ಹರಿದ್ರಾವತಿಯಲ್ಲಿ ನೂತನ ವಿದ್ಯುತ್ ಉಪ ಕೇಂದ್ರ ಕಾಮಗಾರಿಗೆ ಶಾಸಕ ಹಾಲಪ್ಪ ಗುದ್ದಲಿ ಪೂಜೆ | 5 ವರ್ಷ ಜನತೆಯ ಸೇವೆ ಮಾಡಿದ್ದೇನೆ ಕೂಲಿಯ ರೂಪದಲ್ಲಿ ನನಗೆ ಆಶೀರ್ವಾದ ಮಾಡಿ

0 0

ಹೊಸನಗರ : ವಿದ್ಯುತ್‌ ಗುಣಮಟ್ಟ ಹೆಚ್ಚಿಸುವ ದಿಸೆಯಿಂದ ತಾಲೂಕಿನ ಹರಿದ್ರಾವತಿಯಲ್ಲಿ ನೂತನ ವಿದ್ಯುತ್ ಉಪಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.


ಅವರು ತಾಲೂಕಿನ ಹರಿದ್ರಾವತಿಯಲ್ಲಿ ಭಾನುವಾರ ನೂತನ 33/11 ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ,‌ ರಾಜ್ಯಕ್ಕೆ ವಿದ್ಯುತ್ ನೀಡಲು ಭೂಮಿಯನ್ನು ನೀಡಿದ್ದರೂ, ಗುಣಮಟ್ಟದ ವಿದ್ಯುತ್ ಈ ಭಾಗದಲ್ಲಿ ದೊರಕುತ್ತಿಲ್ಲ. ಇದನ್ನು ಮನಗಂಡು ತಾಲೂಕಿನ ಜನತೆಯ ಹಲವು ವರ್ಷಗಳ ಬೇಡಿಕೆಯಾಗಿದ್ದ ಹರಿದ್ರಾವತಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಅನುದಾನ ಬಿಡುಗಡೆ ಗೊಳಿಸಲಾಗಿದೆ. ರೈತರು, ವಿದ್ಯುತ್ ಗ್ರಾಹಕರಿಗೆ ಇದರಿಂದ ಉಪಯೋಗ ಆಗಲಿದೆ ಎಂದು ಹೇಳಿದರು.
ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕೈರ‍್ಯಗಳು ಆಗಿವೆ. ಆಗದು ಎಂದು ಹಿಂದಿನವರು ಕೈಚೆಲ್ಲಿದ್ದ ಹಲವು ಮೂಲಸೌಕರ್ಯ ಅಭಿವೃದ್ಧಿ ಕಾರ‍್ಯಗಳು ಈ ಅವಧಿಯಲ್ಲಿ ನಡೆದಿರುವುದು ಜನರ ಕಣ್ಣ ಮುಂದಿದೆ. ನೂರಾರು ನೂತನ ರಸ್ತೆ ನಿರ್ಮಾಣ, ಅಭಿವೃದ್ಧಿ ಕಾರ‍್ಯ ನಡೆಲಾಗಿದೆ. ಕುಡಿಯುವ ನೀರಿಗೆ ವಿಶೇಷ ಯೋಜನೆ ರೂಪುಗೊಂಡಿದೆ. ಬಿಜೆಪಿಯದ್ದು ಡಬಲ್ ಎಂಜಿನ್ ಸರಕಾರವಾಗಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿದೆ ಎಂದರು.


ಮಾವ ಅಳಿಯ ಮಾಡಿದ್ದೇನು?
ಜನರನ್ನು ಪ್ರೀತಿ ಮಾಡುತ್ತೇನೆ ಎಂದು ಈಗೊಬ್ಬರು ಮತಯಾಚನೆ ಮಾಡಲು ಶುರು ಮಾಡಿದ್ದಾರೆ. ಪ್ರೀತಿ ಮಾಡಲು ಶಾಸಕರೇಕೆ ಬೇಕು. ಮನೆಯಲ್ಲಿ ಅವರ ಕುಟುಂಬದ ಸದಸ್ಯರು ಸಾಕು. ಶಾಸಕನಾದವನು ಶಾಸನಸಭೆಯಲ್ಲಿ ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚೆ ಮಾಡಬೇಕು. ಸರಕಾಹರದ ಗಮನ ಸೆಳೆದು ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಪಡಬೇಕು. ಶಾಸಕಸಭೆಯ ಒಳಗೆ ಹಾಗೂ ಹೊರಗೆ ಜನಪರ ಕಾಳಜಿಯಿಂದ ಕೆಲಸ ಮಾಡಬೇಕು. ಆದರೆ ಈಗ ಪ್ರಚಾರಕ್ಕೆ ಹೊರಟಿರುವವರು ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದಾಗ ಶಾಸನಸಭೆಯಲ್ಲಿ ಒಂದು ದಿನವೂ ಮಾತನಾಡಿದ ಉದಾಹರಣೆಯಿಲ್ಲ. ಭೂಮಿಯ ಹಕ್ಕು ದೊರೆಯಬೇಕು ಎಂದು ಸದಾ ಮಾತಿನಲ್ಲೇ ಕಾಲ ಕಳೆಯುವುದು ಉತ್ತಮ ಆಡಳಿತವಲ್ಲ. ಈ ಹಿಂದೆ ಏನೇನು ಮಾಡಿದರು ಎನ್ನುವುದನ್ನು ಮಾವ ಅಳಿಯ ಜನರ ಮುಂದಿಡಲಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಬೇಳೂರು ಗೋಪಾಲಕೃಷ್ಣರವರ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.


ಇದು ಚುನಾವಣಾ ಸಮಯ. ಜನರ ಪರವಾಗಿ ಕೆಲಸ ಮಾಡಿದ್ದಕ್ಕಾಗಿ ಈಗ ಕೂಲಿ ಕೇಳುತ್ತೇವೆ. ಐದು ವರ್ಷ ಮಾಡಿದ ಕೆಲಸ ನೋಡಿ ಜನತೆನಆಶೀರ್ವದಿಸಬೇಕು ಎಂದ ಅವರು, ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ನೀಡುವ ಹೆಸರಿನಲ್ಲಿ ಜನರನ್ನು ಮರುಳು ಮಾಡಲು ಹೊರಟಿದೆ. 40 ವರ್ಷದಿಂದ ಆಡಳಿತ ನಡೆಸಿದ ಸಂದರ್ಭದಲ್ಲಿ ಕೆಲಸ ಮಾಡಿ ತೋರಿಸಿದರೇ ಈಗ ಗ್ಯಾರಂಟಿ ಕಾರ್ಡ್ ಮನೆ-ಮನೆಗೆ ಹಂಚುವ ಅಗತ್ಯವಿರಲಿಲ್ಲ ಎಂದು ಜನತೆ ಇದನ್ನು ಅರಿಯಬೇಕು ಎಂದರು.


ಬಿಜೆಪಿ ಪಕ್ಷದ ಪ್ರಮುಖರು ವೇದಿಕೆಯಲ್ಲಿ:
ಆಹ್ವಾನ ಪತ್ರಿಕೆಯಲ್ಲಿ 10.30ಕ್ಕೆ ಕಾರ‍್ಯಕ್ರಮ ಎಂದಿದ್ದರೂ, ಶಾಸಕರ ಪ್ರಕಟಣೆಯಲ್ಲಿ 11.30ಕ್ಕೆ ಕಾರ‍್ಯಕ್ರಮ ಎಂದು ತಿಳಿಸಲಾಗಿತ್ತು. ಆದರೆ ಶಾಸಕರು ಕಾರ‍್ಯಕ್ರಮಕ್ಕೆ ಆಗಮಿಸಿದಾಗ ಮದ್ಯಾಹ್ನ 1.30 ಗಂಟೆ ಆಗಿತ್ತು. ವೇದಿಕೆ ಕಾರ‍್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹಾಗೂ ತಾಲೂಕು ಘಟಕದ ಅಧ್ಯಕ್ಷ ಗಣಪತಿ ಬಿಳಗೋಡು ಸೇರಿದಂತೆ ಬಿಜೆಪಿಯ ಕೆಲ ಮಾಜಿ ಜನಪ್ರತಿನಿಧಿಗಳು, ಕಾರ‍್ಯಕರ್ತರು ಆಸೀನರಾಗಿದ್ದರು. ಸರ್ಕಾರಿ ಕಾರ‍್ಯಕ್ರಮವಾಗಿದ್ದರೂ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌ ಅವರಿಗೆ ಸಭೆಯಲ್ಲಿ ಮಾತನಾಡಲು ಅವಕಾಶ ಕಲ್ಪಿಸಿದ್ದು, ಚರ್ಚೆಗೆ ಗ್ರಾಸ ಮಾಡಿಕೊಟ್ಟಿತು.


ಕಾರ‍್ಯಕ್ರಮದಲ್ಲಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ, ಗ್ರಾಪಂ ಅಧ್ಯಕ್ಷೆ ಲೀಲಾವತಿ ಸುರೇಶ್, ಸದಸ್ಯರಾದ ವಾಟಗೋಡು ಸುರೇಶ್, ಎಚ್.ವಿ.ಅಶೋಕ ಗೌಡ, ಗುರುಮೂರ್ತಿ, ಕೆ.ಆರ್.ಮಂಜುನಾಥ್, ಪೂರ್ಣಿಮಾ, ಜಯಲಕ್ಷ್ಮಿ ಸುಬ್ಬಾರಾವ್, ಪ್ರವೀಣ್, ವೀರೇಶ್ ಆಲವಳ್ಳಿ, ಮೆಸ್ಕಾಂ ಇಲಾಖೆಯ ಮುಖ್ಯ ಎಂಜಿನಿಯರ್ ಬಸಪ್ಪ, ಎಇ ವೆಂಕಟೇಶ್, ಎಇಇ ಚಂದ್ರಶೇಖರ್, ಶಾಸಕರ ಆಪ್ತ ಕಾರ್ಯದರ್ಶಿ ಮಂಡಾನಿ ಮೋಹನ್, ಚಾಲುಕ್ಯ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!