ಅದ್ದೂರಿಯಾಗಿ ಜರುಗಿದ ಕೆಂಚನಾಲ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ
ರಿಪ್ಪನ್‌ಪೇಟೆ: ಮಲೆನಾಡಿನ ಮಳೆಗಾಲದಲ್ಲಿ ಜಾತ್ರಾ ಮಹೋತ್ಸವ ನಡೆಯುವುದೇ ವಿಶೇಷ. ಆದರೆ ಇಲ್ಲಿನ ಕೆಂಚನಾಲ ಮಾರಿಕಾಂಬ ದೇವಿಯ ಜಾತ್ರೆಯು ವರ್ಷದಲ್ಲಿ ಎರಡು ಬಾರಿ ಆಚರಿಸುವುದು ಇನ್ನೊಂದು ವಿಶೇಷವೇ ಸರಿ. ಇಂದು ನಡೆದ ಜಾತ್ರಾ ಮಹೋತ್ಸವವು ಸಂಭ್ರಮ ಸಡಗರದೊಂದಿಗೆ ಸುಸಂಪನ್ನಗೊಂಡಿತು.
ಮುಂಜಾನೆ ದೇವಿಯ ವಿಶೇಷ ಪೂಜಾ ಕೈಂಕರ್ಯದೊಂದಿಗೆ ಆರಂಭಗೊಂಡ ದೇವಿಯ ಜಾತ್ರಾ ಕಾರ್ಯವು ದೇವಿಗೆ ಹೂವಿನ ಅಲಂಕಾರ, ಪೂಜೆ ಹಣ್ಣು-ಕಾಯಿ ಭಕ್ತಿಯ ಪರಕಾಷ್ಠತೆಯೊಂದಿಗೆ ಮಹಾಮಂಗಳಾರತಿ ಜರುಗಿತು.

ಬೇಸಿಗೆ ಜಾತ್ರೆಯಲ್ಲಿ ದೇವಿಗೆ ಹರಕೆ ಹೊತ್ತು ಹಲವರು ಹರಕೆ ಈಡೇರಿಸಿದ ತಾಯಿಗೆ ಉಡಿ ತುಂಬಿ ಹಣ್ಣು-ಕಾಯಿ ಭಕ್ತಿಯನ್ನು ಸಮರ್ಪಿಸಿದರೆ ಇನ್ನೂ ಹಲವು ಭಕ್ತರು ಹರಕೆ ಮಾಡಿಕೊಳ್ಳುವುದರೊಂದಿಗೆ ಹಣ್ಣು-ಕಾಯಿ ಅರ್ಪಿಸಿ ದೇವಿಯ ದರ್ಶನಾಶೀರ್ವಾದ ಪಡೆದರು.
ಎರಡು ಬಾರಿ ನಡೆಯುವ ಜಾತ್ರೆ :
ಸುಮಾರು 600 ವರ್ಷ ಇತಿಹಾಸವಿರುವ ಈ ಮಾರಿಕಾಂಬ ಜಾತ್ರೆ ಪ್ರತಿ ವರ್ಷದಲ್ಲಿ ಎರಡು ಬಾರಿ ಜರುಗುತ್ತದೆ. ಕರ್ನಾಟಕದ ಯಾವ ಭಾಗದಲ್ಲೂ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಎರಡು ಬಾರಿ ನಡೆಯುವುದಿಲ್ಲ. ಮಳೆಗಾಲದ ಆಷಾಢ ಮಾಸದ ಮಂಗಳವಾರ ಹಾಗೂ ಬೇಸಿಗೆಯ ಶೂನ್ಯ ಮಾಸದ ಬುಧವಾರದಂದು ಜರುಗುವ ಈ ಜಾತ್ರೆಯಲ್ಲಿ ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯದ ಭಕ್ತರು ಆಗಮಿಸಿ ಶ್ರೀದೇವಿಗೆ ಪೂಜೆ ಸಲ್ಲಿಸುತ್ತಾರೆ.
ಹಲವು ಮನೆತನ, ಸಹಸ್ರಾರು ಮನೆಗಳ ಆರಾಧ್ಯ ದೇವತೆ ಶ್ರೀ ಮಾರಿಕಾಂಬ ದೇವಿಗೆ ಜಾತ್ರೆ ಸಮಯದಲ್ಲಿ ಹಿಂದುಗಳಲ್ಲದೇ ಮುಸಲ್ಮಾನರು, ಕ್ರಿಶ್ಚಿಯನ್ನರು ಹಾಗೂ ಜೈನ ಧರ್ಮದವರೂ ಹರಕೆ ಕಾಣಿಕೆ, ಹಣ್ಣು- ಕಾಯಿ ಪೂಜೆ ಸಲ್ಲಿಸುವುದು ವಿಶೇಷ. ಶ್ರೀ ಮಾರಿಕಾಂಬ ದೇವಿ ಆರಾಧನೆಯಿಂದ ಸಾವಿರಾರು ಭಕ್ತಾದಿಗಳು ಒಳಿತು ಕಂಡಿದ್ದಾರೆ, ಕಾಣುತ್ತಿದ್ದಾರೆ.

ರಿಪ್ಪನ್‌ಪೇಟೆ, ಆಯನೂರು, ಆನಂದಪುರ, ಕೋಣಂದೂರು, ಹುಂಚ, ಹೊಸನಗರ, ಸಾಗರ, ಚೋರಡಿ, ಹಿತ್ತಲ ಕಲ್ಮನೆ, ಕುಂಸಿ, ಹಾರನಹಳ್ಳಿ, ಬೆಳ್ಳೂರು, ಬುಕ್ಕಿವರೆ, ಗರ್ತಿಕೆರೆ, ಹೆದ್ದಾರಿಪುರ, ಕೋಡೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರು ಜಾತ್ರೆಗೆ ಆಗಮಿಸಿ ದೇವಿ ದರ್ಶನ ಪಡೆದರು.