ನಿಲ್ಲದ ಇಂಟರ್‌ಸಿಟಿ, ಓಡಾಡದ ಪ್ಯಾಸೆಂಜರ್ ಟ್ರೈನ್ ; ಮಲೆನಾಡಿನ ಪ್ರಯಾಣಿಕರಿಗಿಲ್ಲ ರೈಲು ಹತ್ತುವ ಭಾಗ್ಯ !
ರಿಪ್ಪನ್‌ಪೇಟೆ: ಮೈಸೂರು – ಬೆಂಗಳೂರು – ಶಿವಮೊಗ್ಗ – ಸಾಗರ – ತಾಳಗುಪ್ಪ ಮಾರ್ಗದ ಇಂಟರ್ ಸಿಟಿ ರೈಲು ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲ್ಲದೆ ಇರುವುದು ಶಿವಮೊಗ್ಗದವರೆಗೆ ಬಂದು ಹೋಗುವ ಪ್ಯಾಸೆಂಜರ್ ರೈಲು ಮುಂದಿನ ಹಾರನಹಳ್ಳಿ, ಬಾಳೆಕೊಪ್ಪ, ಕುಂಸಿ, ಅರಸಾಳು, ಆನಂದಪುರ, ಸಾಗರ, ತಾಳಗುಪ್ಪಕ್ಕೆ ಓಡದ ಪ್ಯಾಸೆಂಜರ್ ಟ್ರೈನ್ ಇದರಿಂದಾಗಿ ಮಲೆನಾಡಿನ ಪ್ರಯಾಣಿಕರಿಗೆ ರೈಲು ಹತ್ತಿ ಇಳಿಯುವ ಯೋಗ ಇನ್ನೂ ಬಂದಿಲ್ಲ ಎಂದು ಜನಪರ ಹೋರಾಟಗಾರ ರೈತ ಮುಖಂಡ ಆರ್.ಎನ್. ಮಂಜುನಾಥ್, ಹಿರಿಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಅರಸಾಳು ಎಸ್.ಜಿ.ರಂಗನಾಥ ಮತ್ತು ಹೋರಾಟಗಾರ ಟಿ.ಆರ್.ಕೃಷ್ಣಪ್ಪ ತಮ್ಮ ನೋವಯನ್ನು ಈ ರೀತಿಯಲ್ಲಿ ಹಂಚಿಕೊಂಡರು.
ಈ ಹಿಂದೆ ತಾಳಗುಪ್ಪದಿಂದ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ಕೊರೋನಾ ಸಂದರ್ಭದಲ್ಲಿ ನಿಲ್ಲಿಸಲಾಗಿದ್ದು ಅದು ಈಗ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಭರ್ತಿಯಾಗಿ ಹೋಗುತ್ತಿದೆ ಇದರಿಂದ ಕಡಿಮೆ ಖರ್ಚಿನಲ್ಲಿ ರಾಜಧಾನಿಗೆ ಗ್ರಾಮಾಂತರದ ರೈತ ನಾಗರೀಕರು ಮತ್ತು ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಹಾಗು ವಯೋವೃದ್ದರಿಗೆ ಅನಾರೋಗ್ಯ ಪೀಡಿತರಿಗೆ, ಹೆಚ್ಚು ಹೋಗಿ ಬರುವ ಪ್ಯಾಸೆಂಜರ್‌ಗಳಿಗೆ ಅನುಕೂಲವಾಗುವುದರೊಂದಿಗೆ ಹಣ ಉಳಿತಾಯವಾಗುತ್ತಿತ್ತು. ಇಂಟರ್‌ಸಿಟಿ ರೈಲು ಅರಸಾಳಿನಲ್ಲಿ ನಿಲುಗಡೆ ಮಾಡಲು ಸರಿಯಾದ ಪ್ಲಾಟ್‌ಪಾರಂ ಇಲ್ಲದೇ ಇರುವುದನ್ನೇ ಮುಂದಿಟ್ಟುಕೊಂಡು ರೈಲ್ವೆ ಇಲಾಖೆಯವರು ಅರಸಾಳು ರೈಲ್ವೆ ನಿಲ್ದಾಣದಲ್ಲಿ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲು ಓಡಾಡುತ್ತಿದ್ದೆಯೇ ಹೊರತು ನಿಲ್ದಾಣದಲ್ಲಿ ನಿಲ್ಲದೇ ಪ್ರಯಾಣಿಕರ ಹತ್ತಿ ಇಳಿಯದ ಸ್ಥಿತಿ ಎದುರಾಗಿದೆ.
ಸಂಸದ ಬಿ.ವೈ.ರಾಘವೇಂದ್ರರವರ ಹೆಚ್ಚಿನ ಮುತುರ್ವಜಿಯಿಂದಾಗಿ ಸಾರ್ವಜನಿಕರ ಬೇಡಿಕೆಯನ್ನಾದರಿಸಿ ಕೋಟ್ಯಂತರ ರೂಪಾಯಿ ಹಣವನ್ನು ಬಿಡುಗಡೆಗೊಳಿಸಿ ಅರಸಾಳು ರೈಲ್ವೆ ನಿಲ್ದಾಣವನ್ನು ಅಭಿವೃದ್ದಿ ಪಡಿಸುವುದರೊಂದಿಗೆ ಪ್ಲಾಟ್‌ಪಾರಂ ಸಹ ನಿರ್ಮಿಸಲಾಗಿದ್ದು ಮಾಲ್ಗೂಡಿ ಮ್ಯೂಸಿಯಂ ಸಹ ನಿರ್ಮಿಸಲಾಗಿ ಇದರ ಉದ್ಘಾಟನೆಯನ್ನು ಅಂದಿನ ರೈಲ್ವೆ ಸಚಿವ ಸುರೇಶ್ ಅಂಗಡಿ ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಲಾಗಿದ್ದರೂ ಕೂಡಾ ಈವರೆಗೂ ಮಲೆನಾಡ ಪ್ರದೇಶದ ರೈತಾಪಿ ವರ್ಗದವರಿಗೆ ರೈಲು ಪ್ರಯಾಣ ಮಾತ್ರ ಮರೀಚಿಕೆಯಾಗಿದೆ ಎಂದು ದೂರಿದರು.

ಡಬಲ್ ಇಂಜಿನ್ ಸರ್ಕಾರವಿದ್ದಾಗ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹಾಗೂ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೀಗೆ ಎಲ್ಲರ ಗಮನಸೆಳೆಯಲಾದರೂ ಕೂಡಾ ಈ ವರಗೂ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿರುವ ಮತದಾರರು ಮುಂದಿನ ವರ್ಷದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರ ಬಳಿ ಮತಯಾಚನೇ ಹೇಗೆ ಮಾಡುತ್ತಾರೆಂಬ ಬಗ್ಗೆ ಮಲೆನಾಡಿನ ರೈತಾಪಿ ವರ್ಗದವರಲ್ಲಿ ಪಿಸುಗುಟ್ಟುವಂತಹ ವಸ್ತುವಾಗಿ ರೂಪುಗೊಳ್ಳುತ್ತಿರುವುದು ಕೇಳಿಬರುತ್ತಿದೆ ಎಂದರು.
ಇನ್ನಾದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರರವರು ತಕ್ಷಣ ಗಮನಹರಿಸಿ ಮಲೆನಾಡಿನ ವ್ಯಾಪ್ತಿಯ ಬಾಳೆಕೊಪ್ಪ, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಲ, ಆನಂದಪುರ ಮಾರ್ಗದ ಸಾಗರ, ತಾಳಗುಪ್ಪಕ್ಕೆ ಪ್ಯಾಸೆಂಜರ್ ರೈಲು ಓಡಿಸುವುದು ಹಾಗೂ ಮೈಸೂರು ಬೆಂಗಳೂರು ಇಂಟರ್ ಸಿಟಿ ರೈಲು ಅರಸಾಳು ನಿಲ್ದಾಣದಲ್ಲಿ ನಿಲುಗಡೆ ಮಾಡುವ ಮೂಲಕ ಮಲೆನಾಡಿನ ಮತದಾರರ ಮನಗೆಲ್ಲುವತ್ತ ಮುಂದಾಗುವರೇ ಕಾದುನೋಡುವಂತಾಗಿದೆ.
ಅರಸಾಳು ರೈಲ್ವೆ ನಿಲ್ದಾಣದಲ್ಲಿ ಇಂಟರ್ ಸಿಟಿ ಮತ್ತು ಪ್ಯಾಸೆಂಜರ್ ರೈಲು ನಿಲುಗಡೆಯಿಂದಾಗಿ ಸೂಡೂರು, 9ನೇ ಮೈಲಿಕಲ್ಲು, ಅರಸಾಳು, ಹಾರೋಹಿತ್ತಲು, ಬಸವಾಪುರ, ಬೆಳ್ಳೂರು, ಬುಕ್ಕಿವರೆ ಆಲಸೆ, ಕೋಣಂದೂರು, ತೀರ್ಥಹಳ್ಳಿ, ಆರಗ, ಸೊನಲೆ, ಜಯನಗರ, ಹೊಂಬುಜ ಅತಿಶಯ ಮಹಾಕ್ಷೇತ್ರ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಸಿಗಂದೂರು, ಕೊಡಚಾದ್ರಿ ಹೊಸನಗರ, ಬೈಂದೂರು, ಭಟ್ಕಳ ಕೋಡೂರು, ಅಮೃತ, ಹೆದ್ದಾರಿಪುರ, ಹರತಾಳು, ಹಾಲುಗುಡ್ಡೆ, ಬಾಳೂರು ಹೀಗೆ ಹತ್ತು ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರವಾಗಿರುವ ಈ ರೈಲ್ವೆ ನಿಲ್ದಾಣದಲ್ಲಿ ಇನ್ನಾದರೂ ರೈಲು ನಿಲ್ಲುವಂತೆ ಮಾಡಲು ಮುಂದಾಗುವರೇ ಕಾದುನೋಡಬೇಕಾಗಿದೆ.