ಹೊಸನಗರ : ‘ಹೊಸನಗರ ತೋಟಗಾರಿಕಾ ಇಲಾಖೆಯಲ್ಲಿ ಸಪೋಟ, ಮಾವಿನ ಮರಗಳ ಮಾರಣ ಹೋಮ – ಪರಿಸರ ಪ್ರೇಮಿಗಳೇ ಎಲ್ಲಿದ್ದೀರಿ?’ ಎಂಬ ಶೀರ್ಷಿಕೆ ಅಡಿಯಲ್ಲಿ ಮೇ 12 ರಂದು ‘ಮಲ್ನಾಡ್ ಟೈಮ್ಸ್’ ಸುದ್ದಿ ಮಾಡಿತ್ತು. ಈ ಸುದ್ದಿಯ ಕುರಿತಂತೆ ಹೊಸನಗರ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಟಿ.ಸಿ ಪುಟ್ಟನಾಯ್ಕ್ ಸುದ್ದಿ ಸಂಸ್ಥೆಗೆ ಸ್ಪಷ್ಟನೆ ನೀಡಿದ್ದಾರೆ. ಅದು ಈ ಕೆಳಗಿನಂತಿದೆ.
ತಾವು ನೀಡಿರುವ ಪ್ರಕಟಣೆಯು ವೈಜ್ಞಾನಿಕ ಹಿನ್ನೆಲೆಯನ್ನು ಅರಿಯದೆ ಪ್ರಕಟಿಸಿರುವುದು ವಿಷಾದನೀಯ. ಕಾರಣ, ಗಂಗನಕೊಪ್ಪ ತೋಟಗಾರಿಕೆ ಕ್ಷೇತ್ರದಲ್ಲಿರುವ ಸಪೋಟ ಮರಗಳು 47-55 ವರ್ಷ ವಯಸ್ಸಾದ ಮರಗಳಾಗಿರುತ್ತವೆ. ಅವುಗಳಿಂದ ನಿರೀಕ್ಷಿತ ಗುಣಮಟ್ಟದ ಇಳುವರಿ ಬರುತ್ತಿಲ್ಲ, ಆದ್ದರಿಂದ ಪುನಶ್ಚೇತನ (Rejuvenation) ಎಂಬ ತಾಂತ್ರಿಕತೆಯಿಂದ ಅವುಗಳ ಇಳುವರಿ ಹೆಚ್ಚಿಸಲು ಪ್ರತಿ ಮರದಲ್ಲಿ, ಒಂದು ಆರೋಗ್ಯವಂತ ಹಸಿರು ಕೊಂಬೆಯನ್ನು ಬಿಟ್ಟು ಉಳಿದ ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಕಾರಣ ಉಳಿಸಿರುವ ಕೊಂಬೆಯಿಂದ ಆಹಾರ ಉತ್ಪಾದನೆಯಾಗಿ ಮರ ಸಾಯದೇ ಇರಲಿ ಎಂಬುದಾಗಿದೆ ಹಾಗೂ ಕತ್ತರಿಸಿರುವ ಭಾಗದಿಂದ ಹೊಸ ಚಿಗುರು ಬಂದು ಕೊಂಬೆಗಳು ಶೀಘ್ರವಾಗಿ ಬೆಳೆದು ಅವುಗಳಲ್ಲಿ ಇಳುವರಿಯನ್ನು ಪಡೆಯಬಹುದಾಗಿದೆ. ಈ ವಿಧಾನ ಅನುಸರಿಸಲು ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯ Farms and nursery ವಿಭಾಗದಿಂದ ಅನುಮತಿ ಪಡೆದುಕೊಂಡು ತಾಂತ್ರಿಕತೆಯನ್ನು ಅಳವಡಿಸಲಾಗಿದೆ.
ಮಾವಿನ ಮರಗಳ ಬಗ್ಗೆ ಹೇಳುವುದಾದರೆ, ಮಾವಿನ ತಳಿಯನ್ನು ಕಾಯ್ದಿರಿಸಿ ಅವುಗಳಿಂದ ಕಸಿ ಕೊಂಬೆಯನ್ನು ಪಡೆದು ಕಸಿ ಸಸಿ ಉತ್ಪಾದಿಸಲು ಅನುವು ಆಗುವಂತೆ ನೆಲಮಟ್ಟದಿಂದ 3-4 ಅಡಿ ಎತ್ತರದಲ್ಲಿ ಕತ್ತರಿಸಿ ಇವುಗಳಲ್ಲಿ ಬರುವ ಕಸಿ ಕೊಂಬೆಯನ್ನು ಮಾವಿನ ಕಸಿ ಸಸ್ಯೋತ್ಪಾದನೆಗಾಗಿ ಉಪಯೋಗಿಸಿಕೊಳ್ಳಲು ಕಾಯ್ದಿರಿಸಲಾಗಿದೆ. ಇವುಗಳಿಂದ ಯಾವುದೇ ಇಳುವರಿ ಪಡೆದುಕೊಳ್ಳಲು ಅವಕಾಶ ಇರುವುದಿಲ್ಲ. ಇವುಗಳ ಎತ್ತರವನ್ನು ಕೈಗೆ ಸಿಗುವಹಾಗೆ ನಿರ್ವಹಿಸಬೇಕಾಗಿರುತ್ತದೆ. ಆದ್ದರಿಂದ ಈ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುವಂತೆ ಈ ಮೂಲಕ ವಿನಂತಿಸಿದೆ ಎಂದು ತಿಳಿಸಿದ್ದಾರೆ.