ಕಲುಷಿತ ನೀರು ಸರಬರಾಜು ಮಾಡಿದ ಗ್ರಾಪಂ ; ಖಾಲಿ ಕೊಡ ಹಿಡಿದು ಪ್ರತಿಭಟನೆ
ರಿಪ್ಪನ್‌ಪೇಟೆ: ಬಾಳೂರು ಗ್ರಾಪಂ ವ್ಯಾಪ್ತಿಯ ಚಂದಾಳದಿಂಬ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕಲುಷಿತ ಕೆರೆಯ ನೀರನ್ನು ಸರಬರಾಜು ಮಾಡಿದ ಗ್ರಾ.ಪಂ ವಿರುದ್ಧ ಸಾರ್ವಜನಿಕರು ಶನಿವಾರ ಖಾಲಿ ಕೊಡಗಳನ್ನು ಹಿಡಿದು ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಸುಮಾರು 80 ಮನೆಗಳಿಗಿಂತ ಹೆಚ್ಚಿರುವ ಈ ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಹಲವಾರು ದಿನಗಳಿಂದ
ಪರಿತಪಿಸುತ್ತಿದ್ದಾರೆ. ಇಲ್ಲಿಗೆ ಗ್ರಾಪಂ ವತಿಯಿಂದ ನಿರ್ಮಿಸಲಾದ ನಲ್ಲಿಗಳಲ್ಲಿ ನೀರು ಕಾಣದೆ ಹಲವಾರು ತಿಂಗಳುಗಳಾಗಿವೆ. ಟ್ಯಾಂಕ್‌ಗಳಲ್ಲಿ ನೀರು ಇಲ್ಲದೆ ಒಣಗಿವೆ. ಈ ಗ್ರಾಮದಲ್ಲಿ ಸಾರ್ವಜನಿಕರ ವಿರೋಧ ವ್ಯಕ್ತವಾಗುತ್ತಿದ್ದಂತೆ ಒಂದು ವಾರದ ಹಿಂದೆ ಕಲುಷಿತ ಕೆರೆಯ ನೀರನ್ನು ಟ್ಯಾಂಕ್ ನಲ್ಲಿ ತುಂಬಿಸಿಕೊಂಡು ಬಂದು ಕೊಳವೆ ಬಾವಿಯ ನೀರು ಎಂದು ಡ್ರಮ್ ಗಳಲ್ಲಿ ತುಂಬಿಸಿ ಹೋಗಿದ್ದು, ಉಪಯೋಗಿಸಿದ ಸಾರ್ವಜನಿಕರು ಮಕ್ಕಳು ವಿವಿಧ ರೋಗಗಳಿಗೆ ತುತ್ತಾಗಿದ್ದಾರೆ ಸಣ್ಣ ಸಣ್ಣ ಮಕ್ಕಳು ಮೈಮೇಲೆಲ್ಲಾ ಕಜ್ಜಿಗಳು ಉಂಟಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಆರೋಪಿಸಿದ್ದಾರೆ.

ಜನಪ್ರತಿನಿಧಿಗಳಿಗೆ ಹಾಗೂ ಸ್ಥಳೀಯ ಗ್ರಾಪಂ ಗೆ ವಿಚಾರ ತಿಳಿಸಿದರೆ ಒಬ್ಬರು ಸಹ ಗ್ರಾಮಕ್ಕೆ ಬಂದು ವಿಚಾರಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣವೇ ಶುದ್ಧ ನೀರನ್ನು ಪೂರೈಸದಿದ್ದರೆ ಗ್ರಾಮಸ್ಥರು ಗ್ರಾಪಂ ವಿರುದ್ಧ ಪ್ರತಿಭಟನೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದಿಗ್ಬಂದಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಶ್ರೀದೇವಿ, ಶಾರದಾ, ಅನುರಾಧ, ಸುಮಾ, ಲಕ್ಷ್ಮಿ, ಕುಸುಮ, ಸುನಂದ, ಶಾರದಾ ಬಾಯಿ, ಗಂಗಮ್ಮ, ನಾರಾಯಣ ಸಿಂಗ್, ಭೀಮಪ್ಪ, ಸುರೇಶ್ ಸಿಂಗ್, ಅಣ್ಣಪ್ಪ, ವಿನಯ್ ಶೆಟ್ಟಿ, ಶಿವಕುಮಾರ್, ನಿಂಗೋಜಿ ರಾವ್, ಸುಬ್ರಹ್ಮಣ್ಯ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.