ರಿಪ್ಪನ್‌ಪೇಟೆ ಬಸ್‌ಸ್ಟ್ಯಾಂಡ್‌ಗೆ ಮುಕ್ತಿಯೆಂದು ? ಕುಡುಕರ ಆಶ್ರಯ ತಾಣವಾದ ಬಸ್ ನಿಲ್ದಾಣ ! ಬಿಸಿಲಿನಲ್ಲಿ ಮಹಿಳಾ ಪ್ರಯಾಣಿಕರ ಗೋಳು ಕೇಳೋರ‍್ಯಾರು ಸ್ವಾಮಿ ?
ರಿಪ್ಪನ್‌ಪೇಟೆ: ಬೇಸಿಗೆ ಬಿಸಿಲಿನಲ್ಲಿ ಮಹಿಳೆಯರು, ವೃದ್ದರು, ಅನಾರೋಗ್ಯ ಪೀಡಿತರು, ಗರ್ಭಿಣಿಯರು ಹಾಗೂ ಮಕ್ಕಳು ಸೇರಿದಂತೆ ತಮ್ಮ ಲಗೇಜ್ ಹೊತ್ತು ಪ್ರಯಾಣಿಸುವ ಪ್ರಯಾಣಿಕರು ಇಲ್ಲಿನ ಹೃದಯ ಭಾಗದಂತಿರುವ ರಿಪ್ಪನ್‌ಪೇಟೆಯ ಪ್ರಯಾಣಿಕರ ತಂಗುದಾಣದಲ್ಲಿ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದ್ದರೂ ಕೂಡಾ ಸ್ಥಳೀಯ ಗ್ರಾಮಾಡಳಿತವಾಗಲಿ ಪೊಲೀಸ್ ಇಲಾಖೆಯವರಾಗಲಿ ತಾಲ್ಲೂಕು, ಜಿಲ್ಲಾಡಳಿತವಾಗಲಿ ಕ್ರಮಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಕುಡುಕರ ಆಶ್ರಯ ತಾಣವಾಗಿ ರಿಪ್ಪನ್‌ಪೇಟೆ ಬಸ್ ನಿಲ್ದಾಣದಲ್ಲಿ ಮಹಿಳೆಯರು ಕುಡುಕರ ಮಧ್ಯೆ ಹೋಗಿ ಕುಳಿತುಕೊಳ್ಳಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಚಿಕ್ಕಜೇನಿ ಗ್ರಾಮದ ಸುಂದರಮ್ಮ, ಸಾಕಮ್ಮ, ವನಜಾಕ್ಷಿ, ಕವಿತಾ, ಶೈಲಜಾ, ಕೋಡೂರಿನ ಗೀತಾ, ಶ್ವೇತಾ, ಸುಮಂಗಳ ಹೀಗೆ ಹಲವರು ತಮ್ಮ ಆಕ್ರೋಶವನ್ನು ಮಾಧ್ಯಮದವರ ಬಳಿ ತೋಡಿಕೊಂಡರು.

ನಿತ್ಯ ಒಂದಲ್ಲ ಒಂದು ಸುದ್ದಿಯಲ್ಲಿ ಪ್ರಖ್ಯಾತಿ ಪಡೆದಿರುವ ರಿಪ್ಪನ್‌ಪೇಟೆ ಶಿವಮೊಗ್ಗ ಜಿಲ್ಲೆಯಲ್ಲಿ ಹೃದಯ ಭಾಗದಂತಿದ್ದು ಇಲ್ಲಿನ ವಿನಾಯಕ ವೃತ್ತದಲ್ಲಿ ನಾಲ್ಕು ಜಿಲ್ಲಾ ಕೇಂದ್ರವನ್ನು ಹಾಗೂ ನಾಲ್ಕು ತಾಲ್ಲೂಕು ಕೇಂದ್ರವನ್ನು ಸಂಪರ್ಕಿಸುವ ಕೇಂದ್ರವಾಗಿರುವ ಇಲ್ಲಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಸಾಗರ – ತೀರ್ಥಹಳ್ಳಿ – ಶಿವಮೊಗ್ಗ – ಹೊಸನಗರ ತಾಲ್ಲೂಕು ಹಾಗೂ ಶಿವಮೊಗ್ಗ – ಉಡುಪಿ – ದಕ್ಷಿಣ ಕನ್ನಡ – ಉತ್ತರ ಕನ್ನಡ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಳದಲ್ಲಿನ ಪ್ರಯಾಣಿಕರು ಬಸ್ ನಿಲ್ದಾಣವಿಲ್ಲದೆ ಬೇಸಿಗೆಯ ಬಿಸಿಲ ಝಳಕ್ಕೆ ತತ್ತರಿಸಿ ಹೋಗುವಂತಾಗಿದ್ದು ನೆರಳಿನ ಆಶ್ರಯ ಪಡೆಯಲು ಸುಸಜ್ಜಿತ ಬಸ್ ನಿಲ್ದಾಣವಿಲ್ಲದಂತಾಗಿ. ಕೆಲವರು ಅಲ್ಲಿ ಇಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ಓಡಾಡುವಂತಾಗಿದೆ ಎಂದು ಆರೋಪಿಸಿದರು.
ಇರುವ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ತೀರ್ಥಹಳ್ಳಿ ರಸ್ತೆಯಲ್ಲಿ ಮತ್ತು ಹೊಸನಗರ ರಸ್ತೆಯಲ್ಲಿನ ಎರಡು ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವಿಸಿದರು ಕುಡಿದು ಹೆಚ್ಚಾಗಿ ಅಲ್ಲಿ ಇಲ್ಲಿ ಬಿದ್ದು ನಂತರ ಇಲ್ಲಿನ ತಂಗುದಾಣದಲ್ಲಿನ ಕಲ್ಲಿನ ಆಸನದಲ್ಲಿ ಮತ್ತು ನೆಲದ ಮೇಲೆ ಕಂಡಕಂಡಲ್ಲಿ ಮೂತ್ರ ವಿಸರ್ಜನೆಯೊಂದಿಗೆ ವಾಂತಿ ಮಾಡಿ ಮಲಗಿಕೊಳ್ಳುವುದು ಇದರಿಂದ ಇರುವ ಬಸ್ ನಿಲ್ದಾಣವೂ ಕುಡುಕರ ಆಶ್ರಯ ತಾಣವಾಗಿದ್ದು ಪ್ರಯಾಣಿಕರ ಪರಿಸ್ಥಿತಿ ಹೇಳತೀರದಾಗಿದೆ.
ಇನ್ನಾದರೂ ಇಲ್ಲಿನ ಗ್ರಾಮಾಡಳಿತವಾಗಲಿ ಪೊಲೀಸ್ ಇಲಾಖೆಯವರಾಗಲಿ ಕಂದಾಯ ಇಲಾಖೆಯವರಾಗಲಿ ಗಮನಹರಿಸಿ ಪ್ರಯಾಣಿಕರಿಗಾಗುತ್ತಿರುವ ಅವ್ಯವಸ್ಥೆಯನ್ನು ಸರಿಪಡಿಸುವತ್ತಾ ಮುಂದಾಗುವರೇ ಕಾದು ನೋಡಬೇಕಾಗಿದೆ.