ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಹೊಸನಗರದಲ್ಲೀಗ ಕುಡಿಯುವ ನೀರಿನ ಕೊರತೆ ; ಎರಡು ದಿನಕ್ಕೊಮ್ಮೆ ನೀರು ಸರಬರಾಜು !!

0 56

ಹೊಸನಗರ: ಈ ಬಾರಿಯ ಬೇಸಿಗೆಯಲ್ಲಿ ಎಲ್ಲಿಲ್ಲದ ತಾಪಮಾನ ದಾಖಲಾಗುತ್ತಿದ್ದು ಹೊಸನಗರ ಪಟ್ಟಣದಲ್ಲಿ ಕುಡಿಯುವ ನೀರಿಗೆ ತತ್ವಾರ ಆಗುವ ಎಲ್ಲ ಸಂಭವ ಗೋಚರಿಸುತ್ತಿದೆ.


ಕಳೆದ ವರ್ಷಕ್ಕೆ ಹೋಲಿಸಿದರೆ ಆಗಾಗ ಮಳೆ ಬಾರದೆ ಇರುವುದರಿಂದ ಪಟ್ಟಣದಲ್ಲಿ ಬಿಸಿಲ ಬೇಗೆ ಹೆಚ್ಚಿದ್ದು ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ಕಂಡುಬರತೊಡಗಿದೆ.


ಸದ್ಯ ಪಟ್ಟಣ ಪಂಚಾಯತ್ ಪಟ್ಟಣದಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದು ಜನರಿಗೆ ಅವಶ್ಯ ನೀರು ಲಭ್ಯವಾಗುತ್ತಿಲ್ಲ. ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನೀರಿನ ಅಸಮರ್ಪಕ ಸರಬರಾಜಿನಿಂದ ಬೇಸತ್ತ ನಾಗರಿಕರು ಪಟ್ಟಣ ಪಂಚಾಯತ್‌ಗೆ ಹಿಡಿಶಾಪ ಹಾಕುತ್ತಿದ್ದಾರೆ. ಮಲೆನಾಡ ನಡುಮನೆ ಹೆಚ್ಚು ಮಳೆ ಬೀಳುವ ಹೊಸನಗರದಲ್ಲೆ ನೀರಿನ ಬವಣೆ ಶುರುವಾಗಿದ್ದು ‘ಇದಕ್ಕೆ ಯಾರು ಹೊಣೆ?’ ಎಂಬ ಪ್ರಶ್ನೆ ಎದುರಾಗಿದೆ.


ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಸಮೀಪದ ಕಲ್ಲುಹಳ್ಳ ಜಾಕ್‌ವೆಲ್‌ನಲ್ಲಿ ನೀರಿನ ಮೂಲ ಬತ್ತ ತೊಡಗಿದೆ. ಮುಂಗಾರು ಮಳೆ ಬಾರದೆ ಇದ್ದಲ್ಲಿ ಪರಿಸ್ಥಿತಿ ವಿಷಮಗೊಳ್ಳುವ ಸಂಭವ ಕಂಡುಬಂದಿದೆ.


ಇಲ್ಲಿನ 11 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸುಮಾರು 1100 ಗೃಹ ಬಳಕೆ ಹಾಗೂ 100ಕ್ಕೂ ಹೆಚ್ಚು ವಾಣಿಜ್ಯ ಬಳಕೆಯ ನಲ್ಲಿ ಸಂಪರ್ಕವಿದೆ. ಇದಕ್ಕೆ ಕಲ್ಲುಹಳ್ಳದ ಜಾಕ್‌ವೆಲ್ ಏಕಮಾತ್ರ ಜಲಮೂಲವಾಗಿದೆ. ಕಲ್ಲುಹಳ್ಳ ಶರಾವತಿ ಹಿನ್ನೀರು ನಡುವಿನ ಹೊಳೆಯಾಗಿದೆ. ಇಲ್ಲಿ ಈಗಾಗಲೇ ನೀರಿನ ಹರಿವು ನಿಂತು ತಿಂಗಳೆ ಕಳೆದಿದೆ. ಹೊಳೆಯ ನಡುವಿನ ಜಾಕ್‌ವೆಲ್‌ನಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರು ಲಭ್ಯವಿದೆ. ಈ ನೀರಿಗೆ ಕಟ್ಟೆ ಕಟ್ಟಿ ನೀರು ಸಂಗ್ರಹಿಸಿಟ್ಟು ನೀರುಣಿಸುವ ಕಾರ‍್ಯ ನಡೆಯುತ್ತಿದೆ.


ಏಪ್ರಿಲ್ ಮೊದಲ ವಾರದಲ್ಲಿಯೇ ಹೊಳೆಯ ನೀರು ಬತ್ತಿದ ಪರಿಣಾಮ ಪಟ್ಟಣ ಪಂಚಾಯತಿ ಆಡಳಿತ ಜಾಕ್‌ವೆಲ್ ಸಮೀಪ 30 ಅಡಿ ಉದ್ದಗಲದ ಹೊಂಡ ತೆಗೆದು ನೀರನ್ನು ಸಂಗ್ರಹ ಮಾಡಲಾಗಿದೆ. ಇದೇ ನೀರನ್ನು ಈಗ ಶುದ್ಧೀಕರಿಸಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಹೊಂಡದಲ್ಲಿ ಸಂಗ್ರಹವಾಗುತ್ತಿರುವ ನೀರು ಬರಿದಾದಲ್ಲಿ ನಲ್ಲಿ ನೀರು ಸರಬರಾಜು ಮಾಡುವುದು ಅಸಾಧ್ಯವಾಗಿದೆ.


2019ರಲ್ಲೂ ಹೀಗೆ ಆಗಿತ್ತು:
2019ರಲ್ಲಿಯೂ ಹೀಗೆ ನೀರಿನ ಕೊರತೆ ಉಂಟಾಗಿ ಜನರು ತತ್ವಾರ ಪಡುವಂತಾಗಿತ್ತು. ನಂತರ ಎರಡ್ಮೂರು ವರ್ಷ ಆಗಾಗ ಮಳೆ ಆಗುತ್ತಿದ್ದರಿಂದ ನೀರಿನ ಕೊರತೆ ಕಾಣಿಸಿಕೊಂಡಿರಲಿಲ್ಲ. ಮತ್ತೆ ಈ ವರ್ಷ ಮಳೆ ಬಾರದೆ ತಾಪಮಾನ ಏರಿಕೆ ಕಂಡುಬಂದಿದ್ದು, ನೀರಿನ ಸಮಸ್ಯೆ ಎದುರಾಗಿದೆ. ಹಿನ್ನೀರು ಪ್ರದೇಶದ ಸುತ್ತಮುತ್ತಲೂ ತೋಟಗಳಿಗೆ ನೀರಿನ ಬೇಡಿಕೆ ಹೆಚ್ಚಿದ್ದು, ಬಳಕೆ ಪ್ರಮಾಣವೂ ಹೆಚ್ಚಿದೆ. ಇದು ಜಾಕ್‌ವೆಲ್‌ನಲ್ಲಿ ನೀರಿನ ಕೊರತೆಗೆ ಪ್ರಮುಖ ಕಾರಣವಾಗಿದೆ.


ಹಳ್ಳ ಹಿಡಿದ ಯೋಜನೆ:
ಶರಾವತಿ ನದಿಗೆ ಚೆಕ್‌ಡ್ಯಾಂ ನಿರ್ಮಿಸಿ ಪಟ್ಟಣಕ್ಕೆ ನೀರು ಕಲ್ಪಿಸುವ ದೊಡ್ಡ ಯೋಜನೆ ಸಹಾ ಕಳೆದ ಐದಾರು ವರ್ಷಗಳಿಂದ ಜಾರಿಗೆ ಬಂದಿಲ್ಲ. ಈ ಹಿಂದೆ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ ಒಂದೆ ಮಳೆಗೆ ಹಳ್ಳ ಹಿಡಿದು ಹೋಯಿತು.
ಜನಪ್ರತಿನಿದಿಗಳು ನೀಡಿದ ಭರವಸೆ ಎಳ್ಳಷ್ಟು ಜಾರಿಗೆ ಆಗಿಲ್ಲ. ಹೊಸದಾಗಿ ಬಂದ ಶಾಸಕರೆಲ್ಲ ಹೊಸ ಹೊಸ ಯೋಜನೆಗಳ ಆಶ್ವಾಸನೆ ಕೊಟ್ಟರು. ಮತ್ತೆ ಇತ್ತ ಮುಖ ಮಾಡಿಲ್ಲ ಎಂಬುದು ನಾಗರಿಕರ ಆರೋಪವಾಗಿದೆ.

“ಪಟ್ಟಣದಲ್ಲಿ ಪ್ರತಿವರ್ಷವೂ ಕುಡಿಯುವ ನೀರಿನ ಬವಣೆ ತಪ್ಪದಾಗಿದೆ. ಮಳೆ ಬಂದರೂ ನೀರಿಲ್ಲ. ಬಾರದೇ ಇದ್ದರೂ ನೀರಿಲ್ಲ. ಇಲ್ಲಿನ ಪಟ್ಟಣ ಪಂಚಾಯತ್ ಸಮರ್ಪಕ ಯೋಜನೆ ಜಾರಿಗೆ ತಾರದೇ ಇದ್ದುದೇ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಪಟ್ಟಣ ಸರಬರಾಜು ವ್ಯವಸ್ಥೆಗೆ ಶಾಶ್ವತ ಯೋಜನೆ ಬೇಕಾಗಿದೆ. ಸರ್ಕಾರ ಇತ್ತ ಮನ ಮಾಡಬೇಕು.”
– ಶಿವಕುಮಾರ್, ನಾಗರಿಕ

“ಈ ವರ್ಷ ನೀರಿನ ಹರಿವು ನಿರೀಕ್ಷೆಗೂ ಮೀರಿ ಕುಸಿತವಾಗಿದೆ. ಜಾಕ್‌ವೆಲ್‌ಗೆ ಹೊಂದಿಕೊಂಡು ಗುಂಡಿ ತೆಗೆದು ಹೊಳೆಯ ಸೀಪೇಜ್ ನೀರನ್ನು ಸಂಗ್ರಹ ಮಾಡಲಾಗುತ್ತಿದೆ. ಸದ್ಯ ಎಲ್ಲಾ ವಾರ್ಡ್‌ಗಳಿಗೂ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಶುದ್ಧೀಕರಣಗೊಳಿಸಿ ನೀಡಲಾಗುತ್ತಿದ್ದರೂ. ನೀರಿನ ಬಣ್ಣದಲ್ಲಿ ಸ್ವಲ್ಪ ಬದಲಾವಣೆಯಿದೆ. ಇನ್ನೂ ಮಳೆ ಆರಂಭವಾಗದೇ ಇದ್ದಲ್ಲಿ ಪರಿಸ್ಥಿತಿ ಕಷ್ಟವಾಗಲಿದೆ. ಪಟ್ಟಣ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಇದಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ.”
– ಬಾಲಚಂದ್ರಪ್ಪ, ಮುಖ್ಯಾಧಿಕಾರಿ ಪ.ಪಂ., ಹೊಸನಗರ

Leave A Reply

Your email address will not be published.

error: Content is protected !!