ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ ;
ಅಂಗನವಾಡಿ ಕಾರ್ಯಕರ್ತೆಯರಿಂದ ಸರ್ಕಾರಕ್ಕೆ ಮನವಿ

0 0


ಹೊಸನಗರ : ಇಲಾಖೆಯ ಮಾಹಿತಿಯನ್ನು ದಾಖಲಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಹಿಂದೆ ನೀಡಿದ್ದ ಕಳಪೆ ಗುಣಮಟ್ಟದ ಮೊಬೈಲ್ ಫೋನ್ ಅನ್ನು ವಾಪಸ್ಸು ಪಡೆದು, ಗುಣಮಟ್ಟದ ಹೊಸ ಮೊಬೈಲ್ ಅಥವಾ ಟ್ಯಾಬ್ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ತಹಶೀಲ್ದಾರ್ ಮೂಲಕ ಹೊಸನಗರ ತಾಲೂಕು ಅಂಗನವಾಡಿ ಕಾರ್ಯಕತೆಯರ ಹಾಗೂ ಸಹಾಯಕಿಯರ ಸಂಘದ ಸದಸ್ಯರು ಅಧ್ಯಕ್ಷೆ ಶಶಿಕಲಾ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.


ಈ ವೇಳೆ ಸಂಘದ ರಾಜ್ಯ ಸಂಚಾಲಕ ರವೀಂದ್ರ ಸಾಗರ್ ಮಾತನಾಡಿ, ಆರೋಗ್ಯ ಇಲಾಖೆಯೂ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಯ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಿಸಿಕೊಳ್ಳಬಾರದು. ಕೂಡಲೇ ಹಳೇ ಮೊಬೈಲ್ ಫೋನ್ ಹಿಂಪಡೆದು, ಗುಣಮಟ್ಟದ ಟ್ಯಾಬ್ ಅಥವಾ ಹೊಸ ಮೊಬೈಲ್ ನೀಡಬೇಕು. ಇದರಿಂದ ಒತ್ತಡ ಇಲ್ಲದೆ ಸರ್ಕಾರಿ ದಾಖಲೆಗಳನ್ನು ಅಪ್ ಲೋಡ್ ಮಾಡಲು ಸಹಕಾರಿಯಾಗಲಿದೆ. ಕಳಪೆ ಗುಣಮಟ್ದದ ಮೊಟ್ಟೆ ಸರಬರಾಜು ಮಾಡುತ್ತಿರುವ ಟೆಂಡರ್ ಅನ್ನು ಕೈಬಿಟ್ಟು, ಮೊಟ್ಟೆ ಖರೀದಿಗೆ ಬಾಲ ವಿಕಾಸ ಸಮಿತಿಗೆ ವಹಿಸಬೇಕು. ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಾಕಿ ಇರುವ ಬಾಡಿಗೆ ಹಣವನ್ನು ಕೂಡಲೇ ಪಾವತಿಮಾಡಲು ಕ್ರಮಕೈಗೊಳ್ಳಬೇಕು. ಗ್ಯಾಸ್ ಬಿಲ್, ವಿದ್ಯುತ್ ಬಿಲ್ ಹಾಗೂ ಸುಚಿತ್ವಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗಾಗಿ ಸಾಧಿಲ್ವಾರ್, ಪ್ಲಕ್ಸಿ, ಇಸಿಸಿ ಹಣ ಕೂಡಲೇ ಬಿಡುಗಡೆ ಮಾಡಬೇಕು. ದೀರ್ಘಕಾಲ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಅಧಿಕಾಗಳು, ಮೇಲ್ವಿಚಾರಕರನ್ನು ವರ್ಗಾವಣೆ ಮಾಡಬೇಕು. ಸರ್ಕಾರ ಈಗಾಗಲೇ ತನ್ನ ಘೋಷಿಸಿದ್ದ 6ನೇ ಗ್ಯಾರಂಟಿ ಆದ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಮಾಸಿಕ ವೇತನ ರೂ. 15 ಸಾವಿರ ನೀಡಬೇಕು. ರೂ. 10 ಸಾವಿರ ಗೌರವಧನ ಹೆಚ್ಚಿಸಬೇಕು, ನಿವೃತ್ತಿಗೆ ರೂ. 3 ಲಕ್ಷ ಹಣ ಇಡಿಗಂಟು ನೀಡಬೇಕು. ಅಲ್ಲದೆ, ಮಾಸಿಕ ರೂ. 5 ಸಾವಿರ ಪೆನ್ಷನ್ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಅವರು ಒತ್ತಾಯಿಸಿದರು.


ರಾಜ್ಯ ಫೆಡರೇಷನ್‌ ಆದೇಶದಂತೆ ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದು, ಸರ್ಕಾರ ಈ ಕುರಿತು ಸೂಕ್ತವಾಗಿ ಸ್ಪಂದಿಸದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಸಂಘದ ವತಿಯಿಂದ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.


ಈ ವೇಳೆ ಸಂಘದ ತಾಲೂಕು ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಜಯಮ್ಮ, ಕಾರ್ಯದರ್ಶಿ ಎನ್.ಎಸ್. ಗೀತಾ, ಖಜಾಂಚಿ ಹೆಚ್.ಜಿ.ಉಮಾ, ನಾಗರತ್ನ, ರಜತ ಶ್ರೀಪಾಲ್, ಗೀತಾಂಜಲಿ, ರತ್ನ, ಸುಜಾತ, ವೀಣಾ, ಮೊದಲಾದವರು ಇದ್ದರು.

Leave A Reply

Your email address will not be published.

error: Content is protected !!