ಹೊಸನಗರ ; ಸೌಲಭ್ಯ ವಂಚಿತ ಮಹಿಳೆಯ ಸಂಕಷ್ಟಕ್ಕೆ ಮಿಡಿದ ಸಿಎಂ ಸಿದ್ದರಾಮಯ್ಯ

0 0

ಹೊಸನಗರ: ತಾಲ್ಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನಸಂಪಳ್ಳಿ ಗ್ರಾಮದಲ್ಲಿ ಮನೆ ಇಲ್ಲದೆ ಅಂಬೇಡ್ಕರ್ ಭವನದಲ್ಲಿ ವಿಕಲಚೇತನ ಮಗಳು ಪೂಜಾ ಅವಳೊಂದಿಗೆ ಬದುಕು ಸವೆಸುತ್ತಿರುವ ಶಶಿಕಲಾ ಅವರ ನೋವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದು, ಈ ಮೂಲಕ ಸಂಕಷ್ಟದಲ್ಲಿರುವ ತಾಯಿ-ಮಗಳ ಸಮಸ್ಯೆ ಬಹುತೇಕ ಪರಿಹಾರಗೊಂಡಿದೆ. ಈ ಕುರಿತು ಜರುಗಿಸಿದ ಕ್ರಮದ ಬಗ್ಗೆ ಖುದ್ದು ಸಿಎಂ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಮಾರುತಿಪುರ ಸಮೀಪದ ಮೇಲಿನಸಂಪಳ್ಳಿ ಗ್ರಾಮದ ನಿವಾಸಿ ಶಶಿಕಲಾ ಅವರ ಸಂಕಷ್ಟದ ಕುರಿತು ಮಲ್ನಾಡ್ ಟೈಮ್ಸ್ ಸೇರಿದಂತೆ ರಾಜ್ಯ ಮಟ್ಟದ ಪತ್ರಿಕೆಗಳು ಮತ್ತು ಟಿ.ವಿ ಚಾನೆಲ್‌ಗಳಲ್ಲಿ ವರದಿ ಪ್ರಕಟಿಸಲಾಗಿತ್ತು. ಈ ಕುರಿತು ಸ್ಪಂದಿಸಿ ಕ್ರಮ ಜರುಗಿಸಿದ ಸಿಎಂ ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಡುಬಡತನದ ಜೊತೆಗೆ ಅಂಗವೈಕಲ್ಯದ ಸಮಸ್ಯೆಯಿಂದ ಬಳಲುತ್ತಿರುವ 20 ವರ್ಷದ ಮಗಳ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತಿರುವ ಶಶಿಕಲಾ ಅವರ ಬಳಿ ಸ್ವಂತ ಮನೆಯಾಗಲೀ, ಆಧಾರ್‌ ಕಾರ್ಡ್‌ ಆಗಲೀ ಮತ್ತು ಪಡಿತರ ಚೀಟಿಯಾಗಲೀ ಇಲ್ಲದಿರುವ ಕಾರಣಕ್ಕೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯವೂ ಸೇರಿ ಇನ್ನಿತರೆ ಯೋಜನೆಯಿಂದ ವಂಚಿತರಾಗಿದ್ದರು.

ಈ ವಿಚಾರವನ್ನು ಮಾಧ್ಯಮಗಳು ನಮ್ಮ ಕಚೇರಿಯ ಗಮನಕ್ಕೆ ತಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಅವರ ಮನೆಗೆ ಕಳುಹಿಸಿ ಆಧಾರ್‌ ಕಾರ್ಡ್‌ ಅಪ್ಲೋಡ್‌ ಮಾಡಿಸಲಾಗಿದೆ. ಜೊತೆಗೆ ಆದಷ್ಟು ಶೀಘ್ರ ತಾಯಿ ಮಗಳಿಗೆ ಪಡಿತರ ಚೀಟಿ ಒದಗಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ.

ಸೌಲಭ್ಯ ವಂಚಿತ ಬಡ ತಾಯಿ – ಮಗಳ ಬದುಕಿಗೆ ಆಸರೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇಂತಹ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳು ನಿಮಗೂ ಕಂಡು ಬಂದರೆ ನಮ್ಮ ಕಚೇರಿಯ @osd_cmkarnataka ಟ್ವಿಟರ್ ಖಾತೆಯನ್ನು ಸಂಪರ್ಕಿಸಿ ಎಂದು ಸಿಎಂ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!