ಅರೆ ಬೆತ್ತಲಾಗಿ ತಲೆ ಕೆಳಗಾಗಿ ನಿಂತು ವಿನೂತನವಾಗಿ ಪ್ರತಿಭಟಿಸಿದ ಟಿ.ಆರ್. ಕೃಷ್ಣಪ್ಪ
ರಿಪ್ಪನ್‌ಪೇಟೆ: ಇಲ್ಲಿನ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದ ಬಳಿ ಈ ಹಿಂದಿನ ಸರ್ಕಾರ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಯೋಗ ತರಬೇತಿಗಾಗಿ ನಿರ್ಮಿಸಲಾಗಿರುವ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದರೂ ಕೂಡಾ ಉದ್ಘಾಟನೆಯಾಗಿಲ್ಲ ಎಂದು ವಿರೋಧಿಸಿ ಇಂದು ಸಾಮಾಜಿಕ ಕಾರ್ಯಕರ್ತ, ಏಕಾಂಗಿ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಕಟ್ಟಡದ ಮುಂಭಾಗ ಅರೆ ಬೆತ್ತಲೆಯಾಗಿ ತಲೆ ಕೆಳಗಾಗಿ ನಿಂತು ಪ್ರತಿಭಟನೆ ನಡೆಸಿದರು.

ಭದ್ರಾವತಿ ನಿರ್ಮಿತಿ ಕೇಂದ್ರದವರು ನಿರ್ಮಿಸಲಾದ ಈ ನೂತನ ಕಟ್ಟಡದ ಮುಂಭಾಗ ‘ಯೋಗ………ಭೋಗ……….ತ್ಯಾಗ’ ಎಂಬ ನಾಮಫಲಕವನ್ನು ಹಾಕಿಕೊಂಡು 71 ವರ್ಷ ಪ್ರಾಯದ ಕೃಷ್ಣಪ್ಪ ತಲೆ ಕೆಳಗೆ ಮಾಡಿ ಕಾಲು ಮೇಲೆ ಎತ್ತಿ ನಿಂತು ‘ಯೋಗ ಮಾಡುವುದರಿಂದ ಉತ್ತಮ ಸದೃಢ ಅರೋಗ್ಯದಿಂದ ಇರುವುದು ಭೋಗ ಸರ್ಕಾರದ ಯೋಜನೆಯಡಿ ಯಾರದೋ ಗಂಟು ಯಲ್ಲಮ್ಮನ ಜಾತ್ರೆ………..! ತ್ಯಾಗ ನಾನು ಇಂತಹ ಹೋರಾಟದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇಂತಹ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ಮಾಡುವುದೇ ನನ್ನ ಗುರಿಯಾಗಿದೆ’ ಎಂದು ತಮ್ಮದೇ ದಾಟಿಯಲ್ಲಿ ಮಾಧ್ಯಮದವರ ಬಳಿ ತಮ್ಮ ಪ್ರತಿಭಟನೆಯ ಧ್ಯೇಯೋದ್ದೇಶವನ್ನು ಹಂಚಿಕೊಂಡರು.