ಹೊಸನಗರ ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ರಣ ಮಳೆ ; ಸಂಪರ್ಕಕ್ಕೆ ಸಿಗದ ಬಿಇಒ ! ಎಲ್ಲಿದ್ದೀರಿ ಸರ್..!?
ಹೊಸನಗರ : ಮಲೆನಾಡಿನ ತವರು ಹೊಸನಗರ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಭಾರಿ ಪ್ರಮಾಣದ ಮಳೆ ಬೀಳುತ್ತಿದ್ದು ಭಾನುವಾರ ಸಹ ಎಡಬಿಡದೆ ಮಳೆ ಸುರಿಯತ್ತಿದ್ದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇನ್ನು ಐದು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಆದರೆ ಹೊಸನಗರ ಶಿಕ್ಷಣಾಧಿಕಾರಿಗಳು ಮಕ್ಕಳ ಹಿತ ದೃಷ್ಟಿಯಿಂದ ಈವರೆಗೂ ಅಂದರೆ ಭಾನುವಾರ ಸಂಜೆ 6 ಗಂಟೆವರೆಗೂ ಸೋಮವಾರದ ಶಾಲೆಗೆ ರಜೆ ಘೋಷಿಸದೆ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದು, ಕೇಂದ್ರ ಸ್ಥಾನದಲ್ಲಿ ಇರದೆ ಇತ್ತ ದೂರವಾಣಿ ಸಂಪರ್ಕಕ್ಕೂ ಸಿಗದೆ ಇದ್ದು ಕಚೇರಿ ವ್ಯವಸ್ಥಾಪಕರು, ಬಿ.ಆರ್.ಸಿ, ಸಿ.ಆರ್.ಪಿ ಗಳು ಸಂಪರ್ಕಿಸಿದರು ಅವರು ಸಹ ಶಿಕ್ಷಣಾಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳುತ್ತಿದ್ದು, ಆದ ಕಾರಣ ನಮಗೆ ಯಾವುದೇ ಮಾಹಿತಿ ನೀಡಲು ಆಗುತ್ತಿಲ್ಲವೆಂದು ಅವರು ತಮ್ಮ ಸಹಾಯಕತೆಯನ್ನು ತೋಡಿಕೊಂಡಿದ್ದ ಕಾರಣ ತಾಲೂಕು ದಂಡಾಧಿಕಾರಿಗಳನ್ನು ‘ಮಲ್ನಾಡ್ ಟೈಮ್ಸ್’ ಸಂಪರ್ಕಿಸಿದಾಗ ಅವರು ಸಹ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿಸಿದ್ದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಆತಂಕ ತೋಡಿಕೊಂಡಿದ್ದಾರೆ.

ತಹಶೀಲ್ದಾರ್ ಸೇರಿದಂತೆ ಮತ್ಯಾರಿಗೂ ಮಧ್ಯಾಹ್ನದಿಂದ ದೂರವಾಣಿಗೆ ಕರೆಗೆ ಸಿಗದೆ ನಾಪತ್ತೆಯಾಗಿರುವ ಹೊಸನಗರ ಬಿಇಒ ಸಾಹೇಬ್ರೆ ಎಲ್ಲಿದ್ದೀರಿ…? ದಯವಿಟ್ಟು ಉತ್ತರಿಸಿ.