ರಿಪ್ಪನ್‌ಪೇಟೆ : ತಂದೆಗೆ ಹೇಳೆ ನಾನು ಬಿಜೆಪಿ ಸೇರಿದ್ದೇನೆ ಎಂದು ಕಾಗೋಡು ತಿಮ್ಮಪ್ಪ ಪುತ್ರಿ ಡಾ. ರಾಜನಂದಿನಿ ಹೊಸ ಬಾಂಬ್ ಸಿಡಿಸಿದ್ದಾರೆ.
ಅವರು ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಇಂದು ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಒಬ್ಬ ತಂದೆಗೆ ಹೆಣ್ಣು ಮಕ್ಕಳು ತುಂಬಾ ಹತ್ತಿರ ಇದ್ದೇ ಇರುತ್ತಾರೆ. ಹಾಗೆ ನಾನು ಸಹ. ಇಷ್ಟು ದೊಡ್ಡ ನಿರ್ಧಾರ ಮಾಡಬೇಕಾದ್ರೆ ಅವರಿಗೆ ನಾನು ತಿಳಿಸದೆ ಇರೋಕಾಗುತ್ತಾ. ಅಪಪ್ರಚಾರಕ್ಕೆ ಯಾರು ಕಿವಿ ಕೊಡಬೇಡಿ. ನಮ್ಮ ಕುಟುಂಬ ಒಡೆದು ಹೋಗಿಲ್ಲ. ನಾವು ಒಟ್ಟಿಗೆ ಇದ್ದೇವೆ. ಈಗಲೂ ಒಟ್ಟಿಗೆ ಊಟ, ತಿಂಡಿ ಮಾಡ್ತೀವಿ. ಸಂಜೆ ನಾನು ಮನೆಗೆ ಹೋದಾಗ ಯಾವ್ ಭಾಗಕ್ಕೆ ಹೋಗಿದ್ರಿ ? ಹೇಗಾಗ್ತಿದೆ ಚುನಾವಣಾ ಪ್ರಚಾರ ? ಅಂತ ನನ್ನ ತಂದೆ ಕೇಳ್ತಾರೆ ಎಂದರು.
ಚುನಾವಣೆ ಪ್ರಚಾರ ಮಾಡುವಾಗ ಒಬ್ರು ಕುಟುಂಬದ ಬಗ್ಗೆ ಆಧಾರ ಇಟ್ಟುಕೊಂಡು ಯಾಕೆ ಪ್ರಚಾರ ಮಾಡ್ತಿರಾ ? ಅಂತ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣರನ್ನ ಪ್ರಶ್ನಿಸಿದ ಅವರು, ಬೇರೆ ವಿಷಯಗಳು ಇದೆಯಲ್ಲ. ನೀವು 9 ವರ್ಷ ಶಾಸಕರಾಗಿದ್ದಾಗ ಮಾಡಿದ ಸಾಧನೆಗಳು ಹೇಳಬಹುದಲ್ಲ. ಮುಂದೆ ಏನ್ ಗುರಿ ಇಟ್ಟುಕೊಂಡಿದ್ದೀರ ಅದನ್ನು ಜನರ ಮುಂದೆ ಹೇಳಬಹುದಲ್ಲ. 2004 ರಲ್ಲಿ ತಂದೆ ಮೇಲೆ ಮಾಡಿದ ಹಲ್ಲೆ ಬಗ್ಗೆ ಮತ್ತು ಬೈಯ್ದಿರುವ ಬಗ್ಗೆ ಹೇಳಬಹುದಲ್ಲ. ಈಗ ಮಾವ ಅಂತ ಹೇಳಿದ್ರೆ ಕ್ಷಮೆನಾ ಅದು. ವಿರೋಧ ಪಕ್ಷದಲ್ಲಿದ್ದರು ಸಹ ಹೇಳೋಕು ಒಂದು ಇತಿ ಮಿತಿ ಇರಬೇಕು. ಶಾಸಕ ಹಾಲಪ್ಪ ನನ್ನ ತಂದೆ ಕಾಗೋಡು ತಿಮ್ಮಪ್ಪರ ಬಗ್ಗೆ ಬೈಕೊಂಡು ತಿರುಗಾಡುತ್ತಾರ ? ಇಲ್ಲವಲ್ಲ ಎಂದು ಬೇಳೂರು ವಿರುದ್ಧ ಹರಿಹಾಯ್ದ ರಾಜನಂದಿನಿ, ನಾನು ಯಾವತ್ತೂ ತಂದೆಗೆ ಅಗೌರವ ತರುವ ಕೆಲಸ ಮಾಡಿಲ್ಲ ಮುಂದೆಯೂ ಮಾಡಲ್ಲ ಎಂದು ಹೇಳಿದರು.
ಸಾಗರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜನಂದಿನಿ ಟಿಕೆಟ್ ಕೈ ತಪ್ಪಿರುವುದಕ್ಕೆ ಬೇಸರಗೊಂಡು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಬಗ್ಗೆ ಅಂದು ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ, ಅವಳು ಹೀಗೆ ಮಾಡುತ್ತಾಳೆಂದು ನಾನು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ, ನನಗೆ ಬೆನ್ನಿಗೆ ಚೂರಿ ಹಾಕಿದ ಹಾಗಾಗಿದೆ. ಅವಳು ಹೀಗೆ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿ, ನಾನು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ ಎಂದಿದ್ದರು. ಆದರೆ ಇಂದು ಬಹಿರಂಗ ಸಭೆಯಲ್ಲೇ ರಾಜನಂದಿನಿ ನಾನು ತಂದೆ ಕಾಗೋಡು ತಿಮ್ಮಪ್ಪ ನವರಿಗೆ ಮೊದಲು ವಿಷಯ ತಿಳಿಸಿಯೇ ಬಿಜೆಪಿ ಸೇರಿದ್ದೇನೆ ಎಂದು ಹೇಳುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು.