ರಿಪ್ಪನ್‌ಪೇಟೆ: ಇಲ್ಲಿನ ಸರ್ಕಾರಿ ಪ್ರೌಢಶಾಲೆ ಕೆರೆಹಳ್ಳಿ ರಸ್ತೆಯ ಹಿಂಭಾಗದ ಕಟ್ಟಡದ ಮೇಲ್ಚಾವಣಿ ಸಂಪೂರ್ಣ ಅಪಾಯದ ಸ್ಥಿತಿಯಲ್ಲಿದ್ದು ಯಾವುದೇ ಸಮಯದಲ್ಲಿ ಕುಸಿದು ಬೀಳುತ್ತದೋ ಎಂಬ ಭಯದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಜೀವಭಯದಲ್ಲಿ ಕಾಲಕಳೆಯುವಂತಾಗಿದೆ.
ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಆಂಗ್ಲ ಹಾಗೂ ಉರ್ದು ಮಾಧ್ಯಮ ಸೇರಿ ಸುಮಾರು 800 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಈ ಕಟ್ಟಡಕ್ಕೆ ಹೊಂದಿಕೊಂಡಂತೆ ಬಿಸಿಯೂಟದ ಕೊಠಡಿ ಮತ್ತು ಇನ್ನಿತರ ಹೆಚ್ಚುವರಿ ಕೊಠಡಿಗಳು ಇವೆ. ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆ ಕೇಂದ್ರ ಸ್ಥಾನವಾಗಿದ್ದು ಇಲ್ಲಿನ ಶಾಲಾ ಕೊಠಡಿಯಲ್ಲಿ ಪರೀಕ್ಷೆ ಬರೆಯಲಾಗುತ್ತಿದ್ದು ದುಸ್ಥಿತಿಯಲ್ಲಿರುವ ಈ ಕಟ್ಟಡಕ್ಕೆ ಹೊಂದಿಕೊಂಡಿರುವ ಕೊಠಡಿಯಲ್ಲಿ ಪರೀಕ್ಷೆ ಬರೆಯುವಾಗ ಆಕಸ್ಮಿಕವಾಗಿ ಮೇಲ್ಚಾವಣಿ ಕುಸಿದು ಬಿದ್ದರೆ ಹೊಣೆ
ಯಾರು. ಏನಾದರೂ ಅನಾಹುತಗಳು ಸಂಭವಿಸುವ ಮುನ್ನ ಎಚ್ಚರಗೊಂಡು ಈ ಶಿಥಿಲ ಕಟ್ಟಡದ ಮೇಲ್ಛಾವಣಿಯನ್ನು ತೆರವುಗೊಳಿಸುವರೆ ಕಾದು ನೋಡಬೇಕಾಗಿದೆ.
ಈ ಹಿಂದೆ ಇದ್ದಂತಹ ಮುಖ್ಯೋಪಾಧ್ಯಾಯ ಗೋಪಾಲರಾವ್ ಅವಧಿಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಂದ 10 ರೂಪಾಯಿಯಂತೆ ದೇಣಿಗೆ ಸಂಗ್ರಹಿಸಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿಕೊಂಡು ಗ್ರಾಮೀಣ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹೆಚ್ಚು ಆಸಕ್ತಿ ವಹಿಸಿದಂತಹ ಮುಖ್ಯೋಪಾಧ್ಯಾರ ಸಾಮಾಜಿಕ ಕಳಕಳಿ ಮೆಚ್ಚುವಂತದಾಗಿದ್ದು ಇದಕ್ಕೆ ಗ್ರಾಮದ ಹಿರಿಯರು ಪೋಷಕ ವರ್ಗ ಸಹ ಕೈಜೋಡಿಸಿದ ಪ್ರತಿಫಲದಿಂದಾಗಿ ಇಲ್ಲಿನ ಹೈಸ್ಕೂಲ್ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಮತ್ತು ಉತ್ತಮ ಫಲಿತಾಂಶದೊಂದಿಗೆ ಕ್ರೀಡಾ ಚಟುವಟಿಕೆಯಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪತಾಕೆಯನ್ನು ಹಾರಿದೆ ಆದರೆ ಈಗ ಈ ಶಾಲಾ ಮೇಲ್ಛಾವಣಿ ಅಪಾಯದ ಸ್ಥಿತಿಯಲ್ಲಿದ್ದು ಸ್ಥಳೀಯ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನಕ್ಕೆ ಬಂದರೂ ಕೂಡಾ ಕಣ್ಮುಚ್ಚಿಕೊಂಡಿರುವುದು ಪೋಷಕರಲ್ಲಿ ಸಾರ್ವಜನಿಕರಲ್ಲಿ ತೀವ್ರ ನೋವುಂಟು ಮಾಡಿದೆ.
ಇನ್ನಾದರೂ ಈ ದುಸ್ಥಿತಿಯಲ್ಲಿರುವ ಈ ಕಟ್ಟಡದ ದುರಸ್ಥಿ ಕಾರ್ಯಕ್ಕೆ ಬೇಸಿಗೆ ರಜೆಯಲ್ಲಿ ಮುಂದಾಗುವ ಮೂಲಕ ಅಪಾಯದಿಂದ ಪಾರು ಮಾಡುವರೆ ಕಾದು ನೋಡಬೇಕಾಗಿದೆ.