ಸುದೀರ್ಘ 33 ವರ್ಷ ಗ್ರಾ.ಪಂ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸಿದ ಅಣ್ಣಪ್ಪನವರಿಗೆ ಭಾವನಾತ್ಮಕ ಬೀಳ್ಕೊಡುಗೆ
ರಿಪ್ಪನ್‌ಪೇಟೆ : ಕೋಡೂರು ಗ್ರಾ.ಪಂ ಅಟೆಂಡರ್ ಆಗಿ ಸುದೀರ್ಘ 33 ವರ್ಷ ಕಾರ್ಯನಿರ್ವಹಿಸಿ ವಯೋನಿವೃತ್ತರಾದ ಅಣ್ಣಪ್ಪ ಅವರನ್ನು ಗ್ರಾಮ ಪಂಚಾಯತ್ ವತಿಯಿಂದ ಶುಕ್ರವಾರ ಸನ್ಮಾನಿಸಿ ಭಾವನಾತ್ಮಕವಾಗಿ ಬೀಳ್ಕೊಡಲಾಯಿತು.

ಈ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಅಣ್ಣಪ್ಪ ಸರ್ಕಾರಿ ಸೇವೆಯನ್ನು ಸಮಾಜ ಸೇವೆ ಎನ್ನುವ ನಿಟ್ಟಿನಲ್ಲಿ, ತಮ್ಮ ಸೇವೆಯನ್ನು ಸಾರ್ಥಕತೆಯಿಂದ ಪೂರೈಸಿದ್ದಾರೆ. ಅವರು ಅತ್ಯಂತ ಸರಳವಾಗಿ, ಎಲ್ಲರೊಂದಿಗೂ ಆತ್ಮೀಯತೆಯಿಂದ ಇದ್ದು ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಕರ್ತವ್ಯದ ಶೈಲಿ ಇತರೆ ಸಿಬ್ಬಂದಿಗಳಿಗೆ ಮಾದರಿಯಾಗುವಂತಾಗಿದೆ ಎಂದರು.
ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಮಾತನಾಡಿ, ಅಣ್ಣಪ್ಪ ಅವರು ಸೇವಾ ಕಾರ್ಯದ ತಾತ್ಪರತೆ ಅನುಕರಣೀಯವಾದದ್ದು. ಇಂತವರು ಸೇವೆಯಲ್ಲಿದ್ದರೇ ನಿಜವಾದ ಸೇವೆಯು ಸಾರ್ವಜನಿಕರಿಗೆ ದೊರೆಯುತ್ತದೆ ಎನ್ನುವುದನ್ನು ಅವರು ತೋರಿಸಿ ಕೊಟ್ಟಿದ್ದಾರೆ ಎಂದು ಅವರ ಸೇವೆಯನ್ನು ನೆನೆದು ಭಾವುಕರಾದರು.

ಪಿಡಿಒ ನಾಗರಾಜ್ ಮಾತನಾಡಿ, ಅಣ್ಣಪ್ಪ ಅವರು ತಮ್ಮ ವೃತ್ತಿ ಜೀವನದೂದ್ದಕ್ಕೂ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಎಲ್ಲರ ಹೆಮ್ಮೆಗೆ ಪಾತ್ರರಾದವರಾಗಿದ್ದಾರೆ. ಇಂತಹ ಸಿಬ್ಬಂದಿಯನ್ನು ನಾವು ಸೇವೆಯಿಂದ ದೂರ ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.
ತಾ.ಪಂ ಮಾಜಿ ಸದಸ್ಯ ಚಂದ್ರಮೌಳಿ ಹಾಗೂ ಗ್ರಾ.ಪಂ.ನ ಹಾಲಿ, ಮಾಜಿ ಅಧ್ಯಕ್ಷರು ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತು ನಾಗರೀಕರು ಮಾತನಾಡಿ, ಅಣ್ಣಪ್ಪ ಅವರ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಿದರು.

ಅಣ್ಣಪ್ಪ ಅವರಿಗೆ ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು ಶಾಲು ಹೊದಿಸಿ, ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಲಾಯಿತು. ಇನ್ನೂ ಗ್ರಾ.ಪಂ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸದಸ್ಯರುಗಳು ಅಣ್ಣಪ್ಪ ಅವರಿಗೆ ಸನ್ಮಾನಿಸಿ, ಹಣ ಸಂಗ್ರಹಿಸಿ ಅವರ ಹೆಸರಿನಲ್ಲಿ ಡಿಪಾಸಿಟ್ ಇಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಣ್ಣಪ್ಪ, ಸರ್ಕಾರಿ ಕೆಲಸ ದೇವರ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಭಕ್ತಿ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ನಿರ್ವಹಿಸಿರುವ ತೃಪ್ತಿ ನನಗಿದೆ. ತಾವು ಕೊಟ್ಟ ಸನ್ಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದರು.

ನಂದಶ್ರೀ ಪ್ರಾರ್ಥಿಸಿದರು. ಕಾವೇರಿ ವ್ಯಕ್ತಿ ಪರಿಚಯ ಮಾಡಿದರು. ಕೃಷ್ಣಮೂರ್ತಿ ನಿರೂಪಿಸಿದರು. ಪಿಡಿಒ ನಾಗರಾಜ್ ಸ್ವಾಗತಿಸಿ, ವಂದಿಸಿದರು.