ಡಿ.ವಿ.ರೇವಣಪ್ಪಗೌಡ ಎಂಬ ಕೆಸರಿನ ಕಮಲ ಸಾಧಕನಿಗೆ ಹಲವು ಪ್ರಶಸ್ತಿ, ಪುರಸ್ಕಾರಗಳ ಗರಿ

0 1

ರಿಪ್ಪನ್‌ಪೇಟೆ: ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಆದರೆ, ಸಾಧನೆಗೆ ಸ್ಪಷ್ಟ ಗುರಿ ಹಾಗೂ ಗುರುವಿನ ಆಶೀರ್ವಾದ ಇದ್ದಲ್ಲಿ ಮಹತ್ತರ ಸಾಧಿಸಲು ಸಾಧ್ಯ ಎಂಬುದು ನಮ್ಮ ಪೂರ್ವಿಕರ ನಾಣ್ನುಡಿ ಆಗಿದೆ. ಇಂತಹ ಸಾಧಕರ ಸಾಲಿನಲ್ಲಿ ಹೊಸನಗರದ ಡಿ.ವಿ.ರೇವಣಪ್ಪಗೌಡ ವಿಶೇಷವಾಗಿ ಕಂಡುಬರುತ್ತಾರೆ.

ಧಾರ್ಮಿಕ, ಆಧ್ಯಾತ್ಮಿಕ, ರಾಜಕಾರಣ, ಸಾಮಾಜಿಕ ಕ್ಷೇತ್ರಗಳೇ ಅಲ್ಲದೇ ಕೃಷಿ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುವ ಮೂಲಕ ವಿಶಿಷ್ಠ ಕೊಡುಗೆ ನೀಡುವಲ್ಲಿ ಸಾಫಲ್ಯ ಕಂಡಿರುವುದು ಇವರ ವೈಶಿಷ್ಟ್ಯ.

ಹಿನ್ನಲೆ:
ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊಳಲ್ಕೆಯ ಸಮೀಪದ ದುಮ್ಮಿ ಗ್ರಾಮದ ಇವರ ಕುಟುಂಬದ ಪೂರ್ವಿಕರು 1864ರ ಆಸುಪಾಸಿನಲ್ಲಿ ಹೊಸನಗರ ತಾಲೂಕಿಗೆ ವಲಸೆ ಬಂದು ಇಲ್ಲಿನ ಕಸಬಾ ಹೋಬಳಿಯ ದುಮ್ಮ ಗ್ರಾಮದಲ್ಲಿ ನೆಲೆ ನಿಂತರಂತೆ. ನೂರಾರು ಎಕರೆ ಕೃಷಿಭೂಮಿ ಹೊಂದಿದ್ದ ಇವರ ಕುಟುಂಬದ ಹಿರಿಯರಾಗಿದ್ದ ಬಸಪ್ಪಗೌಡ ಎಂಬುವವರು ಮೈಸೂರು ಸಂಸ್ಥಾನದ ಆಳ್ವಿಕೆ ಕಾಲದಲ್ಲಿ ಈ ಭಾಗದ ಎಂಆರ್‌ಎ ಸಹ ಆಗಿ ಕಾರ್ಯ ನಿರ್ವಹಿಸಿದ್ದರಂತೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ದುಮ್ಮ ಡಿ.ವಿ. ರೇವಣಪ್ಪಗೌಡ ಅವರ ಹುಟ್ಟೂರು. 1952ರಲ್ಲಿ ಇವರ ಜನನ. ತಂದೆ ವೀರಭದ್ರಪ್ಪಗೌಡ, ತಾಯಿ ಶಾವಮ್ಮ. ಬಾಲ್ಯದಿಂದಲೇ ಶಾಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯಂತ ಆಸಕ್ತಿಯಿಂದ ಭಾಗಿಯಾಗಿ ತನ್ನ ಪ್ರತಿಭೆ ಪ್ರದರ್ಶಿಸಿ ಅತ್ಯುನ್ನತ ಶ್ರೇಣೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಇವರನ್ನು ಸಾಧನೆಯ ಹಾದಿಯಲ್ಲಿ ಸಾಗುವಂತೆ ಮಾಡಿತು. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿ, ಪದವಿ ಶಿಕ್ಷಣಕ್ಕಾಗಿ ದೂರದ ಮೈಸೂರಿನತ್ತ ಇವರು ಮುಖ ಮಾಡಬೇಕಾಯಿತು. ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಲ್ಲದೆ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕ ಕೃಷಿ ಹಾಗೂ ಸ್ಥಳೀಯ ರಾಜಕಾರಣದಲ್ಲಿ ಗುರುತಿಸಿಕೊಳ್ಳವ ಪ್ರಯತ್ನ ಮಾಡಿ ಅಲ್ಲಿಯೂ ಸೈ ಎನಿಸಿಕೊಂಡರು. ಇದರ ಫಲವಾಗಿ ಸುಮಾರು ಹತ್ತು ವರ್ಷಗಳ ಕಾಲ ಮಂಡಲ ಪ್ರಧಾನರಾಗಿ ಅನೇಕ ಜನಪರ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆದರು.

ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ, ಎಸ್. ಬಂಗಾರಪ್ಪ ಅವರ ನಿಕಟವರ್ತಿ ಆಗಿದ್ದ ಡಿವಿಆರ್, ಹಾಲಿ ಶಾಸಕ ಹರತಾಳು ಹಾಲಪ್ಪ ಅವರ ಅನುಯಾಯಿಯು ಸಹ.
ತಮ್ಮ ಹತ್ತಾರು ಎಕರೆ ಕೃಷಿ ಭೂಮಿಯಲ್ಲಿ ಅಡಿಕೆ, ತೆಂಗು, ಮೆಣಸು, ಶುಂಠಿ ಬಾಳೆ ಸೇರಿದಂತೆ ವಿವಿಧ ಬಗೆಯ ಕೃಷಿ ಕೈಗೊಳ್ಳುವ ಮೂಲಕ ಪ್ರಗತಿಪರ ಕೃಷಿಕ ಎಂಬ ಹೆಗ್ಗಳಿಕೆ ಸಹ ಇವರಿಗೆ ಸಲ್ಲುತ್ತದೆ. 1980ರಲ್ಲಿ ಮಡದಿ ವಿನೋಧ ಅವರೊಂದಿಗೆ ವಿವಾಹವಾಗಿ ಓರ್ವ ಪುತ್ರ, ಪುತ್ರಿ ಇದ್ದಾರೆ.
ಪ್ರಸಕ್ತ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಜಿಲ್ಲಾ ಉಪಾಧ್ಯಕ್ಷರಾಗಿ, ಹೊಸನಗರ ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾನವಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಷ್ಟ್ರೀಯ ಸಂಚಾಲಕರಾಗಿ ಸೇವೆ ಸಲ್ಲಿಸಿರುವ ಇವರು ಬ್ರಹ್ಮಕುಮಾರಿ ಸಂಸ್ಥೆಯ ಅನುಯಾಯಿ ಕೂಡ ಆಗಿದ್ದಾರೆ. ಪೋಟೋಗ್ರಫಿ, ಪ್ರವಾಸ, ಡ್ರೈವಿಂಗ್, ಸಾಹಿತ್ಯ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಡಿವಿಆರ್, ಸಮಾಜಸೇವೆ, ಧರ್ಮಸಂಸ್ಕಾರಕ್ಕಾಗಿ ತಮ್ಮ ಸ್ವಗೃಹದಲ್ಲೆ 2004ರಲ್ಲಿ ರಂಭಾಪೂರಿ ಜಗದ್ಗುರುಗಳು ಸೇರಿದಂತೆ ಗುಗ್ಗೆಹಳ್ಳಿ, ಮಳಲಿಮಠ ಮೊದಲಾದ ಸುಮಾರು 20 ಸ್ವಾಮೀಜಿಯವರಿಂದ ಇಷ್ಟಲಿಂಗ ಪೂಜೆ ಕೈಗೊಂಡು ಸಾರ್ಥಕಭಾವ ಮೆರೆದಿದ್ದಾರೆ.

ಇವರ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನು ಪರಿಗಣಿಸಿ ಚೆನೈನ ಏಷಿಯಾ ವೇದಿಕ್ ಕಲ್ಚರ್ ಯೂನಿವರ್ಸಿಟಿ 2021ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಅಲ್ಲದೆ, ಇತ್ತೀಚೆಗೆ ಬೆಂಗಳೂರಿನ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನ ಟ್ರಸ್ಟ್(ರಿ) ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 11ನೇ ಸಮ್ಮೇಳನದಲ್ಲಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಬಾವನಾ ರಾಷ್ಟ್ರ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿದೆ. ಇದು ತಾಲೂಕಿನ ಜನತೆಗೆ ಸಂದ ಗೌರವವೂ ಆಗಿದೆ.

ದೇಶದ ಭವ್ಯ ಪರಂಪರೆ, ಸಂಸ್ಕೃತಿ, ಶಿಕ್ಷಣದ ಮೇಲೆ ಇಂದು ಅವ್ಯಾಹತವಾಗಿ ನಡೆಯುತಿರುವ ಪರಕೀಯ ದಾಳಿ ವೇಳೆಯಲ್ಲೆ, ತಮ್ಮ ನಿಸ್ವಾರ್ಥ ಸೇವಾ ಮನೋಭಾವದಿಂದ ಹಳಿ ತಪ್ಪದಂತೆ ಸಮಾಜವನ್ನು ಮುನ್ನೆಡಸಲು ಡಿವಿಆರ್ ನೀಡುತ್ತಿರುವ ಕೊಡುಗೆ ಅಪಾರವಾದುದು. ಇಂತಹ ಮಹಾನೀಯರನ್ನು ಸಮಾಜ ಮತ್ತಷ್ಟು ಗುರುತಿಸುವಂತಾಗಲಿ ಎಂಬುದೇ ಜನಸಾಮಾನ್ಯರ ಆಶಯವೂ ಆಗಿದೆ.

Leave A Reply

Your email address will not be published.

error: Content is protected !!