ರಿಪ್ಪನ್‌ಪೇಟೆ ಕಟ್ಟಡ ಕಾರ್ಮಿಕ ಸಂಘದಿಂದ ಬಡ ಮಹಿಳೆ ಕುಟುಂಬಕ್ಕೆ ಆರ್ಥಿಕ ನೆರವು
ರಿಪ್ಪನ್‌ಪೇಟೆ : ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನಸಂಪಳ್ಳಿ ಗ್ರಾಮದ ಶಶಿಕಲಾ ಎಂಬ ಮಹಿಳೆ ಕೆಲ ವರ್ಷಗಳ ಹಿಂದೆ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಅವರಿಗೆ ಇರುವ ಓರ್ವ ಮಗಳು, ಪೂಜಾ ಹುಟ್ಟುವಾಗಲೇ ಮಾನಸಿಕ ಹಾಗೂ ದೈಹಿಕ ಅಸ್ವಸ್ಥೆ. ಶಶಿಕಲಾ ಅವರಿಗೂ ಕಿವಿ ಸರಿಯಾಗಿ ಕೇಳಿಸದು. ಜೋಪಡಿಯಂತಿದ್ದ ಮನೆ ಕೆಲ ವರ್ಷಗಳ ಹಿಂದೆ ಸಂಪೂರ್ಣ ಶಿಥಿಲಗೊಂಡು ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲೇ ತಾಯಿ ಮಗಳು ವಾಸ ಮಾಡುತ್ತಿದ್ದಾರೆ. ಆದರೆ ಈ ಕುಟುಂಬಕ್ಕೆ ಸರಕಾರದ ಯಾವ ಯೋಜನೆಗಳ ಫಲ ಸಹಾ ಇದುವರೆಗೆ ಸಿಕ್ಕಿಲ್ಲ. ಕಾರಣ ಈ ಕುಟುಂಬಕ್ಕೆ ಪಡಿತರ ಚೀಟಿಯನ್ನಾಗಲಿ ಮಾಡಿಸಿಕೊಳ್ಳಲು ಇದುವರೆಗೂ ಸಾಧ್ಯವಾಗಿರಲಿಲ್ಲ. ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಸಣ್ಣಪುಟ್ಟ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.

ಮಹಿಳೆಯ ಕಷ್ಟವನ್ನು ಅರಿತ ಸಾಮಾಜಿಕ ಕಳಕಳಿಯ ಗ್ರಾಮಸ್ಥರೊಬ್ಬರು, ಈಕೆಯ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗೆ ವಾಟ್ಸಾಪ್ ಮೂಲಕ ತಿಳಿಸಿದ್ದರು. ಅಲ್ಲದೇ ಮಹಿಳೆಯ ನಿಷ್ಕೃಷ್ಟ ಬದುಕಿನ ಕುರಿತು ವಿವಿಧ ಪತ್ರಿಕೆಗಳಲ್ಲಿ ಹಾಗೂ ವೆಬ್ ನ್ಯೂಸ್ ಗಳಲ್ಲಿ ಪ್ರಕಟವಾದ ಸುದ್ದಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ರಿಪ್ಪನ್‌ಪೇಟೆಯ ಕಟ್ಟಡ ಕಾರ್ಮಿಕ ಸಂಘದವರು ಮಹಿಳೆಯನ್ನು ಸಂಪರ್ಕಿಸಿ ಸಹಾಯಹಸ್ತ ಚಾಚಿದ್ದಾರೆ. ನಗದು ಪರಿಹಾರವನ್ನು ನೀಡುವುದರ ಜೊತೆಗೆ ದಿನಸಿ ವಸ್ತುಗಳ ಕಿಟ್ ಸಹ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ
ಅಧ್ಯಕ್ಷ ಮೊಹಮ್ಮದ್ ಹುಸೇನ್ ಗೌರವಾಧ್ಯಕ್ಷ ರಮೇಶ್ ಬಿ. ಆರ್. ಹಾಗೂ ಪದಾಧಿಕಾರಿಗಳಾದ ಗಣೇಶ್ ಎ. ಆರ್
ಮಂಜುನಾಥ್ ಆಚಾರ್ ಸೀನ ಆಚಾರ್
ರಾಘು ಬಿ. ಎನ್. ಇನ್ನಿತರರಿದ್ದರು.