ರಿಪ್ಪನ್‌ಪೇಟೆ: ಕಳೆದ ಐದು ವರ್ಷದ ಅವಧಿಯಲ್ಲಿ ಒಂದು ವರ್ಷದಲ್ಲಿ ಸಮ್ಮಿಶ್ರ ಸರ್ಕಾರ ನಂತರ ಎರಡು ವರ್ಷ ಕೊರೋನಾ ಇದ್ದ 2 ವರ್ಷದ ಅವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಸರ್ಕಾರದಿಂದ 3454 ಕೋಟಿ ರೂ. ಅನುದಾನವನ್ನು ತರುವುದರೊಂದಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಗ್ರಾಮೀಣ ಕುಡಿಯುವ ನೀರಿನ ಜಲಜೀವನ್ ಮಿಷನ್ ಯೋಜನೆಯಡಿ ತಾಲ್ಲೂಕಿಗೆ 700 ಕೋಟಿ ರೂ. ಅನುದಾನವನ್ನು ನೀಡುವ ಮೂಲಕ ಶಾಶ್ವತ ಶುದ್ದ ಕುಡಿಯುವ ನೀರಿನ ಯೋಜನೆಯನ್ನು ತರಲಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸಮೀಪದ ಕೋಡೂರು ಗ್ರಾಮದಲ್ಲಿ ಚುನಾವಣಾ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಅಡಿಕೆಯಿಂದ ಮಾರಕ ರೋಗ ಬರುತ್ತದೆಂದು ಕಾಂಗ್ರೆಸ್ ಸರ್ಕಾರವಿದ್ದಾಗ ನ್ಯಾಯಾಲಯಕ್ಕೆ ಅಫಿಡೆವಿಟ್ ನೀಡಿದ್ದು ಇದರಿಂದಾಗಿ ಮಲೆನಾಡಿನ ರೈತರು ಕಂಗಲಾಗುವಂತಾಗಿದ್ದು ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ನನ್ನನ್ನು ಅಡಿಕೆ ಬೆಳೆಗಾರರ ಟಾಸ್ಕ್ ಫೋರ್ಸ್ ಅಧ್ಯಕ್ಷರನ್ನಾಗಿ ಮಾಡಿ ಅದರಿಂದ ಹೋರಾಟ ಮಾಡಿ ಕೇಂದ್ರದ ಗಮನಸೆಳೆದು ಅಡಿಕೆ ಸೇವನೆಯಿಂದ ಯಾವುದೇ ರೋಗ ಇಲ್ಲ ಅದೊಂದು ಔಷಧಿಯು ಗುಣವಿರುವ ವಸ್ತು ಎಂದು ಸಂಶೋಧನೆಯಿಂದ ವರದಿ ಬಂದಿದ್ದು ಮುಂದಿನ ದಿನಗಳಲ್ಲಿ ನ್ಯಾಯಾಲಯಕ್ಕೆ ವರದಿ ನೀಡಿ ರೈತರಲ್ಲಿನ ಭಯವನ್ನು ದೂರಗೊಳಿಸುವುದರೊಂದಿಗೆ ಸ್ಥಿರ ಬೆಲೆ ನಿಲ್ಲುವಂತೆ ಕಾಪಾಡುವುದು ನನ್ನ ಮೂಲ ಗುರಿಯಾಗಿದೆ.ನಾನು ಮತದಾರ ಅಡಿಕೆ ಬೆಳೆಗಾರರ ಹಿತ ಕಾಯುವ ಕಾವಲುಗಾರ ಈ ಬಗ್ಗೆ ತಾವು ನನ್ನ ಕಾರ್ಯವನ್ನು ಹೋದಲಿ ಬಂದಲಿ ವಿಮರ್ಶೆ ಮಾಡಿ ಎಂದು ಹೇಳಿ ಈ ಬಾರಿ ನನಗೆ ಒಂದು ಅವಕಾಶ ನೀಡಿ ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್‌ಪೂಜಾರಿ, ಮಾಜಿ ಶಾಸಕ ಬಿ.ಸ್ವಾಮಿರಾವ್, ಮುಖಂಡರಾದ ಎನ್.ಆರ್.ದೇವಾನಂದ, ನಾಗೇಂದ್ರಕಲ್ಲೂರು, ಗ್ರಾ.ಪಂ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷ ಜಯಪ್ರಕಾಶ್, ವಿಜೇಂದ್ರ ರಾವ್, ಪುಟ್ಟಪ್ಪ, ಸುಧೀರ್, ಪಕ್ಷದ ಮುಖಂಡರು ಪಾಲ್ಗೊಂಡಿದರು.