ಹೊಸನಗರದಲ್ಲಿ ಕಂದಾಯ ದಿನಾಚರಣೆ ; ಸಿಬ್ಬಂದಿಗಳಿಗೆ ಸರ್ಕಾರ ಮೂಲಭೂತ ಸೌಕರ್ಯ ಕಲ್ಪಿಸಲಿ

0 0


ಹೊಸನಗರ : ಎಲ್ಲಾ ಸರ್ಕಾರಿ ಇಲಾಖೆಗಳ ಮಾತೃ ಇಲಾಖೆ ಕಂದಾಯ ಇಲಾಖೆ ಆಗಿದ್ದು ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ತಾಲೂಕು ಆಡಳಿತ ಶಿರಾಸ್ತೆದಾರ್ ಸುಧೀಂದ್ರ ಕುಮಾರ್ ತಿಳಿಸಿದರು.


ಪಟ್ಟಣದ ತಾಲೂಕು ಕಛೇರಿಯಲ್ಲಿ ತಾಲೂಕು ಆಡಳಿತ, ಕರ್ನಾಟಕ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ, ರಾಜ್ಯ ಗ್ರಾಮ ಸಹಾಯಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಂದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.


ಕಂದಾಯ ಇಲಾಖೆ ಸಿಬ್ಬಂದಿಗಳು ವಸತಿ ಸೌಕರ್ಯ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳಿಂದ ವಂಚಿತರಾಗಿದ್ದು ಸರ್ಕಾರ ಕೂಡಲೇ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳುವಂತೆ ಮನವಿ ಮಾಡಿದರು.


ಗ್ರೇಡ್ -2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಪಿಂಟೊ ಮಾತನಾಡಿ, ಅಧಿಕಾರ ವಿಕೇಂದ್ರೀಕರಣ ಆದರೂ, ಮಾತೃ ಇಲಾಖೆಯಂತಿರುವ ಕಂದಾಯ ಇಲಾಖೆಯ ಶಕ್ತಿ ಕುಂದಿಲ್ಲ. ಅತಿವೃಷ್ಠಿ, ಅನಾವೃಷ್ಠಿ ಎನ್ನದೆ ಎಲ್ಲಾ ಸನ್ನಿವೇಶಗಳಲ್ಲೂ ಕಂದಾಯ ಇಲಾಖೆ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾಲಕಾಲಕ್ಕೆ ಅನುಗುಣವಾಗಿ ಸಿಬ್ಬಂದಿಗಳಿಗೆ ಸೂಕ್ತ ಸೌಲಭ್ಯ ದೊರೆತಲ್ಲಿ ಹೆಚ್ಚಿನ ಕಾರ್ಯ ನಿರ್ವಹಿಸಲು ಸಾಧ್ಯವಿದೆ ಎಂದರು.


ತಾಲೂಕು ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ಮಂಜುನಾಥ್ ಪ್ರಾಸ್ಥವಿಕ ಮಾತನಾಡಿ, ಇದೇ ಪ್ರಥಮ ಬಾರಿಗೆ ಕಂದಾಯ ದಿನಾಚರಣೆಯನ್ನು ತಾಲೂಕು ಆಡಳಿತ ಅತ್ಯಂತ ಯಶಸ್ವಿಯಾಗಿ ಆಚರಿಸುತ್ತಿದೆ. ನಿತ್ಯ ಇಲಾಖಾ ಕರ್ತವ್ಯದಲ್ಲಿ ತೊಡಗಿ ಜಂಜಾಟದ ಬದುಕು ಸಾಗಿಸುತ್ತಿದ್ದ ನೌಕರವರ್ಗಕ್ಕೆ ಇಂದು ವಿವಿಧ ಸಾಂಸ್ಕೃತಿಕ, ಕ್ರೀಡೆಗಳನ್ನು ಆಯೋಜಿಸುವ ಮೂಲಕ ಕಂದಾಯ ಕುಟುಂಬ ಎಂಬ ಭಾವನೆ ಮೂಡಿಸಲು ಈ ಕಾರ್ಯಕ್ರಮ ಸಹಕಾರಿ ಆಗಿದೆ ಎಂದರು.


ತಾಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಬಾಳೆಕೊಪ್ಪ ನಾಗಪ್ಪ ಮಾತನಾಡಿ, ಮಳೆಗಾಲ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ, ಸಂಘದ ಸದಸ್ಯರಿಗೆ ಹಾಗೂ ಗ್ರಾಮ ಲೆಕ್ಕಿಗರಿಗೆ ರೈನ್‌ಕೋಟ್ ವಿತರಣೆಗೆ ತಾಲೂಕು ಆಡಳಿತ ಮುಂದಾಗಬೇಕೆಂದು ವಿನಂತಿಸಿದರು.


ತಹಶೀಲ್ದಾರ್ ಡಿ.ಜಿ.ಕೋರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕೆರೆಹಳ್ಳಿ ಶಿರಸ್ತೆದಾರ್ ಹನುಮಂತಪ್ಪ, ಕಸಬಾ ರಾಜಸ್ವ ನಿರೀಕ್ಷಕ ವೆಂಕಟೇಶ್, ಹುಂಚಾ ರಾಜಸ್ವ ನಿರೀಕ್ಷಕ ಇನಾಯತ್ ಖಾನ್, ಸಿಬ್ಬಂದಿಗಳಾದ ವಿನಯ್ ಆರಾಧ್ಯ, ಶೀಲಾ, ಭಾಷ ಖಾನ್, ಸತೀಶ್, ಕೌಶಿಕ್, ಚಿರಾಗ್ ವರ್ಣೇಕರ್, ದೀಪಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮನೋರಂಜನೆಗಾಗಿ ವಿವಿಧ ಸಿಬ್ಬಂದಿಗಳಿಗೆ ಮ್ಯೂಜಿಕಲ್ ಛೇರ್ ಕಾರ್ಯಕ್ರಮ ನಡೆಯಿತು.

Leave A Reply

Your email address will not be published.

error: Content is protected !!