ಉತ್ತಮ ಆಡಳಿತಕ್ಕಾಗಿ ಆಮ್ಆದ್ಮಿ ಪಕ್ಷ ಬೆಂಬಲಿಸಿ ; ಕೆ. ದಿವಾಕರ್

0 0

– ಶಿವಮೊಗ್ಗದಲ್ಲಿ ಕೋಮು ಸಂಘರ್ಷವನ್ನು ತಡೆಯಲು ಮಿಲಿಟರಿ ಪಡೆಯನ್ನು ನಿಯೋಜಿಸಿ


ರಿಪ್ಪನ್‌ಪೇಟೆ : ರಾಜ್ಯದ ಅಭಿವೃದ್ಧಿಗೆ ಹಾಗೂ ಉತ್ತಮ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕೆಂದು ಸಾಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ನಿಯೋಜಿತ ಅಭ್ಯರ್ಥಿ ಹಾಗೂ ಹಿರಿಯ ವಕೀಲ ಕೆ.ದಿವಾಕರ್ ಹೇಳಿದರು.


ಪಟ್ಟಣದ ಆಮ್ ಆದ್ಮಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ಆದ್ಮಿ ಪಕ್ಷವು ಯಾವಾಗಲೂ ಜನಪರ ಹಾಗೂ ಅಭಿವೃದ್ಧಿ ಪರವಾಗಿದ್ದು ಉತ್ತಮ ಆಡಳಿತವನ್ನು ನೀಡುವುದರ ಮೂಲಕ ದೇಶದ ಹಾಗೂ ರಾಜ್ಯದ ಪ್ರಗತಿಗೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಆಮ್ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಬೆಂಬಲಿಸಬೇಕು ಎಂದರು.


ಈಗಾಗಲೇ ರಾಷ್ಟ್ರವನ್ನು ಹಾಗೂ ರಾಜ್ಯವನ್ನು ಆಳಿದ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ತೊರೆದು ಆಮ್ ಆದ್ಮಿ ಪಕ್ಷದತ್ತ ಮತದಾರರು ಒಲವನ್ನು ತೋರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದಲ್ಲಿ ಹೇಗೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರದೇ ಪಕ್ಷದ ಹಿರಿಯ ಮುಖಂಡರುಗಳು ಹೇಳುತ್ತಿದ್ದಾರೆ. ಈಗಾಗಲೇ ಕೆಲವು ಹಿರಿಯ ಮುಖಂಡರುಗಳು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ದೆಹಲಿ ಹಾಗೂ ಪಂಜಾಬಿನಲ್ಲಿ ಆಡಳಿತ ನಡೆಸುತ್ತಿರುವ ಆಮ್ಆದ್ಮಿ ಪಕ್ಷವು ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಆ ರಾಜ್ಯಗಳ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಬಾರಿ ಕರ್ನಾಟಕದ ಜನತೆ ಆಮ್ಆದ್ಮಿ ಪಕ್ಷಕ್ಕೆ ಬೆಂಬಲಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.


ಹಿರಿಯ ರಾಜಕಾರಣಿಯ ಅಪವಾದನೆಯನ್ನು ಕಡೆಗಣಿಸಬೇಡಿ :

ರಾಜ್ಯದ ಬಿಜೆಪಿ ಪಕ್ಷದ ಹಿರಿಯ ರಾಜಕಾರಣಿ ಹಾಗೂ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ರವರು ಪತ್ರಿಕಾಗೋಷ್ಠಿಯಲ್ಲಿ ಅವರದ್ದೇ ಪಕ್ಷದವರು ಚುನಾವಣಾ ಸಂದರ್ಭದಲ್ಲಿ ಶಿವಮೊಗ್ಗ ನಗರದಲ್ಲಿ ಕೋಮುಗಲಭೆಯನ್ನು ನಡೆಸಲು ಸಂಚನ್ನು ನಡೆಸುತ್ತಿದ್ದಾರೆ. ಇದರಿಂದ ಅಮಾಯಕರು ಬಲಿ ಪಶುಗಳಾಗುವುದರ ಜೊತೆಗೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗ ತತ್ತಕ್ಷಣದಿಂದ ಈ ಬಾರಿಯ ಕರ್ನಾಟಕ ವಿಧಾನಸಭೆಯ ಚುನಾವಣೆ ಮುಗಿಯುವವರೆಗೂ ಮಿಲಿಟರಿ ಪಡೆಯನ್ನು ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ನಿಯೋಜಿಸಬೇಕು. ಆಯನೂರು ಮಂಜುನಾಥ್ ರವರ ಅಪವಾದನೆಯನ್ನು ಚುನಾವಣಾ ಆಯೋಗ ಕಡೆಗಣಿಸದೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಹೊಸನಗರ ತಾಲೂಕು ಆಮ್ಆದ್ಮಿ ಪಕ್ಷದ ಅಧ್ಯಕ್ಷ ಗಣೇಶ್ ಸೊಗೋಡು, ಆಶ್ರಿತಾ ಸಂತೋಷ್, ಉಮೇಶ್, ಈಶ್ವರಪ್ಪ, ಇನ್ನಿತರರಿದ್ದರು.

Leave A Reply

Your email address will not be published.

error: Content is protected !!