ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರರವರ ಹಾಗೂ ಸ್ಥಳೀಯ ರಾಜಕೀಯ ನಾಯಕರ ಮೇಲೆ ಮತದಾರರ ಮುನಿಸು ; ಬೇಡಿಕೆ ಈಡೇರಿಸದ್ದಕ್ಕೆ ಮತದಾನದ ಬಹಿಷ್ಕಾರದ ಅಸ್ತ್ರ ಪ್ರಯೋಗ

0 56

ಹೊಸನಗರ: ಹೊಸನಗರ, ಸಾಗರ ಶಾಸಕ ಹರತಾಳು ಹಾಲಪ್ಪ ಹಾಗೂ ತೀರ್ಥಹಳ್ಳಿ, ಹೊಸನಗರ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರರವರ ಮೇಲೆ ಹಾಗೂ ಸ್ಥಳೀಯ ರಾಜಕೀಯ ನಾಯಕರ ಮೇಲೆ ಮತದಾರರ ಮುನಿಸು ಇಲ್ಲಿಯವರೆಗೆ ಬೇಡಿಕೆ ಈಡೇರಿಸದ್ದಕ್ಕೆ ಮತದಾರರು ಮತದಾನದ ಬಹಿಷ್ಕಾರ ಅಸ್ತ್ರ ಪ್ರಯೋಗ ನಡೆಯುತ್ತಿದ್ದು ಇದರ ಜೊತೆಗೆ ಚುನಾವಣೆ ಬಂತೆಂದರೆ ರಾಜಕೀಯ ನಾಯಕರ ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸುವುದು ಸಾಮಾನ್ಯ. ಸೈದ್ಧಾಂತಿಕ ನಿಲುವು, ಕರ್ತವ್ಯ ನಿಷ್ಠೆ, ಬದ್ಧತೆಯ ಮೂಲಕ ದಶಕಗಳ ಹಿಂದೆ ಪ್ರಚಾರ, ಮತದಾರರನ್ನು ಸೆಳೆಯಲು ಪ್ರಯತ್ನ ನಡೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಚಾರದ ಅಬ್ಬರವೇ ಅತಿಯಾಗಿದೆ. ಸಾಲದ್ದಕ್ಕೆ ಆಮಿಷ, ದುಬಾರಿ ಕೊಡುಗೆಗಳನ್ನು ನೀಡಿ ಮತ ಸೆಳೆಯುವ ತಂತ್ರ ಮಾಮೂಲಿ ಎನ್ನುವಂತಾಗತೊಡಗಿದೆ. ಆದರೆ ಈ ನಡುವೆ ಮತದಾರರೂ ಸಹಾ ಇದೇ ಸರಿಯಾದ ಸಮಯ ಎಂದು ರಾಜಕೀಯ ಮುಖಂಡರಿಗೆ ಒತ್ತಡ ಹಾಕುವ ಪ್ರಯತ್ನಗಳು ಹೆಚ್ಚುತ್ತಿವೆ. ತಮ್ಮ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಹಲವು ಕಡೆ ಮತದಾನ ಬಹಿಷ್ಕಾರದ ಅಸ್ತ್ರವನ್ನು ಪ್ರಯೋಗಿಸಲು ಮತದಾರರು ಸಜ್ಜಾಗುತ್ತಿರುವುದು ಕಂಡುಬರುತ್ತಿದೆ.


ಮತದಾನ ಬಹಿಷ್ಕಾರ ಎಚ್ಚರಿಕೆ:
ಜನಪ್ರತಿನಿಧಿಗಳ ಬಳಿ ಅರ್ಜಿ, ಮನವಿ ಕೊಟ್ಟು ತಮ್ಮ ಬೇಡಿಕೆ ಈಡೇರದ ಕೆಲ ಗ್ರಾಮದ ನಿವಾಸಿಗಳು ರೊಚ್ಚಿಗೆದ್ದಿದ್ದಾರೆ. ತಮ್ಮ ಊರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ, ಮತದಾನ ಬಹಿಷ್ಕಾರ ನಡೆಸುವುದಾಗಿ ಎಚ್ಚರಿಸಿದ್ದು, ಈಗಾಗಲೇ ತಾಲೂಕು ಆಡಳಿತಕ್ಕೆ ಮನವಿ ನೀಡಿದ ಹಲವು ಪ್ರಕರಣಗಳಿವೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆ ವೇಳೆಯೂ ಇಂತಹ ಒಂದೆರಡು ಪ್ರಕರಣಗಳು ಕೇಳಿಬಂದಿತ್ತು. ಆದರೆ ಈ ಬಾರಿ ಮತದಾನ ಬಹಿಷ್ಕಾರದ ಎಚ್ಚರಿಕೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಹೊಸನಗರ ತಾಲೂಕಿನ ವಂದಗದ್ದೆ ಸಂಪರ್ಕ ರಸ್ತೆಯ ಮಳೆಗಾಲದ ಅವಸ್ಥೆ.


ಎಲ್ಲೆಲ್ಲಿ ಸಮಸ್ಯೆ?:
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿಯ ಗೊರದಳ್ಳಿ ಗ್ರಾಮಸ್ಥರು ತಮ್ಮೂರಿಗೆ ರಸ್ತೆ ನಿರ್ಮಾಣ ಮಾಡದಿದ್ದಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ. 66 ಕುಟುಂಬಗಳು ವಾಸವಿದ್ದು, ಇದುವರೆಗೂ ಸೂಕ್ತ ರಸ್ತೆ ನಿರ್ಮಾಣ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೊನಲೆ ಗ್ರಾಪಂ ವ್ಯಾಪ್ತಿಯ ಆದುವಳ್ಳಿ ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆಯೇ ಇಲ್ಲದೇ ಇಲ್ಲಿನ ಜನತೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ಚುನಾವಣೆ ಮುನ್ನ ಊರಿಗೆ ರಸ್ತೆ ನಿರ್ಮಾಣ ಮಾಡದಿದ್ದಲ್ಲಿ, ಮತಯಾಚನೆಗೆ ರಾಜಕಾರಣಿಗಳು ಬರುವ ಅಗತ್ಯವಿಲ್ಲ ಎಂದು ಸಾರಿದ್ದಾರೆ. ಸಾಗರ ಹಾಗೂ ತೀರ್ಥಹಳ್ಳಿ ಮತಕ್ಷೇತ್ರಗಳಿಗೆ ಸಂಬಂದಿಸಿದ ವಸವೆ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಶಾಸಕರು ಆಸಕ್ತಿ ತೋರಿಲ್ಲ ಎಂದು ಆರೋಪಿಸಿ, ಕೆಲ ದಿನಗಳ ಹಿಂದೆ ರಸ್ತೆ ನಡುವೆಯೇ ಕುಳಿತು ಇಲ್ಲಿನ ಜನರು ಪ್ರತಿಭಟನೆ ನಡೆಸಿದ್ದರು. ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಳೆಗಾಲದಲ್ಲಿ ಹಳ್ಳ ಹರಿಯುವ ಕಾರಣಕ್ಕೆ ಸಂಪರ್ಕ ಕಡಿತಗೊಳ್ಳುವ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರೇರಿ – ವಂದಗದ್ದೆ ಸಂಪರ್ಕಿಸುವ ರಸ್ತೆಗಾಗಿ ಅಭಿವೃದ್ಧಿಗಾಗಿ ಕಿತ್ತಲೆಮರನ ಜಡ್ಡು, ವಂದಗದ್ದೆ ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ, ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಮತದಾ ಚುನಾವಣಾ ಪ್ರಚಾರಕ್ಕೆ ತಮ್ಮೂರಿಗೆ ಬರುವ ಅಗತ್ಯವಿಲ್ಲ ಎಂದು ಊರಿನ ಮುಂಭಾಗದಲ್ಲಿ ಫಲಕ ಅಳವಡಿಸಲು ತಯಾರಿ ನಡೆಸಿದ್ದಾರೆ.


ಚುನಾವಣೆ ಸಮೀಪಿಸುವ ಹೊತ್ತಿಗೆ ಇನ್ನಷ್ಟು ಇಂತಹ ಪ್ರಕರಣಗಳು ಹೆಚ್ಚುವ ಲಕ್ಷಣಗಳಿವೆ. ಒಂದು ವೇಳೆ ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರು ಪಟ್ಟು ಹಿಡಿದಲ್ಲಿ, ಮತದಾರರ ಮನವೊಲಿಸುವ ಕಾರ‍್ಯ ಅಧಿಕಾರಿಗಳ ಹೆಗಲಿಗೇರಲಿದೆ.

ರಸ್ತೆ ನಿರ್ಮಾಣಕ್ಕಾಗಿ ವಸವೆ ಗ್ರಾಮಸ್ಥರ ಪ್ರತಿಭಟನೆ.


ಮೂಲಸೌಕರ್ಯ ಕೊರತೆ:
ಮಲೆನಾಡು ಭಾಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹತ್ತಾರು ಜ್ವಲಂತ ಸಮಸ್ಯೆಗಳಿವೆ. ಆದರೆ ಪ್ರಮುಖವಾಗಿ ರಸ್ತೆ, ಮೋರಿ, ಕಾಲುಸಂಕ ನಿರ್ಮಾಣಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಬಹುತೇಕ ಪ್ರತಿಮನೆಯಲ್ಲಿಯೂ ಈಗ ವಾಹನ ಮಾಮೂಲಿಯಾಗಿದ್ದು, ಇದಕ್ಕೆ ತಕ್ಕಂತೆ ಸುಸಜ್ಜಿತ ರಸ್ತೆ ನಿರ್ಮಾಣ ಕಾರ‍್ಯ ಮಲೆನಾಡಿನಲ್ಲಿ ಆಗಿಲ್ಲ. ನಮ್ಮ ಶಾಸಕರು ತಮ್ಮ ಕಾರ್ಯಕರ್ತರ ಮನೆ ಬಾಗಿಲಿಗೆ ಸಿಮೆಂಟ್ ರಸ್ತೆ ಮಾಡಿಕೊಟ್ಟಿದ್ದಾರೆ ಒಂದೊಂದು ಮನೆಗಳಿಗೆ ರಸ್ತೆ ಮಾಡಿಕೊಟ್ಟಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ ಎಂದು ಗ್ರಾಮಸ್ಥರು ಹೇಳುತ್ತಿದ್ದು ಮಳೆಗಾಲ ಬಂದರೆ ಹಲವು ಗ್ರಾಮಗಳಿಗೆ ಈಗಲೂ ವಾಹನ ಸಂಚಾರ ಅಸಾಧ್ಯ. ಈ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆಗ್ರಹ ಕಂಡುಬಂದಿದೆ.
ಏನೇ ಆಗಲಿ ಈ ಬಾರಿ ಹಾಲೀ ಶಾಸಕರಾದ ಹರತಾಳು ಹಾಲಪ್ಪನವರ ಹಾಗೂ ತೀರ್ಥಹಳ್ಳಿ ಶಾಸಕರು ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು ನಮ್ಮ ಹೊಸನಗರ ತಾಲ್ಲೂಕಿನ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆ ನಡೆಸುವುದು ಅಷ್ಟು ಸುಲಭದ ಮಾತಲ್ಲ ಹಾಗೂ ಗೆಲುವು ಪಡೆಯುವುದು ಅಷ್ಟು ಸುಲಭವಲ್ಲ? ಎಂದು ಹೇಳಲಾಗಿದೆ.

Leave A Reply

Your email address will not be published.

error: Content is protected !!