ಶುರುವಾಗಿದೆ ಬರದ ದಿನಗಣನೆ ;
ಅತೀ ಹೆಚ್ಚು ಮಳೆ ಬೀಳುವ ಹೊಸನಗರದಲ್ಲೀಗ ಕುಡಿಯುವ ನೀರಿಗೆ ಬರ !!

0 1

ಹೊಸನಗರ: ಅತೀ ಹೆಚ್ಚು ಮಳೆ ಬೀಳುವ ಪ್ರದೇಶವೆಂಬ ಖ್ಯಾತಿ ಹೊತ್ತ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿದೆ. ಜಲಾಶಯಗಳ ನಿರ್ಮಾಣಕ್ಕೆ ತನ್ನೆಲ್ಲವನ್ನು ಧಾರೆ ಎರೆದು ಕೊಟ್ಟ ಹೊಸನಗರದಲ್ಲಿ ಇಂದು ಬರದ ಭವಣೆ ಶುರುವಾಗಿದೆ.


ಮುಳುಗಡೆ ನೆಂಟಸ್ಥನ ಹೊಂದಿದ ಮಲೆನಾಡ ನಡುಮನೆ ಬಯಲು ಸೀಮೆಯಂತಾಗಿ ಟ್ಯಾಂಕರ್ ಮೂಲಕ ನೀರುಣಿಸುವ ದಿನ ಬಂದಿದೆ. ತಾಲ್ಲೂಕಿನ ಹಲವೆಡೆ ನೀರಿನ ಬರ ಮೆಲ್ಲನೆ ಕಾಲಿಟ್ಟಿದ್ದು ತನ್ನ ಗತಿಯನ್ನು ತೀವ್ರಗೊಳಿಸಿದೆ.
ಕಳೆದ ವರ್ಷ ಈ ತಿಂಗಳಿನಲ್ಲಿ ನೀರಿನ ಕೊರತೆ ತಾಂಡವವಾಡಿತ್ತು. ಒಟ್ಟು 199 ಹಳ್ಳಿಗಳಲ್ಲಿ 20 ಹಳ್ಳಿಗಳಲ್ಲಿ ನೀರಿನ ಬವಣೆ ಹೆಚ್ಚಾಗಿ ಕಾಡಿತ್ತು. ಅತೀ ಹೆಚ್ಚು ಮಳೆ ಬೀಳುವ ಹುಲಿಕಲ್‌ನಲ್ಲೂ ನೀರಿಗಾಗಿ ಪರದಾಟ ಕಂಡು ಬಂದಿದ್ದು ವಿಶೇಷವಾಗಿತ್ತು.
ಆದರೆ ಈ ವರ್ಷವೂ ಅಲ್ಲಲ್ಲಿ ನೀರಿನ ಸಮಸ್ಯೆ ಇಣುಕುತ್ತಿದೆ.


ಮುಳುಗಡೆ ನೆಂಟಸ್ಥನ:
ಇಲ್ಲಿ ಮುಳುಗಡೆ ನೆಂಟಸ್ಥನ ಉಪ್ಪಿಗೆ ಬರ. ತಾಲ್ಲೂಕನ್ನು ನಾಲ್ಕು ಜಲಾಶಯಗಳ ಹಿನ್ನೀರು ‘ಆಪೋಶನ’ ತೆಗೆದುಕೊಂಡಿದೆ. ಆದರೂ ಇಲ್ಲಿನ ಸಂತ್ರಸ್ಥ ಜನತೆಗೆ ಕುಡಿಯುವ ನೀರಿಲ್ಲ!.
ಲಿಂಗನಮಕ್ಕಿ, ವಾರಾಹಿ, ಚಕ್ರಾ, ಸಾವೇಹಕ್ಕಲು ಜಲಾಶಯಗಳ ಹಿನ್ನೀರು ನಗರ ಮತ್ತು ಕಸಬಾ ಹೊಬಳಿಯನ್ನು ಆವರಿಸಿದೆ. ‘ಮುಳುಗಡೆ’ ಇಲ್ಲಿನ ಜನರ ಬದುಕನ್ನು ಕಸಿದುಕೊಂಡಿದೆ. ಸುತ್ತಲೂ ಹಿನ್ನೀರು ಆವರಿಸಿದ್ದರೂ ನೀರು ಇಳಿದ ನಂತರ ಕುಡಿಯುವ ನೀರಿಗೆ ಪರದಾಟ ತಪ್ಪಿಲ್ಲ. ನಾಲ್ಕು ಜಲಶಯಗಳ ನೆಲವೀಡು ನಗರ ಹೋಬಳಿಯಲ್ಲಿ ನೀರಿನ ಸಮಸ್ಯೆ ಎದ್ದಿದೆ.


ಅತೀ ಹೆಚ್ಚು ಮಳೆ:
ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆ ಆಗುತ್ತಿದೆ. ವಾರ್ಷಿಕ ವಾಡಿಕೆ ಮಳೆ 2890 ಮಿ.ಮೀ. ಆದರೆ 4840 ಮಿಮೀ ಗೂ ಹೆಚ್ಚು ಮಳೆ ಬಿದ್ದಿದೆ. ಸುತ್ತಲೂ ಮುಳುಗಡೆ ಆವರಿಸಿರುವ ಅಲಗೇರಿಮಂಡ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಟ್ರ್ಯಾಕ್ಟರ್ ಬಳಸಿ ಪೂರೈಸಲಾಗುತ್ತಿದೆ.


ಕೈಕೊಟ್ಟ ನೀರಿನ ಮೂಲ :
ಶರಾವತಿ, ಕುಮುದ್ವತಿ, ವಾರಾಹಿ ಮತ್ತಿತರ ಹೊಳೆ ಮೈದುಂಬಿ ಹರಿದರೂ ಬೇಸಿಗೆಯಲ್ಲಿ ಕೈಕೊಡುತ್ತವೆ. ಪ್ರತಿ ವರ್ಷ ಏಪ್ರಿಲ್ ಅಂತ್ಯಕ್ಕೆ ಹೊಳೆ ಬತ್ತಿದರೆ ಈ ವರ್ಷ ಮಾರ್ಚ್‌ನಲ್ಲೇ ಬರಡಾಗಿವೆ.

ಹೊಸನಗರ ತಾಲ್ಲೂಕಿನ ಅಲಗೇರಿ ಮಂಡ್ರಿಯಲ್ಲಿ ಟ್ರ್ಯಾಕ್ಟರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.


ಟ್ಯಾಂಕರ್ ಮೂಲಕ ನೀರು:
ಇಲ್ಲಿನ 30 ಗ್ರಾಮ ಪಂಚಾಯಿತಿಗಳಲ್ಲಿ ಹಲವಷ್ಟು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಡಬಹುದು ಎಂದು ಅಂದಾಜಿಸಲಾಗಿದೆ.
ಸದ್ಯ ಅಲಗೇರಿಮಂಡ್ರಿ ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕುಡಿಯುವ ನೀರಿನ ನಿರ್ವಹಣೆಯಲ್ಲಿ ಅಲ್ಲಿನ ಗ್ರಾಮ ಪಂಚಾಯಿತಿ ತೀವ್ರ ನಿಗ ವಹಿಸಿದೆ. ಜನರ ಮನೆ ಬಾಗಿಲಿಗೆ ಟ್ರ್ಯಾಕ್ಟರ್ ಮೂಲಕ ನೀರು ಪೂರೈಕೆ ಕಾರ‍್ಯ ದಿನವೂ ನಡೆಯುತ್ತಿದೆ. ಹಾಗೆಯೇ ಬೇರೆ ಗ್ರಾಮಗಳಲ್ಲೂ ಸಮಸ್ಯೆ ಕಂಡುಬಂದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ತಾಲ್ಲೂಕು ಆಡಳಿತ ಸಜ್ಜಾಗಿದೆ.


ಜಿಲ್ಲಾಡಳಿತ ತೆರೆದ ಬಾವಿಗೆ ಉತ್ತೇಜನ ನೀಡಬೇಕು:
ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿದೆ. ಹಲವಷ್ಟು ಗ್ರಾಮಗಳು ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಮನವಿ ಮಾಡಿವೆ. ಅಲಗೇರಿಮಂಡ್ರಿಯಲ್ಲಿ ದಿನವೂ ಟ್ರ್ಯಾಕ್ಟರ್ ಮೂಲಕ ನೀರು ಬಿಡುಗಡೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ನೀರು ಭವಣೆ ನಿಗಿಸಲು ಜಿಲ್ಲಾಡಳಿತ ಹೆಚ್ಚಿನ ಗಮನ ನೀಡಬೇಕು. ಗ್ರಾಮದಲ್ಲಿ ಅಗತ್ಯ ನೀರು ದೊರಕಿಸಲು ತೆರೆದ ಬಾವಿ ನಿರ್ಮಾಣಕ್ಕೆ ಅನುದಾನ ನೀಡಬೇಕು. ಕೊಳವೆ ಬಾವಿ ನಿರ್ಮಾಣಕ್ಕೆ ಮಲೆನಾಡಲ್ಲಿ ಹೆಚ್ಚಿನ ಭರವಸೆ ನೀಡಿಲ್ಲ. ಹಾಗಾಗಿ ಇಲ್ಲಿ ತೆರೆದಬಾವಿಯೇ ಅಪತ್ಭಾಂದವ ಆಗಲಿದೆ ಎನ್ನುತ್ತಾರೆ ಅಲಗೇರಿ ಮಂಡ್ರಿ ಗ್ರಾಮ ಪಂಚಾಯಿತಿ ಸದಸ್ಯ ವಾಟಗೋಡು ಸುರೇಶ್.

‘ಸಮೃದ್ದ ಕಾಡು ಹೊಂದಿದ್ದ ತಾಲ್ಲೂಕಿನಲ್ಲಿ ತಾಪಮಾನ ಏರುತ್ತಿದೆ. ಜಾಗತಿಕ ತಾಪಮಾನ ಹೆಚ್ಚಳ ಜತೆಗೆ ಮಳೆಕಾಡು ನಾಶವೇ ಇದಕ್ಕೆ ಕಾರಣ. ಇದರಿಂದ ನೀರಿನ ಬರ ಅನಿವಾರ‍್ಯವಾಗಿದೆ. ಜಿಲ್ಲಾಡಳಿತ ನೀರಿನ ಮೂಲ ಅಭಿವೃದ್ಧಿಪಡಿಸಬೇಕು.’
– ಚಕ್ರವಾಕ ಸುಬ್ರಹ್ಮಣ್ಯ, ಜಲತಜ್ಞ

Leave A Reply

Your email address will not be published.

error: Content is protected !!