ಬಗೆಹರಿಯದ ಮೂಲಭೂತ ಸೌಕರ್ಯಗಳ ಸಮಸ್ಯೆ ; ಗ್ರಾಮಸ್ಥರಿಂದ ವಿಧಾನಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

0 39

ಹೊಸನಗರ: ತಾಲ್ಲೂಕಿನ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರಗೋಡು ಗ್ರಾಮದ ಗೊರದಳ್ಳಿಯ ಊರಿನಲ್ಲಿ ಸುಮಾರು 66 ಹೆಚ್ಚು ಮನೆಗಳಿದ್ದು, ಸುಮಾರು 223ಕ್ಕೂ ಹೆಚ್ಚು ಮತಗಳಿದ್ದು, ಇಲ್ಲಿ ಗೊರದಳ್ಳಿಯಿಂದ ನಾಗರಕೊಡಿಗೆ ಪಿಡಬ್ಲ್ಯೂಡಿ ರಸ್ತೆ ಇದ್ದರೂ, ಸಹ ಕಳೆದ 25 ವರ್ಷಗಳಿಂದ ರಸ್ತೆಯ ಮಧ್ಯೆ ಸಿಮೆಂಟ್ ಪೈಪ್ ಹಾಕದೆ ಚರಂಡಿಯಲ್ಲಿ ಹೋಗುವ ನೀರು ರಸ್ತೆಯ ಮೇಲೆ ಹೋಗಿ ಸಂಪೂರ್ಣವಾಗಿ ರಸ್ತೆ ಹಾಳಾಗಿರುತ್ತದೆ. ಇದನ್ನು ಸರಿಪಡಿಸಲು ಸಾಕಷ್ಟು ಬಾರಿ ಶಾಸಕರಿಗೆ ಸಚಿವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಹೊಸನಗರದ ಗ್ರೇಡ್2 ತಹಶಿಲ್ದಾರ್ ರಾಕೇಶ್‌ರವರಿಗೆ ಮನವಿ ಪತ್ರ ಸಲ್ಲಿಸಿ ಮುಂದೆ ಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಮನವಿ ಪತ್ರದಲ್ಲಿ ಈ ರಸ್ತೆಯಲ್ಲಿ ನೂರಾರು ಜನ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು, ವೃದ್ದರೂ ಸಹ ಈ ರಸ್ತೆಯಲ್ಲೆ ಓಡಾಡಬೇಕಿದ್ದರೂ ಸಹ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರಿಯಾದ ರಸ್ತೆ ವ್ಯವಸ್ಥೆ ಇರುವುದಿಲ್ಲ. ಪ್ರತಿ ನಿತ್ಯ ಆ ರಸ್ತೆಯ ಅಕ್ಕ-ಪಕ್ಕದ ಮನೆಯವರು ಮನೆಯಲ್ಲಿ ವಾಸವಾಗಿರಲೂ ಸಾಧ್ಯವಾಗಿರುವುದಿಲ್ಲ. ಕಾರಣವೆನೆಂದರೆ, ಸದರಿ ನಮ್ಮ ಗ್ರಾಮ ಪಂಚಾಯಿತಿಯವರು ರಸ್ತೆಯನ್ನು ದುರಸ್ಥಿ ಕಾಮಗಾರಿ ಮಾಡಿರುತ್ತಾರೆ. ಆ ರಸ್ತೆಗೆ ಸುಮಾರು 300 ಮೀಟರ್ ಅಳತೆಯಷ್ಟು ರಸ್ತೆ ಕಾಮಾಗಾರಿ ಮಾಡಲು ಯೋಜನೆಯನ್ನು ತಯಾರಿಸಿರುತ್ತಾರೆ. ಆದರೆ ಪಂಚಾಯಿತಿಯವರು ಆ ರಸ್ತೆಯನ್ನು ಸುಮಾರು 1 ಕಿ.ಮೀ ವರೆಗೂ ಕೇವಲ ಚರಂಡಿಯ ಮಣ್ಣನ್ನು ರಸ್ತೆಗೆ ಎತ್ತಿಹಾಕಿ ತಮ್ಮ ಕೆಲಸವನ್ನು ಮುಗಿಸಿರುತ್ತಾರೆ. ಇದು ಕೇವಲ ಬಿಲ್ ಮಾಡಿಸಿಕೊಳ್ಳುವ ನೆಪಮಾಡಿ ಈ ಕಾಮಗಾರಿಯನ್ನು ಮಾಡಿರುತ್ತಾರೆ. ಆದರೆ ಈಗ ಸದರಿ ರಸ್ತೆಯಲ್ಲಿ ಶಾಲಾ ಮಕ್ಕಳು, ವೃದ್ಧರು, ಹಾಗೂ ಸಾರ್ವಜನಿಕರು ಓಡಾಡುವ ಪರಿಸ್ಥಿತಿಯಲ್ಲಿ ಇಲ್ಲ, ಮತ್ತು ಅಕ್ಕ-ಪಕ್ಕದ ಮನೆಯವರು ಮನೆಯಲ್ಲಿ ವಾಸಿಸಲೂ ಮತ್ತು ಉಸಿರಾಡಲೂ ಸಹ ಸಾಧ್ಯವಾಗುತ್ತಿಲ್ಲ, ಈ ರಸ್ತೆಯು ಸಂಪೂರ್ಣವಾಗಿ ದೂಳಿಂದ ಕೂಡಿದ ರಸ್ತೆಯಾಗಿದೆ. ಸದರಿ ರಸ್ತೆಯ ಪಕ್ಕದ ಊರಿನಲ್ಲಿ ಮರಳಿನ ಸ್ಟಾಕ್‌ಯಾರ್ಡ್ ಮಾಡಿದ್ದು, ಇದೇ ರಸ್ತೆಯಲ್ಲಿ ಆ ಸ್ಟಾಕ್‌ಯಾರ್ಡ್ ಶರಾವತಿ ನದಿಯಿಂದ ಮರಳನ್ನು ಲಾರಿಯ ಮುಖಾಂತರ ಪ್ರತಿ ನಿತ್ಯ ತೆಗೆದುಕೊಂಡು ಹೋಗುತ್ತಿದ್ದಾರೆ, ಇದೇ ತರಹ ಸುಮಾರು 10-15ವರ್ಷಗಳಿಂದ ನಡೆಯುತ್ತಾ ಬಂದಿದೆ. ಇದರಿಂದ ಸರ್ಕಾರಕ್ಕೆ ಲಕ್ಷಗಟಲೆ ಆದಾಯ ಹೋಗುತ್ತಿದೆ.

ಆದರೂ ಸಹ ಸಾರ್ವಜನಿಕರಿಗೆ ಆಗುವ ತೊಂದರೆ ಬಗ್ಗೆ ಯಾವೋಬ್ಬ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಇದರ ಬಗ್ಗೆ ಸಾಕಷ್ಟು ಸಲ ಜನ ಪ್ರತಿನಿಧಿಗಳಿಗೆ ಮನವಿಯನ್ನು ಮಾಡಿದ್ದರೂ ಸಹ ಯಾವ ಪ್ರಯೋಜನವಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಊರಿನ ಗ್ರಾಮಸ್ಥರು ಎಲ್ಲರೂ ತೀರ್ಮಾನ ಮಾಡಿ ಚುನಾವಣೆ ಬಹಿಷ್ಕಾರ ಮಾಡುವುದೊಂದೆ ದಾರಿಯಾಗಿದೆ. ಆದ್ದರಿಂದ ನಮ್ಮ ಬೇಡಿಕೆಗಳು ಈಡೇರಿಸುವರೆಗೂ ಯಾವ ಜನ ಪ್ರತಿ ನಿಧಿಗಳು ನಮ್ಮೂರಿಗೆ ಮತ ಕೇಳಲೂ ಬರಬಾರದಾಗಿ ಕೇಳಿಕೊಳ್ಳುತ್ತೇವೆ. ಒಂದು ವಾರದ ಒಳಗೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಂದೆ ವಿಭಿನ್ನ ರೀತಿ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇವೆಂದು ಈ ಮೂಲಕ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ ರೇಣುಕಯ್ಯ ಹಾಗೂ ಗ್ರಾಮಸ್ಥರು ಉಪಸ್ಥತರಿದ್ದರು.

Leave A Reply

Your email address will not be published.

error: Content is protected !!