ಹೊಸನಗರ: ಸಹಕಾರ ಸಂಸ್ಥೆಗಳಲ್ಲಿ ಸಂಸ್ಥೆಯ ಷೇರುದಾರರೆ ನಿಜವಾದ ಮಾಲೀಕರು. ಷೇರುದಾರರು ಇದು ನಮ್ಮ ಸಂಸ್ಥೆ ಎಂದು ವ್ಯವಹರಿಸಿದರೆ ಸಂಸ್ಥೆ ಬಲುಬೇಗ ಉಚ್ರಾಯ ಸ್ಥಿತಿಗೆ ತಲುಪುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಲಗೋಡು ರತ್ನಾಕರ್ ಹೇಳಿದರು.
ತಾಲ್ಲೂಕಿನ ಮುಂಬಾರು ಗ್ರಾಮದ ಪ್ರಾಥಮಿಕ ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತುರುಗೋಡು ನಾಗರಾಜ್ ಅವರ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಒಂದು ಸಂಸ್ಥೆ ಆರ್ಥಿಕವಾಗಿ ಹೆಮ್ಮರವಾಗಿ ಬೆಳೆದು ನಿಂತರೆ ಷೇರುದಾರರು ಕೂಡ ಆರ್ಥಿಕವಾಗಿ ಸದೃಢವಾಗಿ ಬೆಳೆಯಬಹುದಾಗಿದೆ. ಸಹಕಾರ ಸಂಘಗಳು ಆರ್ಥಿಕವಾಗಿ ಸದೃಢವಾಗಿರಬೇಕು. ವ್ಯವಹಾರಿಕವಾಗಿ ಸಂಘ ಸಂಸ್ಥೆಗಳು ಪ್ರಬಲವಾಗಿರಬೇಕು. ಸಂಸ್ಥೆಯನ್ನು ಸೋಲಲು ಬಿಡಬಾರದು. ಒಮ್ಮೆ ಸಂಸ್ಥೆ ಸೋತರೆ ಮತ್ತೆ ಕಟ್ಟಲು ಸಾಧ್ಯವಿಲ್ಲ ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತುರಗೋಡು ನಾಗರಾಜ್ ಅವರನ್ನು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸನ್ಮಾನಿಸಿದರು.
ಡಿಸಿಸಿ ಬ್ಯಾಂಕ್ ಪ್ರತಿನಿಧಿ ಪರಮೇಶ್ವರಪ್ಪ, ಪ್ರಮುಖರಾದ ಬಿ.ಜಿ. ನಾಗರಾಜ್, ಎರಗಿ ಉಮೇಶ್, ಬಿ.ಜಿ.ಚಂದ್ರಮೌಳಿ ಗೌಡ, ಅಬ್ಬಿ ಈಶ್ವರಪ್ಪ, ಲೋಕನಾಯ್ಕ, ತಿಮ್ಮನಾಯ್ಕ, ಶೇಖರಪ್ಪ ಇದ್ದರು.
ಹುಲುಗಾರು ಕೃಷ್ಣಮೂರ್ತಿ ಕಾರ‍್ಯಕ್ರಮ ನಿರ್ವಹಿಸಿದರು.