ಗ್ರಾಮೀಣ ಮಕ್ಕಳಲ್ಲಿ ಜನಪದ ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಲಿ ; ಗುಡ್ಡಪ್ಪ ಜೋಗಿ
ರಿಪ್ಪನ್‌ಪೇಟೆ: ರಂಗ ಭೂಮಿ ಮತ್ತು ಜನಪದ ಕಲೆಗಳು ಸಮಾಜವನ್ನು ಜಾಗೃತಗೊಳಿಸುವ ಒಂದು ಸಾಧನ. ಪ್ರಕೃತಿಯ ನಂಟಿನೊಂದಿಗೆ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಳ್ಳಲು ಆರಂಭಗೊಂಡಂತಹ ಕಲೆ ಜನಪದ ರಂಗ ಕಲೆ ನಾಡಿನಲ್ಲಿ 300 ಕ್ಕೂ ಆಧಿಕ ಕಲೆಗಳಿದ್ದು ಅದರಲ್ಲಿ ಕೊನೆಯ ಕಲೆ ಜಾನಪದವಾಗಿದೆ. ಅದನ್ನು 100-150 ರ ಕಲೆಯನ್ನಾಗಿಸುವ ನಿಟ್ಟಿನಲ್ಲಿ ನಮ್ಮ ಜಾನಪದ ಸಂಸ್ಕೃತಿ ಇಂದಿನ ಯುವಜನಾಂಗ ಅಳವಡಿಸಿಕೊಂಡು ಬರುವಂತಾಗಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡಪ್ಪ ಜೋಗಿ ಹೇಳಿದರು.

ರಿಪ್ಪನ್‌ಪೇಟೆಯ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ದಿ.ಎಂ.ಕೆ.ರೇಣುಕಪ್ಪಗೌಡ ಪ್ರತಿಷ್ಠಾನ ಮತ್ತು ಮಲೆನಾಡು ಕಲಾತಂಡ ಶಿವಮೊಗ್ಗ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿರುವ ನಾಲ್ಕನೇ ವರ್ಷದ “ಹಳ್ಳಿ ಮಕ್ಕಳ ರಂಗಹಬ್ಬ 2023’’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅತಿಯಾದ ಮೊಬೈಲ್ ಬಳಕೆಯಿಂದಾಗಿ ನಮ್ಮ ಮೂಲ ಜನಪದ ಸಂಸ್ಕೃತಿಗೆ ಧಕ್ಕೆ ಬಂದಿದೆ ಎಂದು ಕಳವಳಕಾರಿ ಸಂಗತಿಯಾಗಿದೆ. ನಾಟಕ ಹಾಗೂ ರಂಗಭೂಮಿಯಂತಹ ಕಲೆಗಳಿಂದ ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವ ಪ್ರಯತ್ನದಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಿವೆ ಎಂದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಪ್ರಾಚಾರ್ಯ ಪ್ರೋ.ಟಿ.ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಕ್ಕಳಲ್ಲಿ ಜಾನಪದದ ಜಾಗೃತಿ ಮೂಡಿಸಲು ಬೇಸಿಗೆ ಶಿಬಿರಗಳು ಉತ್ತಮ ವೇದಿಕೆಯಾಗಿದೆ. ಮಕ್ಕಳು ದಿನದ 24 ಗಂಟೆಯೂ ಮೊಬೈಲ್ ಬಳಸುವುದರಿಂದ ಮಾನಸಿಕವಾಗಿ ಕುಬ್ಜರಾಗುತ್ತಾರೆ. ಮಕ್ಕಳು ಸದಾ ಕ್ರಿಯಾಶೀಲರಾಗಿ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಹಳ್ಳಿ ಮಕ್ಕಳ ರಂಗ ಹಬ್ಬ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದರು.
ಸಮಾರಂಭದ ಆಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ನಿರ್ದೇಶಕಿ ದಿವ್ಯ ಮಹೇಶ್ ಶೆಟ್ಟಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡಪ್ಪ ಜೋಗಿ ಮತ್ತು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯೋಪಾಧ್ಯಾಯ ಶಾಂತರಾಜ್ ಇವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಮಾಸಲ್ ಮಣಿ, ಸೀಮಾಭಾಸ್ಕರ್ ಶೆಟ್ಟಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯ ಶಾಂತರಾಜ್ ಸಂಚಾಲಕ ಹರೀಶ್‌ಕುಮಾರ್ ಹಾಜರಿದ್ದರು.
ಪಂಚಮಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಆರ್.ಡಿ.ಶೀಲಾ ಸ್ವಾಗತಿಸಿದರು. ಶಿಬಿರದ ನಿರ್ದೇಶಕ ಡಾ.ಗಣೇಶ್ ಕೆಂಚನಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.