ರಿಪ್ಪನ್‌ಪೇಟೆ: ಗುರುವಾರ ಸಂಜೆ ರಿಪ್ಪನ್‌ಪೇಟೆ ಸುತ್ತಮುತ್ತ ಗುಡುಗು ಸಿಡಿಲಾರ್ಭಟದೊಂದಿಗೆ ಸುರಿದ ಭಾರಿ ಗಾಳಿ ಮಳೆಯಿಂದಾಗಿ ರಸ್ತೆಯ ಬದಿಯಲ್ಲಿನ ಮರಗಳು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಗವಟೂರು ಗ್ರಾಮದ ಮಲ್ಲಾಪುರ ಪಂಚಾಕ್ಷರಯ್ಯ ಮತ್ತು ಜಂಬಳ್ಳಿ ಶಾಂತಕುಮಾರ ಎಂಬುವರ ಮನೆಯ ಮೇಲೆ ತೆಂಗಿನಮರ ಉರುಳಿ ಬಿದ್ದು ಸಾಕಷ್ಟು ಹಾನಿ ಸಂಭವಿಸಿದ್ದು ಯಾವುದೇ ಜೀವ ಹಾನಿಯಾಗಿಲ್ಲ.
ತೀರ್ಥಹಳ್ಳಿ ರಸ್ತೆಯ ಎಂ.ಬಿ.ಲಕ್ಷ್ಮಣ ಗೌಡ ಮನೆಯ ಮುಂಭಾಗದಲ್ಲಿ ಮರವೊಂದು ಮುರಿದು ಬೀಳುವ ಶಬ್ದ ಕೇಳಿ ಉಡುಪಿ – ಸಾಗರ ಸಂಚಾರಿ ಬಸ್ ಚಾಲಕನ ಮುಂಜಾಗ್ರತೆಯಿಂದಾಗಿ ತಕ್ಷಣ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದ್ದು ಚಾಲಕನ ಸಮಯ ಪ್ರಜ್ಞೆಗೆ ಸಾರ್ವಜನಿಕರ ಮತ್ತು ಪ್ರಯಾಣಿಕರ ಪ್ರಶಂಸೆ ಕಾರಣವಾದರೆ ಮಲ್ಲಾಪುರ ಪಂಚಾಕ್ಷಯ್ಯ ಎಂಬುವರ ಮನೆ ಹಿಂಭಾಗದಲ್ಲಿನ ತೆಂಗಿನ ಮರ ಮನೆಯ ಮೇಲೆ ಬಿದ್ದರೂ ಯಾವುದೇ ಪ್ರಾಣಾಪಾಯ ಸಂಭವಿಸದೆ ದೇವರೇ ಕಾಪಾಡಿದ್ದಾನೆಂದು ನೆರೆದ ಜನರು ತಮ್ಮ ಅನಿಸಿಕೆಯನ್ನು ಮಾಧ್ಯಮದವರಲ್ಲಿ ವ್ಯಕ್ತಪಡಿಸಿದರು.
ಜಂಬಳ್ಳಿ ಶಾಂತಕುಮಾರ ಎಂಬುವರ ಮನೆಯ ಪಕ್ಕದಲ್ಲಿದ್ದ ಹಲವಾರು ವರ್ಷದ ಹಳೆಯ ತೆಂಗಿನ ಮರ ಸಹ ಮನೆಯ ಮೇಲೆ ಬಿದ್ದು ಮೇಲ್ಛಾವಣಿ ಜಖಂಗೊಂಡಿದ್ದು ಯಾವುದೇ ರೀತಿಯ ಪ್ರಾಣಾಪಾಯವಾಗದೇ ಇರುವುದು ಆಶ್ಚರ್ಯವಾಗಿದೆ ಭಗವಂತ ರಕ್ಷಿಸಿದ್ದಾನೆ ಎನ್ನಲಾಗಿದೆ.
ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು, ಹಿಂಡ್ಲೆಮನೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಮರಗಳು ಮುರಿದು ಬಿದ್ದ ಪರಿಣಾಮ 47 ವಿದ್ಯುತ್ ಕಂಬಗಳು ಧರಶಾಹಿಯಾಗಿವೆ. ವಿದ್ಯುತ್ ಸಂಪೂರ್ಣ ಸಂಪೂರ್ಣ ಕಡಿತಗೊಂಡಿದೆ. ಅಡಿಕೆ, ಬಾಳೆ ಗಿಡಗಳು ನೆಲಕ್ಕುರುಳಿವೆ. ಅನೇಕ ಮನೆಯ ಮೇಲ್ಚಾವಣಿಯ ಹೆಂಚುಗಳು ಹಾರಿಹೋಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ನಿನ್ನೆ ಸಹ ಈ ಭಾಗದಲ್ಲಿ ಭಾರಿ ಮಳೆಯಾಗಿದ್ದು ವಿದ್ಯುತ್ ಲೈನ್ ದುರಸ್ತಿ ಕಾರ್ಯಕ್ಕೆ ಮತ್ತಷ್ಟು ಅಡಚಣೆ ಉಂಟಾಗಿದೆ.