ಸರ್ಕಾರಿ ಬಾವಿ ಜಾಗ ಬಲಾಢ್ಯರಿಂದ ಕಬಳಿಕೆ ಯತ್ನ ; ಲೋಕಾಯುಕ್ತಕ್ಕೆ ದೂರು
ಹೊಸನಗರ: ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಮಾವಿನಕೊಪ್ಪದ ಸರ್ಕಾರಿ ಬಾವಿ ಜಾಗವನ್ನು ಪ್ರಭಾವಿ ಮುಖಂಡರೊಬ್ಬರು ಕಬಳಿಸುವ ಯತ್ನ ನಡೆದಿದ್ದು ಗ್ರಾಮ ಪಂಚಾಯತಿ ಸುಮ್ಮನಿದ್ದರೂ ಗ್ರಾಮಸ್ಥರೊಂದಿಗೆ ಲೋಕಾಯುಕ್ತ ನ್ಯಾಯಾಲಯಕ್ಕೆ ಹೋಗುವುದಾಗಿ ಪರಿಸರ ಪ್ರೇಮಿ, ಜನ ಸಂಗ್ರಾಮ ಸಂಚಾಲಕ ಗಿರೀಶ್ ಆಚಾರ್‌ರವರು ತಿಳಿಸಿದ್ದಾರೆ.

ಅವರು ಬಾವಿಗೆ ಸಂಬಂದಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾವಿನಕೊಪ್ಪದ ಸರ್ವೆನಂಬರ್ 19 ರಲ್ಲಿ ಗ್ರಾಮ ಪಂಚಾಯತಿ ಡಿ.ಆರ್ 162ರಲ್ಲಿ ಸರ್ಕಾರಿ ಬಾವಿ ಎಂದು ನಮೂದಾಗಿದ್ದು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಗೆ ಸೇರಿದ ಬಾವಿಯಾಗಿತ್ತು.
ಎರಡು ವರ್ಷಗಳ ಹಿಂದೆ ಬಾವಿ ಕಾಣೆಯಾಗಿದೆ ಎಂದು ಸುದ್ದಿ ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಸದಸ್ಯ ಮಹೇಂದ್ರರವರ ನೇತೃತ್ವದಲ್ಲಿ ಗ್ರಾಮ ಪಂಚಾಯತಿಯ ಆಡಳಿತ ವರ್ಗ ಹಾಗೂ ಸದಸ್ಯರು ಮಾವಿನಕೊಪ್ಪ ಸರ್ಕಲ್ ಸಾಗರ ರಸ್ತೆಯಲ್ಲಿ ಸರ್ಕಾರಿ ಬಾವಿಯನ್ನು ಮುಚ್ಚಿದ್ದು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಬಾವಿಗೆ ಸೇರಿದ ಜಾಗವನ್ನು ಗ್ರಾಮ ಪಂಚಾಯತಿ ವಶ ಪಡಿಸಿಕೊಂಡು ಸುತ್ತ-ಮುತ್ತ ಜಾಗಕ್ಕೆ ತಂತಿ ಬೇಲಿ ಹಾಕಿ ಇದು ಗ್ರಾಮ ಪಂಚಾಯತಿ ಜಾಗ ಇದರ ಒಳಗೆ ಯಾರಿಗೂ ಪ್ರವೇಶವಿಲ್ಲ ಎಂದು ಗ್ರಾಮ ಪಂಚಾಯತಿಯಿಂದ ಬೋರ್ಡ್ ಹಾಕಲಾಗಿತ್ತು.
ಆದರೆ, ಒಂದೆರೆಡು ದಿನಗಳ ಹಿಂದೆ ಗ್ರಾಮ ಪಂಚಾಯತಿಗೆ ಸೇರಿದ ಜಾಗದ ಬೋರ್ಡ್ ತೆಗೆದು ಹಾಕಿದ್ದಾರೆ ನಂತರ ಬಾವಿಯ ಜಾಗ ಅಂದರೆ ಸರ್ವೆನಂಬರ್ 19ರಲ್ಲಿ ನನಗೆ 22-7-2018ರಲ್ಲಿ ಹೊಸನಗರದ ತಾಲ್ಲೂಕು ಕಛೇರಿಯಿಂದ 94ಸಿಸಿ ಯಲ್ಲಿ ಹಕ್ಕುಪತ್ರ ನೀಡಿದ್ದಾರೆ ನನಗೆ ಖಾತೆ ಮಾಡಿಕೊಡಲು ಜಿ.ಈ ಕುಮಾರ್ ರವರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಗ್ರಾಮ ಪಂಚಾಯತಿಯ ಡಿ.ಆರ್ ನಂಬರ್ ನಮೂದಿಸದೇ ಹಕ್ಕುಪತ್ರ ನೀಡಲು ಹೇಗೆ ಸಾಧ್ಯ ? ಎಂದು ಪ್ರಶ್ನಿಸಿದರು.
ಅರ್ಜಿದಾರರ ಅರ್ಜಿಯನ್ನು ಗ್ರಾಮ ಪಂಚಾಯತಿಯವರು ಅರ್ಜಿಯನ್ನು ಸ್ವೀಕರಿಸಿ ರ‍್ಟಿಸಿ ಕಲಂ 9ಮತ್ತು 11 ಮಾಡಲು ಹೊರಟಿದ್ದು ಸರ್ಕಾರಿ ಬಾವಿಯ ಜಾಗವನ್ನು ಯಾವುದೇ ಖಾತೆ ಮಾಡದೇ ಗಂಭೀರವಾಗಿ ಕಾನೂನಿನ ಅಡಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲೀ ಇಲ್ಲವಾದರೆ ಮಾವಿನಕೊಪ್ಪ ಗ್ರಾಮಸ್ಥರೊಂದಿಗೆ ತಾಲ್ಲೂಕು ಕಛೇರಿ ಮತ್ತು ತಾಲ್ಲೂಕು ಪಂಚಾಯತಿ ಎದರು ಕಾನೂನು ಕ್ರಮಕ್ಕೆ ಧರಣಿ ನಡೆಸುವುದಾಗಿ ತಿಳಿಸಿದರು. ಇಲ್ಲವಾದರೇ ಅಧಿಕಾರಿಗಳನ್ನೇ ಹೊಣೆಯನ್ನಾಗಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು.
ಒಂದೇ ಮನೆಗೆ ಎರಡು ಹಕ್ಕುಪತ್ರ:
ಕಸಬಾ ಹೋಬಳಿ ಸರ್ವೆನಂಬರ್ 19ರಲ್ಲಿ ಹಕ್ಕುಪತ್ರ ಪಡೆದ ಫಲಾನುಭವಿ ಬೇರೆ ಗ್ರಾಮದವರಾಗಿದ್ದು ಸದರಿ ಹಕ್ಕು ಪತ್ರ ಪಡೆದ ಜಾಗಕ್ಕೆ ಈ ಹಿಂದೆ ಗ್ರಾಮ ಪಂಚಾಯತಿಯಿಂದ ಕಂದಾಯ ಹಾಗೂ ಡಿ.ಆರ್ ನಂಬರ್ ಪಡೆಯದೇ ಹಕ್ಕಪತ್ರ ಮಾಡಿಸಿಕೊಂಡು ಅಕ್ರಮ ಎಸಗಿದ್ದಾರೆ ಇದರಲ್ಲಿ ಅಧಿಕಾರಿಗಳು ಶಾಮಿಲಾಗಿರುವುದು ಕಂಡು ಬಂದಿದ್ದು ಗ್ರಾಮ ಪಂಚಾಯತಿಗೆ ಒಂದೆ ಮನೆ ತೋರಿಸಿ ಎರಡೆರಡು ಹಕ್ಕು ಪತ್ರಗಳನ್ನು ಮಾಡಿಕೊಂಡಿದ್ದು ಎರಡನೇ ಹಕ್ಕುಪತ್ರವೇ ಬಾವಿಯ ಜಾಗದ ಹಕ್ಕು ಪತ್ರ ಎಂದು ಗ್ರಾಮ ಪಂಚಾಯತಿಯ ದಿಕ್ಕು ತಪ್ಪಿಸುತ್ತಿದ್ದಾರೆ ತಕ್ಷಣ ಗ್ರಾಮ ಪಂಚಾಯತಿಯ ಆಡಳಿತ ವರ್ಗ ಮತ್ತು ತಾಲ್ಲೂಕು ತಹಶೀಲ್ದಾರ್ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕಾಗಿದೆ ಎಂದರು.