ಸಹಾಯಕ ನಿರ್ದೇಶಕರೂ ಇಲ್ಲ 22 ಪಶು ಆಸ್ಪತ್ರೆಗೆ ಇಬ್ಬರೇ ವೈದ್ಯರು !

0 0

ರಿಪ್ಪನ್‌ಪೇಟೆ: ಮಲೆನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿಗಳಿಸಿರುವ ಶಿವಮೊಗ್ಗ ಜಿಲ್ಲೆಯ ಮಧ್ಯ ಮಲೆನಾಡಿನ ಹೊಸನಗರ ತಾಲ್ಲೂಕಿನ ವ್ಯಾಪ್ತಿಯ 22 ಪಶು ಅಸ್ಪತ್ರೆಗೆ ಇಬ್ಬರು ವೈದ್ಯಾಧಿಕಾರಿಗಳು ಬಿಟ್ಟರೆ ಇನ್ನೂ ಯಾರು ಇರುವುದಿಲ್ಲ. ರಿಪ್ಪನ್‌ಪೇಟೆಗೆ ರಾಜಕೀಯ ಮುಖಂಡರ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ಅಭಿವೃದ್ಧಿ ಮರೀಚಿಕೆಯಾದಂತಾಗಿದೆ ಎಂಬುದಕ್ಕೆ ಸಾಕ್ಷಿಯಾಗಿರುವ ಇಲ್ಲಿನ ಸರ್ಕಾರಿ ಪಶು ಆಸ್ಪತ್ರೆ.

ರಾಜ್ಯ ಸರ್ಕಾರ ಹೈನುಗಾರಿಕೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದು ಹೊಸನಗರ ತಾಲ್ಲೂಕು ಮಾತ್ರ ಹೈನು ಉದ್ಯಮ ಸೇರಿದಂತೆ ಇತರ ಎಲ್ಲ ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಮುಖಂಡರ ಇಚ್ಛಾಶಕ್ತಿಯ ಕೊರತೆಯಿಂದಾಗಿ ತಾಲ್ಲೂಕು ಹಿಂದುಳಿಯುವಂತಾಗಿದೆ.

ರಿಪ್ಪನ್‌ಪೇಟೆಯ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ನಿತ್ಯ ಬಾಗಿಲು ತೆಗೆಯಲು ಕಸ ಗುಡಿಸಲು ಸಹ ಡಿ.ಗ್ರೂಪ್ ನಿಂದ ಹಿಡಿದು ಎ ಗ್ರೂಪ್ ವರೆಗೂ ಯಾರು ಇಲ್ಲ. ತಾಲ್ಲೂಕಿನ ಪಶು ಇಲಾಖೆಯ ಸಹಾಯಕ ನಿರ್ದೇಶಕರು ಇಲ್ಲ ಇನ್ನೂ 22 ಪಶು ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮತ್ತು 10 ಜನ ಇನ್ಸ್‌ಪೆಕ್ಟರ್ ಹಾಗೂ ಡಿ.ಗ್ರೂಪ್ ಸಿಬ್ಬಂದಿ ಬಿಟ್ಟರೆ ಉಳಿದಂತೆ ತಾಲ್ಲೂಕಿನ ವ್ಯಾಪ್ತಿಯಲ್ಲಿನ ಆಸ್ಪತ್ರೆಗೆ 80 ಜನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಇರಬೇಕು ಆದರೆ ಇಲ್ಲಿನ ಈ ರೀತಿಯ ಅವ್ಯವಸ್ಥೆ ರಾಜಕೀಯ ಮುಖಂಡರಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಬರಲ್ಲಿಲ್ಲವೇ ಎಂಬ ಸಂಶಯ ಸಾರ್ವಜನಿಕರನ್ನು ಕಾಡುವಂತಾಗಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಲು ಬಾಯಿ ರೋಗದಂತಹ ಮಾರಕ ರೋಗಗಳು ಕಾಣಿಸಿಕೊಂಡು ಸಾಕಷ್ಟು ಜಾನುವಾರುಗಳು ಸಾವನ್ನಪ್ಪಿರುವ ಘಟನೆಗಳು ನಡೆದಿದ್ದರೂ ಕೂಡಾ ಸರ್ಕಾರ ತಾಲ್ಲೂಕು ಪಶು ಅಸ್ಪತ್ರೆಗೆ ತಜ್ಞ ವೈದ್ಯಾಧಿಕಾರಿಗಳನ್ನು ನೇಮಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ರಿಪ್ಪನ್‌ಪೇಟೆ ಪಶು ಅಸ್ಪತ್ರೆಯ ವ್ಯಾಪ್ತಿಯಲ್ಲಿ ಮಲೆನಾಡ ಗಿಡ್ಡ ತಳಿ, ಜಸ್ಸಿ, ಗಿರ್ ಇನ್ನಿತರ ತಳಿಗಳು ಸೇರಿದಂತೆ ಸುಮಾರು 12 ಸಾವಿರ ಜಾನುವಾರುಗಳು ಇದ್ದು ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ರಿಪ್ಪನ್‌ಪೇಟೆ, ಕೆರೆಹಳ್ಳಿ, ಮುಗುಟಿಕೊಪ್ಪ, ಕುಕ್ಕಳಲೆ, ಬರುವೆ, ಕಾರಗೋಡು, ಮಳವಳ್ಳಿ, ಕಣಬಂದೂರು, ಕೊಳವಳ್ಳಿ, ಕಲ್ಲುಕೊಪ್ಪ, ಕೋಡೂರು, ಜಂಬಳ್ಳಿ, ಮೂಗುಡ್ತಿ, ಹೆದ್ದಾರಿಪುರ, ಕಲ್ಲೂರು, ಕರಿಗೆರಸು, ಹಿಂಡ್ಲೆಮನೆ, ವಡಾಹೊಸಳ್ಳಿ, ಕಗ್ಗಚಿ, ತಳಲೆ, ಹಾರಂಬಳ್ಳಿ ಹೀಗೆ ಸಾಕಷ್ಟು ಗ್ರಾಮಗಳಲ್ಲಿ ರೈತರು ಜಾನುವಾರುಗಳನ್ನು ಸಾಕಲಾಗಿದ್ದು ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗದ ಚಿಕಿತ್ಸೆಗೆ ಇಲ್ಲಿನ ಪಶು ಆಸ್ಪತ್ರೆಯಲ್ಲಿ ಸಮರ್ಪಕವಾದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಇಲ್ಲದೆ ಲಕ್ಷಾಂತರ ಮೌಲ್ಯದ ಜಾನುವಾರುಗಳಲ್ಲಿ ದಿಢೀರ್ ಕಾಣಿಸಿಕೊಳ್ಳುವ ರೋಗಕ್ಕೆ ಚಿಕಿತ್ಸೆ ಲಭಿಸದೇ ಹಲವು ಜಾನುವಾರುಗಳು ಸಾವನ್ನಪ್ಪಿರುವುದರಿಂದಾಗಿ ರೈತರು ದಿಕ್ಕು ತೋಚದವರಂತಾಗಿ ಹೈನುಗಾರಿಕೆಯಿಂದ ದೂರ ಉಳಿಯುವಂತಾಗಿದೆ ಎಂದು ರೈತರು ತಮ್ಮ ಅಸಹಾಯಕತೆಯನ್ನು ಮಾಧ್ಯಮದವರ ಬಿಳಿ ವ್ಯಕ್ತಪಡಿಸಿದ್ದು ಹೀಗೆ.


ಇನ್ನಾದರೂ ಸರ್ಕಾರ ಮತ್ತು ಜಿಲ್ಲಾಡಳಿತ ಇತ್ತ ಗಮನಹರಿಸಿ ಮಲೆನಾಡಿನ ವ್ಯಾಪ್ತಿಯಲ್ಲಿ ಹೈನುಗಾರಿಕೆಗೆ ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವರೇ ಕಾದು ನೋಡಬೇಕಾಗಿದೆ.

Leave A Reply

Your email address will not be published.

error: Content is protected !!