ಹೊಂಬುಜದಲ್ಲಿ ಲಕ್ಷದೀಪೋತ್ಸವ | ಸುಜ್ಞಾನ ದೀಪಗಳು ಜೀವನವನ್ನು ಬೆಳಗಿಸಲಿ ; ಶ್ರೀಗಳು

0 300

ರಿಪ್ಪನ್‌ಪೇಟೆ : ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕೇವಲ ದೇವಸ್ಥಾನ, ಮಂದಿರಗಳಲ್ಲಿ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಂದು ಮನೆಯಲ್ಲಿ ದೀಪ ದೀಪಗಳ ಹಣತೆ ಸಾಲು ರಾತ್ರಿ ವೇಳೆ ಕಾರ್ತಿಕ ಮಾಸದಲ್ಲಿ ಬೆಳಕು ಪಸರಿಸುತ್ತದೆ ಎಂದು ಹೊಂಬುಜದ (Hombuja) ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಅತಿಶಯ ಶ್ರೀಕ್ಷೇತ್ರ ಹೊಂಬುಜ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ವಿಶ್ವವಂದ್ಯ ಯಕ್ಷಿ ಮಹಾಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯ ಪರಂಪರಾನುಗತ ಲಕ್ಷದೀಪೋತ್ಸವದಂದು ತಿಳಿಸಿದರು.

ಶ್ರೀ ಮಹಾವೀರ ತೀರ್ಥಂಕರರ ನಿರ್ವಾಣದ ಸಂಕೇತವಾಗಿ ದೀಪ ಪ್ರಜ್ವಲನೆಯ ಪದ್ಧತಿ ರಾಷ್ಟ್ರದೆಲ್ಲೆಡೆ ಪ್ರಚಲಿತವಾಯಿತು. ನಿಜ ಅರ್ಥದಲ್ಲಿ ಸುಜ್ಞಾನ ದೀಪಗಳು ಜೀವನವನ್ನು ಬೆಳಗಿಸುವಂತಾಗಲಿ ಎಂಬ ಸದ್ಭಾವನೆ ಮೂಡಲಿ ಎಂದು ಸ್ವಸ್ತಿಶ್ರೀಗಳವರು ಭಕ್ತವಂದದವರಿಗೆ ಆಶೀರ್ವದಿಸಿದರು.

ಪೂರ್ವಾಹ್ನ ‘ಜಿನಸಹಸ್ರನಾಮ’ ಆರಾಧನೆಯಲ್ಲಿ ಭಕ್ತಸಮೂಹ ಪಾಲ್ಗೊಂಡಿದ್ದರು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ವಿಧಾನಗಳು ನೆರವೇರಿದವು.

ಶ್ರೀ ಪದ್ಮಾಂಬ ದಿನದರ್ಶಿಕೆ ಬಿಡುಗಡೆ :
ಹೊಂಬುಜ ಅತಿಶಯ ಶ್ರೀಕ್ಷೇತ್ರದಿಂದ ಪ್ರಕಟಿಸಲ್ಪಡುವ ಶ್ರೀ ಪದ್ಮಾಂಬಾ ದಿನದರ್ಶಿಕೆ-2024 ಸ್ವಸ್ತಿಶ್ರೀಗಳವರು ಬಿಡುಗಡೆಗೊಳಿಸಿ, ಪ್ರತಿಯೊಂದು ದಿನದ ಧಾರ್ಮಿಕ ಮಹತ್ವವನ್ನು ಆಚರಿಸುವುದು ಪ್ರತಿಯೋರ್ವರ ಧರ್ಮ ಮತ್ತು ಕರ್ತವ್ಯ ಎಂದು ಶುಭ ಹಾರೈಸಿದರು. ಊರ-ಪರವೂರ ಭಕ್ತರು ದೀಪೋತ್ಸವವನ್ನು ಕಣ್ತುಂಬಿಕೊಂಡರು.

Leave A Reply

Your email address will not be published.

error: Content is protected !!