ರಿಪ್ಪನ್‌ಪೇಟೆ ; ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

0 2

ರಿಪ್ಪನ್‌ಪೇಟೆ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರಣದಲ್ಲಿ ಹೆಜ್ಜೇನು ದಾಳಿ ಮಾಡಿವೆ. ಇದರಿಂದಾಗಿ ಸುಮಾರು 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸೋಮವಾರ ಬೆಳಗ್ಗೆ ಜೇನುಹುಳುಗಳು ದಾಳಿ ಮಾಡಿದ್ದರಿಂದ 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿರದಿದ್ದರೂ, ಅವರಲ್ಲಿ ಹಲವರಿಗೆ ಜೇನುನೊಣಗಳು ಕಚ್ಚಿದ ಜಾಗದ ಸುತ್ತಲೂ ಭಾರಿ ಊತ ಕಂಡುಬಂದಿದೆ.


ಕಳೆದೊಂದು ತಿಂಗಳಿನಿಂದ ಕಾಲೇಜಿಗೆ ರಜೆ ನೀಡಲಾಗಿತ್ತು. ನಿನ್ನೆ ಎಲ್ಲಾ ತರಗತಿಗಳು ಏಕಕಾಲದಲ್ಲಿ ಆರಂಭವಾಗಿತ್ತು. ತರಗತಿಗಳು ಪ್ರಾರಂಭವಾಗುತಿದ್ದಂತೆ ಗಾಬರಿಗೊಂಡಿರುವ ಜೇನುನೊಣಗಳು ಏಕಾಏಕಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ.

ಈ ಕಾಲೇಜಿನಲ್ಲಿ 850ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ಎರಡನೇ ಮಹಡಿಯಲ್ಲಿ ಕಳೆದ ಐದಾರು ವರ್ಷಗಳಿಂದ ಜೇನು ನೊಣಗಳು ಗೂಡು ಕಟ್ಟಿಕೊಂಡಿವೆ. ಆದರೆ ಕಾಲೇಜಿನ ಆಡಳಿತ ಮಂಡಳಿ ಜೇನು ನೊಣಗಳನ್ನು ತೆರವುಗೊಳಿಸದೆ ನಿರ್ಲಕ್ಷ್ಯ ತೋರಿದೆ. ಹೀಗಿರುವಾಗ ವಿದ್ಯಾರ್ಥಿಗಳು ಪ್ರತಿನಿತ್ಯ ಆತಂಕದಲ್ಲೇ ಎರಡನೇ ಮಹಡಿಯಲ್ಲಿ ಓಡಾಡುತಿದ್ದಾರೆ. ಈ ಬಗ್ಗೆ ಕಾಲೇಜಿನ ಸಿಬ್ಬಂದಿಗಳಾಗಲಿ, ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಆಡಳಿತ ಮಂಡಳಿಯವರಾಗಲಿ ತಲೆಕೆಡಿಸಿಕೊಳ್ಳದೇ ಕುಳಿತಿದ್ದೇ ಇಂದಿನ ಈ ಘಟನೆಗೆ ಪ್ರಮುಖ ಕಾರಣವಾಗಿದೆ ಎಂದು ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿಯೊಬ್ಬ ತನ್ನ ಅಳಲನ್ನು ಮಾಧ್ಯಮದ ಎದುರು ತೋಡಿಕೊಂಡಿದ್ದಾನೆ.

ಇನ್ನಾದರೂ ಕಾಲೇಜು ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಜೇನುನೊಣಗಳನ್ನು ತೆರವುಗೊಳಿಸಲಿ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸಿದ್ದಾರೆ.

Leave A Reply

Your email address will not be published.

error: Content is protected !!