರೈತ ಮೋರ್ಚ ಅಧ್ಯಕ್ಷ ನಾಗರಾಜ್ ಗೌಡ, ಪ್ರಧಾನ ಕಾರ್ಯದರ್ಶಿ ಚಿಟ್ಟೆಗದ್ದೆ ಪುರುಷೋತ್ತಮ, ಗ್ರಾಮ ಪಂಚಾಯತಿ ಸದಸ್ಯ ಚಿಕ್ಕನಕೊಪ್ಪ ಶ್ರೀಧರ, ಶ್ರೀಧರ ಸುಣ್ಣಕಲ್, ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಮೇಶ್ ಎಸ್, ಶಿವಾನಂದ ಗೌಡ, ನಾಗರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!