ಮೂಲಭೂತ ಸೌಕರ್ಯ ಒದಗಿಸಿ ನಂತರ ಗ್ರಾಮಕ್ಕೆ ಕಾಲಿಡಿ ; ಹುತ್ತಳ್ಳಿ, ಉಂಬ್ಳೆಬೈಲು ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಕೂಗು | Election Boycott | Araga Jnanendra

0 0

ರಿಪ್ಪನ್‌ಪೇಟೆ : ರಾಜ್ಯದ ಎಷ್ಟೋ ಗ್ರಾಮಗಳಿಗೆ ಇನ್ನೂ ಸಿಗದ ಮೂಲಭೂತ ಸೌಲಭ್ಯಗಳು, ಒಂದು ಕಿವಿಯಲ್ಲಿ ಚುನಾವಣಾ ಪ್ರಣಾಳಿಕೆ ಭರವಸೆ ಕೇಳಿ, ಇನ್ನೊಂದು ಕಿವಿಯಲ್ಲಿ ಬಿಡುವುದೇ ಪ್ರತಿವರ್ಷದ ರೂಢಿ. ಇದರಿಂದ ಬೇಸತ್ತ ಮತದಾರರು ಜನಪ್ರತಿನಿಧಿಗಳಿಗೆ ಬುದ್ಧಿ ಕಲಿಸಲು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗುತ್ತಿದ್ದಾರೆ.

ಗ್ರಾಮಕ್ಕೆ ಈವರೆಗೆ ಯಾವುದೇ ಮೂಲ ಸೌಕರ್ಯಗಳನ್ನು ಸರ್ಕಾರ ಹಾಗೂ ಅಲ್ಲಿನ ಜನಪ್ರತಿನಿಧಿಗಳು ಒದಗಿಸದಿರುವುದರಿಂದ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದು ಅನಿವಾರ್ಯವಾಗಿದೆ. ನಮ್ಮ ಎಚ್ಚರಿಕೆಯನ್ನು ಸರ್ಕಾರ ಹಾಗೂ ಇಲ್ಲಿನ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು‌. ಮೊದಲು ಮೂಲಭೂತ ಸೌಕರ್ಯ ಒದಗಿಸಿ ನಂತರ ಗ್ರಾಮಕ್ಕೆ ಕಾಲಿಡಿ ಎಂದು ಹುತ್ತಳ್ಳಿ, ಉಂಬ್ಳೆಬೈಲು ಗ್ರಾಮಸ್ಥರು ಆಗ್ರಹಿಸಿ, ಬಹಿಷ್ಕಾರದ ಎಚ್ಚರಿಕೆ ನೀಡಿ ಗ್ರಾಮದೊಳಗೆ ‘ಮತ ಭಿಕ್ಷೆಗೆ ಬರಬೇಡಿ’ಯೆಂಬ ಘೋಷಣೆಯ ನಾಮಫಲಕವನ್ನು ಗ್ರಾಮದ ಪ್ರವೇಶದ್ವಾರದಲ್ಲಿ ಅಳವಡಿಸುವುದರೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗ್ರಹಾರ ಹೋಬಳಿಯ ಉಂಬ್ಳೆಬೈಲು, ಮಾದ್ಲುಮನೆ, ಸಣ್ಣಮನೆ, ಹೊಸಕೊಪ್ಪ, ಕಪ್ಪೆಹೊಂಡ, ಆಲೂರು, ಹತ್ತಳ್ಳಿ, ಚಿಕ್ಕಮತ್ತಿಗ, ಕಲ್ಲಳ್ಳಿ, ಶಿವಳ್ಳಿಕೊಪ್ಪ, ದೇಮ್ಲಾಪುರ, ಮಳಲಿಮಕ್ಕಿ, ಕೋಣಂದೂರು ಸಂಪರ್ಕಿಸುವ ನಾಲ್ಕೈದು ಕಿ.ಮೀ ಉದ್ದದ ರಸ್ತೆಯು ಸಂಪೂರ್ಣ ಹದಗೆಟ್ಟ ಕಾರಣ ಕಾಲ್ನಡಿಗೆಯಲ್ಲೂ ಹೋಗುವುದು ಕಷ್ಟಕರವಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಯಾವ ಆಟೋ ಚಾಲಕರು, ಆ್ಯಂಬುಲೆನ್ಸ್, ಶಾಲಾ ವಾಹನಗಳು, ಈ ರಸ್ತೆಯಲ್ಲಿ ಬರಲು ಒಪ್ಪದೆ ಇರುವುದರಿಂದ ನಿತ್ಯ ಸಂಕಷ್ಟದಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕು ಸಾಮಾನುಗಳನ್ನು ತಲೆ ಮೇಲೆ ಹೊತ್ತುಕೊಂಡು ಹೋಗುವ ಪರಿಸ್ಥಿತಿ ಇಲ್ಲಿಂದಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರಿಗೂ ಸಾಕಷ್ಟು ಭಾರಿ ಮನವಿ ಪತ್ರ ನೀಡುವ ಮೂಲಕ ಗ್ರಾಮದ ಮೂಲಭೂತ ಸೌಕರ್ಯವನ್ನು ಪರಿಹರಿಸುಂತೆ ಆಗ್ರಹಿಸಲಾದರೂ ಕೂಡಾ ನಮ್ಮೂರಿನ ಸಮಸ್ಯೆಯನ್ನು ನಿರ್ಲಕ್ಷ್ಯಿಸಿದ ಪರಿಣಾಮ ಬೇರೆ ಮಾರ್ಗವಿಲ್ಲದೇ ಈ ನಿರ್ಧಾರವನ್ನು ಕೈಗೊಳ್ಳಬೇಕಾಯಿತು ಎಂದು ಮಾಧ್ಯಮದವರ ಬಳಿ ತಮ್ಮ ಅಸಹಾಯಕತೆಯನ್ನು ಗ್ರಾಮಸ್ಥರು ಈ ರೀತಿಯಲ್ಲಿ ವ್ಯಕ್ತಪಡಿಸಿದರು.


ಹುಂಚದಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾರಕೊಡ್ಲು  ಉಂಬ್ಳೆಬೈಲು, ಮಾದ್ಲಮನೆ, ಸಣ್ಣಮನೆ, ಕಪ್ಪೆಹೊಂಡ ಇನ್ನಿತರ ಮಜರೆ ಗ್ರಾಮಗಳಲ್ಲಿ ಸುಮಾರು 700 ಕ್ಕೂ ಅಧಿಕ ಮತದಾರರರಿದ್ದು ಅಮೃತ, ಕೋಣಂದೂರು, ಹುಂಚದಕಟ್ಟೆ ಶಾಲೆ ಕಾಲೇಜ್‌ಗಳಿಗೆ ನಿತ್ಯ 40 ರಿಂದ 50 ವಿದ್ಯಾರ್ಥಿಗಳು  ಐದಾರು ಕಿ.ಮೀ.ಸುತ್ತಾಡಿಕೊಂಡು ಹೋಗಿ ಬರಬೇಕಾಗಿದೆ. ಅನಾರೋಗ್ಯ ಪೀಡಿತರು, ಗರ್ಭಿಣಿಯರು ಮತ್ತು ವೃದ್ಧರು ಹೀಗೆ ಹಲವರನ್ನು ದೂರದ ಕೋಣಂದೂರು ತೀರ್ಥಹಳ್ಳಿ, ಮಣಿಪಾಲ, ಶಿವಮೊಗ್ಗ, ಸಾಗರ ಕರೆದುಕೊಂಡು ಹೋಗಲು ಸುಸಜ್ಜಿತ ಸಂಪರ್ಕ ರಸ್ತೆ ಇಲ್ಲದೆ ಕಂಬಳಿ ಜೋಲಿಯಲ್ಲಿ ಹೊತ್ತು ಸಾಗಿಸಬೇಕಾಗಿದೆ. ಇನ್ನೂ  ಶುದ್ದ ಕುಡಿಯುವ ನೀರಿನ ಸರ್ಕಾರದ ಜಲ ಜೀವನ ಮಿಷನ್ ಯೋಜನೆಯಡಿ ಅಳವಡಿಸಲಾದ ನೀರಿನ ಸೌಲಭ್ಯ ಉದ್ಘಾಟನೆಯ ದಿನ ಬಿಟ್ಟರೇ ಈವರೆಗೂ ಒಂದು ಹನಿ ನೀರು ಹರಿದಿಲ್ಲ. ಮೃತರಿಗೆ ಸರಿಯಾದ ಸ್ಮಶಾನ ಜಾಗ ನೀಡಿಲ್ಲ. ಇನ್ನೂ ಗ್ರಾಮದಲ್ಲಿ ಯುವಕರು ನಿತ್ಯ ಸಂಜೆ ಮುಂಜಾನೆ ಹೀಗೆ ಅಂಗನವಾಡಿ ಮಕ್ಕಳಿಗಾಗಿ ಆಟದ ಮೈದಾನಕ್ಕಾಗಿ ಜಾಗವನ್ನು ಮಾಡಿಕೊಂಡಿದ್ದರೂ ಈ ಜಾಗವನ್ನು ಕಬಳಿಸುವ ಹುನ್ನಾರ ನಡೆಸಿ ದುರುದ್ದೇಶದಿಂದ ಯುವಕರ ಮೇಲೆ ಸುಳ್ಳು ಕೇಸ್ ದಾಖಲಿಸುತ್ತಾರೆಂದು ತಮ್ಮ ಆಕ್ರೋಶವನ್ನು ಮಾಧ್ಯಮದವರ ಮುಂದೆ ಎಳೆಎಳೆಯಾಗಿ ಹಂಚಿಕೊಂಡರು.

ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ದಿ.ಶಾಂತವೇರಿ ಗೋಪಾಗೌಡ, ಕಡಿದಾಳ್ ಮಂಜಪ್ಪ, ಡಿ.ಬಿ.ಚಂದ್ರೇಗೌಡ ಹೀಗೆ ಇನ್ನಿತರರು ಸ್ಪರ್ಧಿಸಿರುವ ಈ ಕ್ಷೇತ್ರದಲ್ಲಿನ ಅಭಿವೃದ್ದಿ ಹೀಗಾದರೆ ಬೇರೆ ಕ್ಷೇತ್ರದವರ ಕಥೆ ಏನು ? ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರದಾಗಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ:

ರಸ್ತೆ ಹದಗೆಟ್ಟಿರುವ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳ ಹತ್ತಿರ ಸುಮಾರು ಇಪ್ಪತ್ತು ವರ್ಷಗಳಿಂದ ಸರಿ ಮಾಡಿಸಿಕೊಡುವಂತೆ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಸದ್ಯ ಗ್ರಾಮದ ಮುಂದೆ ಬ್ಯಾನರ್ ಹಾಕಿ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ರಸ್ತೆಗೆ ಡಾಂಬರ್ ಬೀಳೋವರೆಗೂ ಕೇಳೋಕ್ ಬರ್ಬೇಡಿ!

ಅಲ್ಲದೇ, ಗ್ರಾಮಸ್ಥರ ಮನವಿಗೆ ಯಾವುದೇ ಸ್ಪಂದನೆಯೂ ಸಿಕ್ಕಿಲ್ಲ. ಈ ಭಾಗಗಳಿಗೆ ಸಂಪರ್ಕ ರಸ್ತೆ ಸಂಪೂರ್ಣ ಡಾಂಬರೀಕರಣ ಆಗೋವರೆಗೂ ಮತದಾನ ಮಾಡಲ್ಲ ಎಂದು ಗ್ರಾಮಸ್ಥರು ಬ್ಯಾನರ್ ಹಾಕಿದ್ದಾರೆ. ಎಲ್ಲ ಗ್ರಾಮಸ್ಥರೂ ಒಟ್ಟಾಗಿ ಚುನಾವಣಾ ಬಹಿಷ್ಕಾರ ನಿರ್ಣಯ ಕೈಗೊಂಡಿದ್ದಾರೆ.

ರಾಜಿ ಸಂಧಾನಗಳಿಗೆ ಅವಕಾಶವೂ ಇಲ್ಲ

ಅಷ್ಟೇ ಅಲ್ಲ, ರಸ್ತೆ ಸಂಪೂರ್ಣ ದುರಸ್ಥಿಯಾಗುವವರೆಗೂ ಯಾವುದೇ ರೀತಿಯಲ್ಲೂ ಮನವೊಲಿಕೆಗೆ ನಾವು ಒಪ್ಪಲ್ಲ, ರಾಜಿ ಸಂಧಾನಗಳಿಗೆ ಅವಕಾಶವೂ ಇಲ್ಲ ಎಂದು ಈ ಭಾಗದ ಗ್ರಾಮಸ್ಥರು ದೃಢ ನಿರ್ಧಾರ ಮಾಡಿದ್ದಾರೆ.

ನೀವೇನಾರಾ ಹೇಳಿ, ನಾವ್ ವೋಟ್ ಹಾಕಲ್ಲ !

ಸದ್ಯ ಇದೀಗ ತಮ್ಮ ಗ್ರಾಮಕ್ಕೆ ಕನಿಷ್ಠ ಸೌಲಭ್ಯವನ್ನೂ ಒದಗಿಸಿಕೊಡದ ಜನಪ್ರತಿನಿಧಿಗಳ ವಿರುದ್ಧ ಸಿಟ್ಟಿಗೆದ್ದ ಹಲವು ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಹಾಕ್ತಿದ್ದಾರೆ. ನಮ್ಮೂರಿಗೆ ಸೌಕರ್ಯ ಒದಗಿಸದ ಜನಪ್ರತಿನಿಧಿಗಳ ವಿರುದ್ಧ ಸಿಟ್ಟಿಗೆದ್ದು “ನೀವೇನಾರಾ ಹೇಳಿ, ನಾವ್ ವೋಟ್ ಹಾಕಲ್ಲ” ಎಂದು ಬಂಡೇಳುತ್ತಿದ್ದಾರೆ.

ಕೋಣಂದೂರು ಲಯನ್ಸ್ ನಿರ್ದೇಶಕ ನಾಗೇಶ್ ಉಂಬ್ಳೆಬೈಲು, ಹುಂಚದಕಟ್ಟೆ ಗ್ರಾಮ ಪಂಚಾಯ್ತಿ ಸದಸ್ಯ ಎಸ್.ಕೆ.ಶಿವಾನಂದ ಹಾಗೂ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯೆ ಶೈಲಜಾ ವೆಂಕಟೇಶ್ ಗ್ರಾಮಸ್ಥರಾದ ಕೆ.ಸಿ.ರಮೇಶ್, ಸೀತಾರಾಮ,ಗಣೇಶ್ ಮಾದ್ಲಮನೆ, ಪುಟ್ಟಸ್ವಾಮಿ, ಮುರಳಿಧರ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!