ಹೆಬ್ಬಿಗೆ ಗ್ರಾಮಸ್ಥರಿಂದ ಹೊಸನಗರ ತಾಲೂಕು ಕಚೇರಿ ಎದುರು ಹಕ್ಕೊತ್ತಾಯ ಧರಣಿ ; ಯಾಕೆ ?

0 53

ಹೊಸನಗರ : ಬಗರ್ ಹುಕುಂ ಪಹಣಿ ಹಾಗೂ 94ಸಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಇಂದು ನಿಟ್ಟೂರು ಗ್ರಾಪಂ ವ್ಯಾಪ್ತಿಯ ಹೆಬ್ಬಿಗೆ ಗ್ರಾಮಸ್ಥರು ಹೊಸನಗರ ತಾಲೂಕು ಕಚೇರಿ ಮುಂದೆ ಧರಣಿ ನಡೆಸಿ ಹಕ್ಕೊತ್ತಾಯ ಮಾಡಿದರು.

ಹಕ್ಕುಪತ್ರ ನೀಡುವ ತನಕ ಇಲ್ಲೇ ವಾಸ್ತವ್ಯ ಮಾಡುವ ಯೋಚನೆ ಇದೆ. ಹೆಬ್ಬಿಗೆ ಗ್ರಾಮದ ಕಂದಾಯ ಭೂಮಿಯನ್ನು ನಿವೃತ್ತ ಮಿಲಿಟರಿಯವರಿಗೆ ಮಂಜೂರು ಮಾಡಲು ಹೊರಟ ಕಂದಾಯ ಇಲಾಖೆ ಮೇಲೆ ಧಿಕ್ಕಾರ ಕೂಗಿ, ಮಿಲಿಟರಿ ಯೋಧರ ಬಗ್ಗೆ ನಮಗೆ ಅಪಾರ ಗೌರವ ಇದ್ದು, ಅವರಿಗೆ ಭೂಮಿ ಕೊಡುವ ಬಗ್ಗೆ ನಮ್ಮ ಸದಾಭಿಪ್ರಾಯವಿದ್ದರೂ ಸಹ ಶರಾವತಿ ಸಂತ್ರಸ್ತ ನಮ್ಮ ಗ್ರಾಮದ ಭೂಮಿ ಕೊಡಲು ವಿರೋಧವಿದೆ. ಈಗಾಗಲೇ ಶರಾವತಿ ಯೋಜನೆಯಲ್ಲಿ ನಮ್ಮ ಫಲವತ್ತಾದ ಭೂಮಿ ಕಳೆದುಕೊಂಡಿದ್ದು ಮತ್ತೆ ನಮ್ಮ ಭೂಮಿ ಬೇರೆಯವರಿಗೆ ಕೊಡದಂತೆ ಈ ಸಂದರ್ಭದಲ್ಲಿ ಧರಣಿ ನಿರತ ಪ್ರತಿಭಟನಾಕಾರರು ಮನವಿ ಮಾಡಿದರು.

ತಹಶೀಲ್ದಾರ್ ವಿ.ಎಸ್ ರಾಜೀವ್ ರವರು ಇದೆ ಫೆ.15 ರೊಳಗೆ ಬಗರ್ ಹುಕುಂ ಪಹಣಿ ಮತ್ತು 94ಸಿ ಹಕ್ಕುಪತ್ರ ನೀಡುವ ಭರವಸೆ ನೀಡಿದ ಮೇಲೆ ತಾತ್ಕಾಲಿಕ ಪ್ರತಿಭಟನೆ ವಾಪಾಸ್ ಪಡೆದರು. ಫೆ. 15 ರೊಳಗೆ ನಮ್ಮ ಹಕ್ಕು ನಮಗೆ ನೀಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ಪ್ರತಿಭಟನಾಕಾರರು ನೀಡಿದರು. ನಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಹೆಬ್ಬಿಗೆ ಗ್ರಾಮದ ನಿಯೋಗ ಶಿವಮೊಗ್ಗಕ್ಕೆ ಹೊರಟಿತು.

ಹೆಬ್ಬಿಗೆ ನಾಗರಿಕ ಸಮಿತಿ ಅಧ್ಯಕ್ಷ ಕೆ.ಪಿ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಪುರುಷೋತ್ತಮ ಶಾನುಬೋಗ್ ಸೇರಿದಂದೆ 20 ಜನರ ನಿಯೋಗ ಈ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!