ಚಲಿಸುತ್ತಿದ್ದ ಲಾಂಚ್‌ನ ಡೋರ್‌ ಕೇಬಲ್‌ ತುಂಡಾಗಿ ನದಿಗೆ ಬಿದ್ದ ಬೈಕ್ ; ರಕ್ಷಣೆಗೆ ಹೋದ ಲಾಂಚ್ ಸಿಬ್ಬಂದಿಯೂ ನೀರಿಗೆ !! ಮುಂದೇನಾಯ್ತು ?

0 508

ಹೊಸನಗರ : ಶರಾವತಿ ನದಿಯಲ್ಲಿ ಸಾಗುತ್ತಿದ್ದ ವೇಳೆ ಹಸಿರುಮಕ್ಕಿ ಲಾಂಚ್‌ನ ಡೋರ್‌ ಕೇಬಲ್‌ ತುಂಡಾದ ಪರಿಣಾಮ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ವೊಂದು ನದಿಗೆ ಬಿದ್ದಿದೆ. ಬೈಕ್ ರಕ್ಷಣೆ ಮಾಡಲು ಹೋದ ಲಾಂಚ್ ಸಿಬ್ಬಂದಿ ಸಹ ಹೊಳೆಗೆ ಬಿದ್ದಿದ್ದು, ಕೊನೆಗೆ ಈಜಿ ದಡ ಸೇರಿದ್ದಾರೆ. ಅದೃಷ್ಟವಶಾತ್‌ ಆ ಸ್ಥಳದಲ್ಲಿ ಯಾರೂ ಇಲ್ಲದೇ ಇದ್ದಿದ್ದರಿಂದ ಪ್ರಾಣಾಪಾಯದಿಂದ ಜನ ಪಾರಾಗಿದ್ದಾರೆ.

ತಾಲೂಕಿನ ಹಸಿರುಮಕ್ಕಿ ಲಾಂಚ್‌ನಲ್ಲಿ ಈ ಅವಘಡ ಸಂಭವಿಸಿದ್ದು ಲಾಂಚ್‌ನ ಡೋರ್ ಕೇಬಲ್ ಕಟ್ ಆಗಿದ್ದೇ ಇಷ್ಟೆಲ್ಲ ಘಟನೆಗೆ ಕಾರಣವಾಗಿದೆ. ಲಾಂಚ್‌ನಲ್ಲಿದ್ದ ಒಂದು ಬಸ್ ಸೇರಿದಂತೆ 7 ಕಾರು ಮತ್ತು 10 ಬೈಕ್‌ಗಳು ಈಗ ಲಾಂಚ್‌ನಲ್ಲಿಯೇ ಸಿಲುಕಿಕೊಂಡಿವೆ.

ಏನಿದು ಘಟನೆ?

ಎಂದಿನಂತೆ ಹಸಿರುಮಕ್ಕಿ ಲಾಂಚ್‌ನಲ್ಲಿ ಬಸ್‌ ಸೇರಿದಂತೆ ಕಾರುಗಳು ಹಾಗೂ ಬೈಕ್‌ಗಳನ್ನು ಹತ್ತಿಸಿಕೊಳ್ಳಲಾಗಿದೆ. ಅಲ್ಲದೆ, ಸಾರ್ವಜನಿಕರು ಸಹ ಇದ್ದರು. ಕೆಬಿ ಸರ್ಕಲ್ ಕಡೆಯಿಂದ ಸಾಗರ ಕಡೆ ಹೋಗುವ ನಿಲ್ದಾಣ ಪಾಯಿಂಟ್‌ ಬಳಿ ಹೋಗುತ್ತಿದ್ದ ಲಾಂಚ್‌ನ ಡೋರ್‌ ಕೇಬಲ್‌ ಕಟ್ ಆಗಿದೆ. ಕೇಬಲ್‌ ಕಟ್‌ ಆಗುತ್ತಿದ್ದಂತೆ ಡೋರ್‌ ಮೇಲೆ ನಿಲ್ಲಿಸಿದ್ದ ಬೈಕ್‌ ಕೆಳಗೆ ನೀರಿಗೆ ಬೀಳಲಾರಂಭಿಸಿದೆ. ಆಗ ಅಲ್ಲೇ ಇದ್ದ ಲಾಂಚ್‌ ಸಿಬ್ಬಂದಿಯೊಬ್ಬರು ಬೈಕ್‌ ಅನ್ನು ಹಿಡಿದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಬೈಕ್‌ ನೀರಿನೊಳಗೆ ಜಾರಿದೆ. ಜತೆಗೆ ಇವರಿಗೂ ಸಹ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದಾರೆ. ಕೊನೆಗೆ ಈಜಿ ದಡ ಸೇರಿದ್ದಾರೆ.

ಪ್ರಯಾಣಿಕರು ಸೇಫ್

‌ಲಾಂಚ್‌ ಅನ್ನು ನಿಲುಗಡೆ ಮಾಡಬೇಕಾದರೆ ಡೋರ್‌ ಬಹಳ ಮುಖ್ಯವಾಗುತ್ತದೆ. ಕೊನೆಗೆ ಆ ಡೋರ್‌ ಮೂಲಕವೇ ವಾಹನಗಳ ಸಹಿತ ಜನರು ಸಹ ರಸ್ತೆಗೆ ದಾಟಬೇಕು. ಆದರೆ, ಡೋರ್‌ ಕೇಬಲ್‌ ಕಟ್‌ ಆಗಿದ್ದರಿಂದ ಜನತೆ ದಡಕ್ಕೆ ಹೋಗಲು ಕಷ್ಟವಾಗಿದೆ. ಕೊನೆಗೆ ಲಾಂಚ್‌ ಅನ್ನು ಹಿಮ್ಮುಖವಾಗಿ ದಡದತ್ತ ತಂದು, ಪ್ರಯಾಣಿಕರನ್ನು ಸುರಕ್ಷಿತವಾಗಿ ದಡ ಸೇರಿಸಲಾಯಿತು.

ಲಾಂಚ್‌ ಇಲ್ಲದೆ ಪರದಾಟ

ಲಾಂಚ್ ಡೋರ್ ಮೇಲೆ ವಾಹನ ಹಾಕಬಾರದು ಎಂಬ ನಿಯಮ ಇದ್ದರೂ ಲಾಂಚ್ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಈಗ ಲಾಂಚ್‌ನಲ್ಲಿ ಬಸ್‌, ಕಾರುಗಳು, ಬೈಕ್‌ಗಳು ಹಾಗೇ ಸಿಲುಕಿಕೊಂಡಿವೆ. ಹಸಿರು ಮಕ್ಕಿ ಲಾಂಚ್ ಇಲ್ಲದೆ ಮಾರ್ಗ ಬಂದ್ ಆಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.

Leave A Reply

Your email address will not be published.

error: Content is protected !!