ರಿಪ್ಪನ್‌ಪೇಟೆ : ಮಣಿಪುರದಲ್ಲಿ ಸೋಮವಾರ ಮರಣವನ್ನಪ್ಪಿದ ರಿಪ್ಪನ್‌ಪೇಟೆಯ ಯೋಧ ಸಂದೀಪ್ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಇಂದು ಬೆಳಗ್ಗೆ ಪಾಲ್ಗೊಂಡು ಅಂತಿಮ ದರ್ಶನ ಪಡೆದರು.
ಬೆಂಗಳೂರಿನಿಂದ ಇಂದು ಮುಂಜಾನೆ 4 ಗಂಟೆಗೆ ಪಾರ್ಥಿವ ಶರೀರ ಶಬರೀಶನಗರದ ಸ್ವಗೃಹಕ್ಕೆ ಆಗಮಿಸಿದ್ದು, ಯೋಧ ಸಂದೀಪ್ ಅವರ ಪಾರ್ಥಿವ ಶರೀರ ಮನೆ ತಲುಪುತ್ತಿದ್ದಂತೆ ತಂದೆ-ತಾಯಿ ಸೇರಿದಂತೆ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತು.
ರಾಜ್ಯಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಶಾಸಕ, ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಮೃತ ಸಂದೀಪನಿಗೆ ಅಂತಿಮ ನಮನ ಸಲ್ಲಿಸಿದರು.
ಮುಕ್ತಿ ವಾಹಿನಿ ವಾಹನದ ಮೂಲಕ ಶಬರೀಶನಗರದ ಮೃತನ ಸ್ವಗೃಹದಿಂದ ವಿನಾಯಕ ವೃತ್ತದವರೆಗೂ ಮೆರವಣಿಗೆ ಮೂಲಕ ತಂದು ನಂತರ ವಿನಾಯಕ ವೃತ್ತದಲ್ಲಿ ಸಂದೀಪ್ ಪಾರ್ಥಿವ ಶರೀರವನ್ನು 2 ಗಂಟೆಗಳ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ಗುಂಡುಗಳನ್ನು ಗಾಳಿಯಲ್ಲಿ ಹಾರಿಸುವ ಮೂಲಕ ಅಗಲಿದ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು.
ರಾಜ್ಯದ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ನಿವೃತ್ತ ಸೈನಿಕರು ರಿಪ್ಪನ್‌ಪೇಟೆಯ ಸುತ್ತಮುತ್ತಲಿನ ಗ್ರಾಮದ ವಯೋವೃದ್ಧರು, ಮಹಿಳೆಯರು, ಮಕ್ಕಳಾದಿಯಾಗಿ ಆಗಮಿಸಿ ಯೋಧನ ಅಂತಿಮ ದರ್ಶನ ಪಡೆದರು.
ಮೃತ ಸೈನಿಕನ ಗೌರವಾರ್ಥವಾಗಿ ರಿಪ್ಪನ್‌ಪೇಟೆಯಲ್ಲಿ ಸ್ವಯಂ ಘೋಷಿತ ಬಂದ್:
ಇಂದು ಪಟ್ಟಣದ ಅಂಗಡಿ ಮುಂಗಟ್ಟುಗಳು ಸ್ವಯಂ ಘೋಷಿತ ಬಂದ್ ಆಗಿದ್ದವು. ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಗಾಂಧಿನಗರದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತಿಮ ಶವ ಸಂಸ್ಕಾರ ನಡೆಸಲಾಯಿತು.