“ಧಾರ್ಮಿಕ ಶ್ರದ್ಧೆ, ಭಕ್ತಿಯಿಂದ ಜೀವನ ಐಸಿರಿ” – ಹೊಂಬುಜ ಶ್ರೀಗಳು

0 7ರಿಪ್ಪನ್‌ಪೇಟೆ: ಶ್ರಾವಣ ಮಾಸದ ಚತುರ್ಥ ಸಂಪತ್ ಶುಕ್ರವಾರ ಕೃಷ್ಣಪಕ್ಷದ ನವಮಿಯಂದು ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಅಭೀಷ್ಠವರ ಪ್ರದಾಯಿನಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಇಷ್ಟಾರ್ಥ ನೆರವೇರಲು ಶ್ರದ್ಧಾ ಪೂರ್ವಕ ಪ್ರಾರ್ಥನೆ ಸಲ್ಲಿಸಿದರು. ಸೀರೆ-ಉಡಿ-ಫಲ-ಪುಷ್ಪ-ಧಾನ್ಯಗಳಿಂದ ಹರಕೆ ಪೂಜೆ ಸಮರ್ಪಿಸಿದರು.

ಹೊಂಬುಜ ಅತಿಶಯ ಮಹಾಕ್ಷೇತ್ರದ ಹೊಂಬುಜ ಮಠದಲ್ಲಿ ಇಂದು ನಡೆದ ಶ್ರಾವಣ ಮಾಸದ ಚತುರ್ಥ ಸಂಪತ್ ಶುಕ್ರವಾರದ ಧಾರ್ಮಿಕ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು, ಸರ್ವರಲ್ಲಿಯೂ ಧಾರ್ಮಿಕ ಶ್ರದ್ಧೆ-ಭಕ್ತಿಯ ಆಸ್ತಿಕಭಾವ ವರ್ಧಿಸಬೇಕು. ಪ್ರಾಚೀನ ಜೈನಧರ್ಮ ಭಾರತ ದೇಶದಲ್ಲಿ ಅಹಿಂಸಾತ್ಮಕ ಸಾಮರಸ್ಯ ಜೀವನ ಮೌಲ್ಯವನ್ನು ಪ್ರತಿಪಾದಿಸಿದೆ ಎಂದ ಅವರು, ಹೊಂಬುಜ ಶ್ರೀಕ್ಷೇತ್ರದ ಜಗನ್ಮಾತೆ ಯಕ್ಷಿ ಪದ್ಮಾವತಿ ದೇವಿಯ ಅನುಗ್ರಹ ಭಕ್ತವೃಂದದವರ ಜೀವನ ಐಸಿರಿ ಆಗಲೆಂದು ಶುಭಾಶೀರ್ವಾದ ಮಾಡಿದರು.
ಇದೇ ಸಂದರ್ಭದಲ್ಲಿ ಶಿರಹಟ್ಟಿಯ ಜೈನ ಧರ್ಮೀಯ 100 ಜನ ಭಕ್ತವೃಂದದವರು 450 ಕಿ.ಮೀ. ಪಾದಾಯಾತ್ರೆಯಲ್ಲಿ ಆಗಮಿಸಿ ಪೂಜಾ ಮತ್ತು ಭೋಜನ ಸೇವೆ ಸಲ್ಲಿಸಿದರು.ಶ್ರೀಗಳವರು “ಭಕ್ತವೃಂದದವರು ಧರ್ಮ-ಸಂಸ್ಕೃತಿಯ ರಕ್ಷಣೆಗಾಗಿ ತ್ಯಾಗಿ ಸೇವೆ, ಪರೋಪಕಾರ ದಾನ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಲು” ಪ್ರವಚನದಲ್ಲಿ ತಿಳಿಸಿದರು.


ಹಾವೇರಿ ಜಿಲ್ಲೆಯ ದುಂಡಶಿ ಗ್ರಾಮದ ದಿಗಂಬರ ಜೈನ ಸಮಾಜದ 50 ಜನ ಭಕ್ತ ಸಮೂಹ ಪಾದಯಾತ್ರೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದರು. ಇವರು ಸಮಾಜದ ಸಂಘಟನೆಯೊಂದಿಗೆ ಸದೃಢ ಸಮಾಜ ನಿರ್ಮಾಣಕ್ಕಾಗಿ ಪ್ರಥಮ ವರ್ಷದಿಂದ ಈ ಪಾದಯಾತ್ರೆಯನ್ನು ಕೈಗೊಂಡಿರುವುದಾಗಿ ತಿಳಿಸಿದರು. ನಂತರ ಪಾದಯಾತ್ರಿಗಳನ್ನುದ್ದೇಶಿಸಿ ಆಶೀರ್ವದಿಸಿದ ಪೂಜ್ಯಶ್ರೀಗಳವರು ಸದೃಢ ಸಮಾಜದ ನಿರ್ಮಾಣಕ್ಕಾಗಿ ಯುವಕರು ಶ್ರಮಿಸಬೇಕು. ಜೈನ ಧರ್ಮದ ಆಚರಣೆ, ವ್ರತ, ನಿಯಮಗಳನ್ನು ಚಾಚೂ ತಪ್ಪದೇ ಎಲ್ಲರೂ ಪಾಲಿಸಬೇಕೆಂದು ಕರೆ ನೀಡಿದರು.


ನವಧಾನ್ಯ, ಸಿರಿಧಾನ್ಯಗಳಿಂದ ಫಲ-ಪುಷ್ಪಗಳ 108 ವಿಧಗಳಲ್ಲಿ ಶ್ರೀ ಪದ್ಮಾವತಿ ದೇವಿ ಸಾನಿಧ್ಯದಲ್ಲಿ ಭಕ್ತರು ಕಾಣಿಕೆಗಳನ್ನು ಅರ್ಪಿಸಿದರು.
ಅಂದು ಶ್ರೀ ಪದ್ಮಾವತಿ ದೇವಿ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು. ಅಷ್ಟವಿಧಾರ್ಚನೆ ಪೂಜೆಯ ಬಳಿಕ ಭಕ್ತರು ವಿವಿಧ ಹರಕೆ ಪೂಜೆ ಸಲ್ಲಿಸಿದರು. ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಆಂಧ್ರಪ್ರದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತವೃಂದದವರು ಆಗಮಿಸಿದ್ದು ಭಕ್ತಿಕಾಣಿಕೆ ಸಮರ್ಪಿಸಿದರು.

ಸಂಪ್ರದಾಯದಂತೆ ಉಡಿ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಆಗಮಿಸಿದ್ದ ಭಕ್ತಾದಿಗಳಿಗೆ ಅಭೀಷ್ಠ ಪ್ರಸಾದ ಭವನದಲ್ಲಿ ಸೂಕ್ತ ಊಟೋಪಚಾರ ಮತ್ತು ನೂತನ ಯಾತ್ರಿ ನಿವಾಸದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು.

Leave A Reply

Your email address will not be published.

error: Content is protected !!