ಹೊಸನಗರ : ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಸ್ವಿಫ್ಟ್ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಮೃತನನ್ನು ಕಾಂಗ್ರೆಸ್ ಮುಖಂಡ ಕೋಡೂರು ಸಮೀಪದ ತುರುಗೋಡು ನಾಗರಾಜ್ ಗೌಡ (55) ಎಂದು ಗುರುತಿಸಲಾಗಿದೆ. ಶಿಕಾರಿಪುರದಿಂದ ವಾಪಾಸ್ ಆಗುವ ವೇಳೆ ಇಂದು ಮಧ್ಯಾಹ್ನ ಗೌತಮಪುರ ಸಮೀಪದ ಅಂಬಲಿಗೊಳ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲಕ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ಹೊಸನಗರ ತಾಲೂಕಿನ ಮುಂಬಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ಮುಂಬಾರು ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕಾರಿನಲ್ಲಿ ಮೂರು ಜನರಿದ್ದು ಓರ್ವನಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ನಾಗರಾಜ್ ಮೃತ ದೇಹವು ಸರ್ಜಿ ಆಸ್ಪತ್ರೆಯಲ್ಲಿದ್ದು ಸಾಗರ ತಾಲೂಕಿನ ಆನಂದಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸಂತಾಪ :
ನಾಗರಾಜ್ ಅಕಾಲಿಕ ನಿಧನಕ್ಕೆ ನೂತನ ಶಾಸಕ ಬೇಳೂರು ಗೋಪಾಲಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಶ್ವೇತಾ ಬಂಡಿ, ಹೊಸನಗರ ತಾಪಂ ಮಾಜಿ ಸದಸ್ಯ ಚಂದ್ರಮೌಳಿ, ಎರಗಿ ಉಮೇಶ್, ಬಿ.ಜಿ ನಾಗರಾಜ್, ಸಣ್ಣಕ್ಕಿ ಮಂಜು, ಚೇತನ್ ದಾಸ್ ಇನ್ನಿತರ ಕಾಂಗ್ರೆಸ್ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ.