‘ಪ್ರೋ. ಶುಭಚಂದ್ರ’ ಮೈಸೂರು
ಇವರಿಗೆ “ಸಿದ್ಧಾಂತ ಕೀರ್ತಿ” ಪ್ರಶಸ್ತಿ

0 31

ರಿಪ್ಪನ್‌ಪೇಟೆ: ಜೈನ ಮಠದ ವತಿಯಿಂದ ನೀಡುವ 2023ನೇ ಸಾಲಿನ ಸಿದ್ಧಾಂತಕೀರ್ತಿ ಪ್ರಶಸ್ತಿಯನ್ನು ಸಾಹಿತಿಗಳು, ಸಂಶೋಧಕರು, ಬೋಧಕರಾದ ಪ್ರೋ. ಶುಭಚಂದ್ರ ಇವರಿಗೆ ನೀಡಲಾಗುವುದೆಂದು ಪರಮಪೂಜ್ಯ ಶ್ರೀಗಳು ಘೋಷಿಸಿರುತ್ತಾರೆ.


ಈ ಪ್ರಶಸ್ತಿಯನ್ನು ವಾರ್ಷಿಕ ಮಹಾರಥಯಾತ್ರಾ ಮಹೋತ್ಸವದ ಮುನ್ನಾ ದಿನವಾದ 14-03-2023ನೇ ಮಂಗಳವಾರ ನಡೆಯುವ ಧಾರ್ಮಿಕ ಸಭೆಯಲ್ಲಿ ನೀಡಲಾಗುವುದು. ಇವರು ಜೈನಾಗಮಗಳ ಅನುವಾದ, ಗ್ರಂಥರಚನೆ, ಗ್ರಂಥ ಸಂಪಾದನೆ, ಉಪನ್ಯಾಸ ಇನ್ನಿತರ ಕಾರ್ಯಗಳಲ್ಲಿ ವಿಶೇಷ ಅನುಭವ ಹೊಂದಿರುತ್ತಾರೆ.


ಇವರು ಮೈಸೂರು ವಿ.ವಿ. ಜೈನಶಾಸ್ತ್ರ ಮತ್ತು ಪ್ರಾಕೃತ ವಿಭಾಗದಲ್ಲಿ ವಿದ್ಯಾರ್ಥಿಯಾಗಿ, ಸಂಶೋಧಕರಾಗಿ ಬೋಧಕರಾಗಿ ಸೇವೆ ಸಲ್ಲಿಸಿರುತ್ತಾರೆ. 2006ರಲ್ಲಿ ನಿವೃತ್ತರಾಗಿ ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದಾರೆ. ಜೈನ ಸಾಹಿತ್ಯ ಮತ್ತು ಸಂಸ್ಕೃತಿ, ಪ್ರಾಕೃತ ಸಾಹಿತ್ಯ ಕೈಪಿಡಿ, ಅಹಿಂಸೆ, ಯಶೋಧರ ಚರಿತೆ ಇವು ಇವರ ಪ್ರಮುಖ ಕೃತಿಗಳಾಗಿವೆ. ಇದಲ್ಲದೇ ಹಲವಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.
ಇವರು ಭಾರತದ ಉದ್ದಗಲಕ್ಕೂ ಅನೇಕ ವಿಶ್ವವಿದ್ಯಾಲಯಗಳಲ್ಲಿ ನಡೆದ ರಾಷ್ಟ್ರೀಯ, ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಧ್ಯಾನ-ಶಿಬಿರಗಳನ್ನು ನಡೆಸಿ ಜನಪ್ರೀಯರಾಗಿದ್ದಾರೆ.


ಇವರಿಗೆ ಗೊಮಟೇಶ್ವರ ವಿದ್ಯಾಪೀಠ ಪುರಸ್ಕಾರ, ವಿಶ್ವಮೈತ್ರಿ ಸೇವಾ ಪುರಸ್ಕಾರ, ಜಂಬೂದ್ವೀಪ ಪುರಸ್ಕಾರ, ಸೋದೆ ಸದಾಶಿವರಾಯ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅನೇಕ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.
ಹೊಂಬುಜ ಜೈನ ಮಠದಿಂದ ನೀಡುವ ಸಿದ್ದಾಂತಕೀರ್ತಿ ಪ್ರಶಸ್ತಿಯು ರೂ. 51,000 ಗಳ ನಗದು ಮತ್ತು ಅಂಗವಸ್ತ್ರ ಸಹಿತ ನೀಡಿ ಗೌರವಿಸಲಾಗುವುದು. ಇದುವರೆಗೂ ಅನೇಕ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ಸುಮಾರು 5 ದಶಕಗಳಿಂದ ಶ್ರೀಮಠದಿಂದ ನೀಡಲಾಗುತ್ತಿದೆ.

Leave A Reply

Your email address will not be published.

error: Content is protected !!