ಹೊಸನಗರ ; ತ್ಯಾಗ ಬಲಿದಾನದ ಪ್ರತೀಕವಾದ ‘ಬಕ್ರೀದ್’ ಆಚರಣೆ
ಹೊಸನಗರ : ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಇಲ್ಲಿನ ಮುಸ್ಲಿಮ್ ಸಮುದಾಯದ ಬಾಂಧವರು ಇಂದು ಆಚರಿಸಿದರು.
ಪಟ್ಟಣದ ಜುಮ್ಮಾ ಮಸೀದಿ ಹಾಗೂ ಬದ್ರೀಯ ಮಸೀದಿಗಳಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿ, ತಮ್ಮ ಸಮುದಾಯದ ಬಡ ವರ್ಗದವರಿಗೆ ದಾನ ನೀಡುವ ಮೂಲಕ ಶುಭಹಾರೈಸಿದರು.
ಹೊಸ ವಸ್ತ್ರದೊಂದಿಗೆ ಪ್ರಾರ್ಥನ ಸ್ಥಳಕ್ಕೆ ಭೇಟಿ ನೀಡಿದ ನೂರಾರು ಮುಸ್ಲಿಮರು ಅಲ್ಲಾಹನಲ್ಲಿ ವಿಶ್ವ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಬಳಿಕ ಪರಸ್ಪರ ಶುಭಾಶಯ ಕೋರಿ, ಗೆಳೆಯರ, ಸಂಬಂಧಿಗಳ ಮನೆಗಳಿಗೆ ತೆರಳಿ ಹಬ್ಬದ ವಿಶೇಷ ಖಾದ್ಯಗಳನ್ನು ಸವಿದು ಸಂಭ್ರಮ ಹಂಚಿಕೊಂಡಿದ್ದು ಕಂಡು ಬಂತು.

ಈ ಬಾರಿ ಈದ್ಗಾ ಮೈದಾನದಲ್ಲಿನ ಸಾಮೂಹಿಕ ಪ್ರಾರ್ಥನೆಗೆ ಮಳೆರಾಯ ಅಡ್ಡಿ ಪಡಿಸಿದ್ದ ಕಾರಣ ಮಸೀದಿಯಲ್ಲೆ ನಡೆಯಿತು.
ತಾಲೂಕಿನ ಬಟ್ಟೆಮಲ್ಲಪ್ಪ, ನಗರ, ಯಡೂರು, ಕೋಡೂರು, ರಿಪ್ಪನ್‌ಪೇಟೆ, ನಿಟ್ಟೂರು, ಗರ್ತಿಕೆರೆ, ಜಯನಗರ ಸೇರಿದಂತೆ ವಿವಿಧೆಡೆ ಬಕ್ರೀದ್ ಆಚರಣೆ ಕಂಡುಬಂತು.
ಶುಭ ಹಾರೈಕೆ :
ಬಕ್ರೀದ್ ಹಬ್ಬದ ಹಿನ್ನಲೆ ಶಾಸಕ ಗೋಪಾಲಕೃಷ್ಣ ಬೇಳೂರು ತಾಲೂಕಿನ ಮುಸ್ಲಿಂ ಸಮುದಾಯದವರಿಗೆ ಶುಭ ಕೋರಿದ್ದು, ತ್ಯಾಗ, ಬಲಿದಾನಕ್ಕೆ ಹೆಸರಾದ ಈ ಹಬ್ಬದಲ್ಲಿ ಅಲ್ಲಾಹನ ವಿಶೇಷ ಕರುಣೆ ಸಮುದಾಯದ ಮೇಲಿರಲಿ ಎಂದಿದ್ದಾರೆ.
ಬಕ್ರೀದ್ ಹಬ್ಬವು ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಈ ಪವಿತ್ರ ದಿನವನ್ನು ಧುಲ್-ಹಿಜ್ಜಾದ ಹತ್ತನೇ ದಿನದಂದು ಆಚರಿಸುತ್ತಾರೆ. ಈ ಹಬ್ಬದ ದಿನದಂದು ಬೆಳಗಿನ ಸಮಯದಲ್ಲಿ ವಿಶೇಷ ನಮಾಝ್ ನಿರ್ವಹಿಸುವ ಮೂಲಕ ಆರಂಭಿಸಲಾಗುತ್ತದೆ.
ಬಳಿಕ ಬಡವರಿಗೆ ತಮ್ಮ ಕೈಲಾದಷ್ಟು ದಾನ ಮಾಡಿ ಹಸಿದವರ ಹಸಿವು ನೀಗಸಬೇಕಿದೆ ಎಂದು ಪವಿತ್ರ ಗ್ರಂಥವಾದ ಖುರಾನ್ ನಲ್ಲಿ ಹೇಳಲಾಗಿದೆ ಎಂದು ಹೊಸನಗರ ಪಟ್ಟಣದಲ್ಲಿರುವ ಕಳೂರು ಜುಮ್ಮಾ ಮಸೀದಿಯ ಖತೀಬರಾದ ಮುಫ್ತಿ ಮೊಹಮ್ಮದ್ ಇಂತಿಯಾಝ್ ಶುಯೇಬಿ ರವರು ಹೇಳಿದರು.
ಇಂದು ಮಸ್ಜಿದ್ ಆವರಣದಲ್ಲಿ ಬಕ್ರೀದ್ ಖುತ್ಬಾದ ನಂತರ ಮಾತನಾಡಿ ʼಈದ್ ಉಲ್ ಅದಾ ಎಂದರೆ, ಅದಾ ಎಂಬುದು ತ್ಯಾಗ, ಬಲಿದಾನ ಹಾಗೂ ʼಈದ್ʼ ಎಂದರೆ ಹಬ್ಬ. ತ್ಯಾಗ ಸಂಕೇತವಾಗಿರುವ ಈ ಹಬ್ಬವನ್ನು ಬಕ್ರೀದ್ ಎನ್ನುವುದಾಗಿದೆ.
ಬಕ್ರೀದ್ ಮಹತ್ವ:
ಅಲ್ಲಾಹು ಒಂದು ಬಾರಿ ತನ್ನ ಭಕ್ತರು ದಾನ, ತ್ಯಾಗ ಎಂದರೆ ಹೇಗೆ ಪ್ರತಿಕ್ರಿಯಿಸುವವರು ಎಂಬ ನಿಟ್ಟಿನಲ್ಲಿ ಹಜರತ್ ಇಬ್ರಾಹಿಂ ಅವರ ಪ್ರವಾದಿ ಕನಸಿನಲ್ಲಿ ಬಂದು ನಿನಗೆ ತುಂಬಾ ಇಷ್ಟವಾದ ವಸ್ತುವನ್ನು ನನಗೆ ನೀಡಬೇಕೆಂದು ಕೇಳಿಕೊಂಡರು.ಆಗ ಹಜರತ್ ಇಬ್ರಾಹಿಂ ತಾನು ತುಂಬಾ ಪ್ರೀತಿಸುವ ವಸ್ತುವಿದ್ದರೇ ಅದು ನನ್ನ ಮಗ ಇಸ್ಮಾಯಿಲ್ ಎಂದರು. ಆದರೆ ದೇವರಾಗಿರುವ ಅಲ್ಲಾನೇ ಇಷ್ಟವಾದುದನ್ನು ಕೇಳಿರುವಾಗ ತನ್ನ ಮಗನಿಗಿಂತ ಬೇರೆ ಯಾವುದು ಇಲ್ಲ ಎಂದು ಯೋಚಿಸಿ ತನ್ನ ಮಗನನ್ನು ಅಲ್ಲಾಹುಗೆ ತ್ಯಾಗ ಮಾಡಲು ಯೋಚಿಸಿ ಮಗನ ಬಲಿಕೊಡಲು ತನ್ನ ಕಣ್ಣುಗಳಿಗೆ ಬಟ್ಟೆ ಕಟ್ಟಿ ಮಗನನ್ನು ರುಂಡ ಹಾರಿಸಿದರು.ಆದರೆ ಕಣ್ಣಿನಿಂದ ಬಟ್ಟೆ ತೆಗೆದು ನೋಡಿದರೆ ಇಬ್ರಾಹಿಂ (ಮಗ) ನಿಗೆ ಏನೂ ಆಗದೇ ಮೇಕೆಯೊಂದು ಬಲಿಯಾಗಿತ್ತು. ಬಳಿಕ ಆ ವಿಸ್ಮಯ ಕಂಡು ತನ್ನ ಪರೀಕ್ಷಿಸಲು ಅಲ್ಲಾಹು ಹೀಗೆ ಮಾಡಿದ್ದಾರೆಂದು ಅರಿತರು ಆ ಬಲಿದಾನದ ಸಂಕೇತವಾಗಿ ಪವಿತ್ರ ಬಕ್ರೀದ್ ಹಬ್ಬವನ್ನು ಬಲಿದಾನದ ಹಬ್ಬ ಎಂದೇ ಕರೆಯಲ್ಪಟ್ಟಿತು ಎಂದರು.
ಈ ಸಂದರ್ಭದಲ್ಲಿ ಹಾಫಿಝ್ ಅಬ್ದುಲ್ಲಾ, ಅಬು ತಾಲಿಬ್, ಕಮಿಟಿಯ ಪದಾಧಿಕಾರಿಗಳು, ಸಮುದಾಯದ ಪ್ರಮುಖರು, ಜಮಾತಿನ ಬಾಂಧವರು ಮತ್ತು ಪುಟ್ಟ-ಪುಟ್ಟ ಮಕ್ಕಳು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.