ರಿಪ್ಪನ್‌ಪೇಟೆ : ಮಂಗನಿಗೆ ಸೊಪ್ಪು ಹುಟ್ಟದ ಕಾಲದಲ್ಲಿ ಸರ್ಕಾರ ರೈತರು ಫಸಲು ಮತ್ತು ಆತ್ಮ ರಕ್ಷಣೆಗಾಗಿ ಪಡೆಯಲಾದ ಬಂದೂಕುಗಳ ಪರವಾನಗಿ ನವೀಕರಣ ಮತ್ತು ಚುನಾವಣೆಯಿಂದಾಗಿ ಠಾಣೆಗೆ ಒಪ್ಪಿಸುವ ಸರ್ಕಾರದ ನಿರ್ಧಾರದಿಂದ ರೈತರು ದಿಕ್ಕೆಟ್ಟು ಕುಳಿತುಕೊಳ್ಳುವಂತಾಗಿದೆ. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ ಎಂದು ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಬಂದೂಕುಗಳ ಪರವಾನಗಿ ನವೀಕರಿಸಿಕೊಳ್ಳಲು ಕಂದಾಯ ಇಲಾಖೆಗೆ ಮತ್ತು ಪೊಲೀಸ್ ಇಲಾಖೆಗೆ ಒಟ್ಟು 4.500 ರೂ. ಹಣ ಕಟ್ಟಬೇಕು ಇನ್ನೂ ಈಗ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ಮತ್ತು ಆಹಾರಕ್ಕಾಗಿ ರೈತರ ತೋಟ ಗದ್ದೆಗಳಿಗೆ ನುಗ್ಗಿ ಬೇಸಿಗೆ ಬೆಳೆ ಹಾನಿಗೊಳಿಸುವುದನ್ನು ತಡೆಯಲು ರೈತರು ತಮ್ಮ ಬಂದೂಕಿನಿಂದ ಗುಂಡು ಹಾರಿಸಿ ಪ್ರಾಣಿಗಳನ್ನು ಓಡಿಸಲು ಇರುವ ಏಕೈಕ ಸಾಧನವನ್ನು ಚುನಾವಣೆಯ ದೃಷ್ಟಿಯಿಂದ ಠಾಣೆಗೆ ಒಪ್ಪಿಸಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಫಸಲನ್ನು ರಕ್ಷಿಸಿಕೊಳ್ಳುವುದು ಹರಸಾಹಸವಾಗಿದೆ ಎಂದು ರೈತರು ತಮ್ಮ ಅಸಹಾಯಕತೆಯನ್ನು ಮಾಧ್ಯಮದವರ ಬಳಿ ತೋಡಿಕೊಂಡರು.
ಸರ್ಕಾರ ಬಂದೂಕು ಪರವಾನಗಿ ನವೀಕರಣದ ಹೆಸರಿನಲ್ಲಿ ಕಂದಾಯ ಇಲಾಖೆ ಮತ್ತು ಪೊಲೀಸ್ ಠಾಣೆಯಲ್ಲಿ ಎಂದು ಎರಡು ಕಡೆಯಲ್ಲಿ ಹಣ ಸಂದಾಯ ಮಾಡಬೇಕಾಗಿದೆ. ಇದರಿಂದ ರೈತರ ಮೇಲೆ ಬರೆ ಎಳೆಯುವ ಹುನ್ನಾರ ನಡೆಸಿದಂತಾಗಿದೆ ಎಂದು ಹಲವು ರೈತರು ತಮ್ಮ ಅಸಹಾಯಕತೆಯನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದರು.
ಒಂದು ಕಡೆಯಲ್ಲಿ ಅಂತರ್ಜಲ ಬತ್ತಿ ಕೊಳವೆ ಬಾವಿ, ತೆರೆದ ಬಾವಿಯಲ್ಲಿ ನೀರಿಲ್ಲದೆ ಅಡಿಕೆ ತೋಟ, ಮತ್ತಿತರ ಬೆಳೆಗಳು ಒಣಗುವಂತಾಗಿದ್ದು ಇನ್ನೊಂದು ಕಡೆಯಲ್ಲಿ ಪ್ರಾಣಿಗಳಿಂದ ಬೇಸಿಗೆ ಬೆಳೆ ಸಂರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದ ರೈತರಿಗೆ ಬಂದೂಕು ಪರವಾನಗಿ ನವೀಕರಣಕ್ಕಾಗಿ ಹಣ ಹೊಂದಿಸುವುದು ಕಷ್ಟಕರವಾಗಿದೆ. ಇದು ನುಂಗಲಾರದ ತುತ್ತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.