ಹೊಸನಗರ: ಬೆಂಗಳೂರಿನಿಂದ ಕೊಲ್ಲೂರು ದೇವಿಯ ದರ್ಶನ ಮಾಡಿ ಸೋಮವಾರ ಬೆಳಗ್ಗೆ ಸಿಗಂದೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ಸೋಮವಾರ ಬೆಳಗ್ಗೆ 7-30ರ ಸುಮಾರಿಗೆ ತಾಲೂಕಿನ ನಿಟ್ಟೂರು ಗ್ರಾಪಂ ವ್ಯಾಪ್ತಿಯ ನಾಗೋಡಿ ಸಮೀಪ ನಡೆದಿದೆ.
ಈ ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಸುಮಾರು 28 ಮಂದಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ 108 ಹಾಗೂ ಸರ್ಕಾರಿ ಅಂಬ್ಯುಲೆನ್ಸ್ ಚಾಲಕರು ಉಳಿದ ಎಲ್ಲಾ ಪ್ರಯಾಣಿಕರಿಗೆ ಸ್ಥಳದಲ್ಲೆ ಸೂಕ್ತ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಸುಮಾರು ಐದಾರು ಮಂದಿ ಕೈ-ಕಾಲು ಮುರಿತಕ್ಕೆ ಒಳಗಾಗಿದ್ದು ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆತ ಕಾರಣ ಈಗ ಅವರೆಲ್ಲ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಮಯ ಪ್ರಜ್ಞೆ ಮೆರೆದ ಹೊಸನಗರ, ನಗರ, ರಿಪ್ಪನ್ ಪೇಟೆ ಹಾಗೂ ಶಿವಮೊಗ್ಗ ಆಸ್ಪತ್ರೆಗಳ 108 ಚಾಲಕರಾದ ಜಿ.ಎನ್. ಪ್ರವೀಣ್, ವಸಂತ್, ಗಿರೀಶ್, ಕಾಂತರಾಜ್, ಯಲ್ಲಪ್ಪ, ಅರುಣ ಅವರ ಕಾರ್ಯವೈಖರಿಯನ್ನು ಸ್ಥಳೀಯರು ಕೊಂಡಾಡಿದ್ದಾರೆ.