ಹೊಂಬುಜದಲ್ಲಿ ಶ್ರುತಪಂಚಮಿ ಸಂಭ್ರಮ

0 50

ರಿಪ್ಪನ್‌ಪೇಟೆ : ಪ್ರಾಚೀನ ಕಾಲದಲ್ಲಿ ಜ್ಞಾನವನ್ನು ಶ್ರುತ ರೂಪದಲ್ಲಿ ಗುರುವಿನಿಂದ ಶಿಷ್ಯನಿಗೆ ಕಲಿಸುತ್ತಿದ್ದರು. ಇವನ್ನು ಬರೆದಿಡುವ ಪದ್ಧತಿ ಇರಲಿಲ್ಲ. ಕ್ರಮೇಣ ಮರೆವಿನಿಂದ ಜ್ಞಾನವನ್ನು ಕಳೆದುಕೊಳ್ಳ ತೊಡಗಿದರು. ಆಗ ಜೈನಾಗಮಗಳನ್ನು ಲಿಪಿಕರಿಸುವ ಮಹತ್ಕಾರ್ಯ ನಡೆಯಿತು. ಅದರ ಹಿನ್ನೆಲೆಯಲ್ಲಿ ಈ ಶ್ರುತಪಂಚಮಿ ಹಬ್ಬ ಆಚರಿಸುವ ಪದ್ಧತಿ ಬೆಳೆದು ಬಂದಿದೆ” ಎಂದು ಹೊಂಬುಜ ಜೈನ ಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಿದರು.

ಸಮೀಪದ ಶ್ರೀಕ್ಷೇತ್ರ ಹೊಂಬುಜದಲ್ಲಿ ಮೇ. 24ರ ಬುಧವಾರ ಶ್ರುತಪಂಚಮಿ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಜೈನ ಧರ್ಮದಲ್ಲಿ ಆತ್ಮಕಲ್ಯಾಣಕ್ಕಾಗಿ ವಿಶೇಷ ಸಂದರ್ಭಗಳಲ್ಲಿ ಶುಭ ಮುಹೂರ್ತದಲ್ಲಿ ಧರ್ಮಾಚರಣೆ ಆಚರಿಸುತ್ತಾರೆ. ಅದನ್ನು ಪರ್ವ ಅಥವಾ ಹಬ್ಬ ಎಂದು ಕರೆಯುತ್ತಾರೆ. ಸಾಧಾರಣ ಪರ್ವ, ಶಾಶ್ವತ ಪರ್ವ ಮತ್ತು ನೈಮಿತ್ತಿಕ ಪರ್ವ ಎಂಬ ಮೂರು ಬಗೆಯ ಹಬ್ಬಗಳಿವೆ. ಅವುಗಳಲ್ಲಿ ನೈಮಿತ್ತಿಕ ಪರ್ವದಲ್ಲಿ ಶ್ರುತ ಪಂಚಮಿ ಪರ್ವ ಬರುತ್ತದೆ. ಜೈನ ಆಗಮಗಳಿಗೆ ಶ್ರುತ ಎಂದು ಹಾಗೂ ಜೈನವೇದಗಳೆಂದು ಕರೆಯುತ್ತಾರೆ. ಶ್ರುತ ಎಂದರೆ ಜೈನ ಧರ್ಮದ ತತ್ವ ಸಿದ್ದಾಂತವಾಗಿದೆ.

ನಮ್ಮ ಅಜ್ಞಾನವನ್ನು ತೊರೆಯಲು ಆಗಮ ಜ್ಞಾನದಿಂದ ಸಾಧ್ಯವಿದೆ. ಒಳ್ಳೆಯ ಸಂಸ್ಕಾರವಂತರಾಗಿ ಜೀವನವನ್ನು ಸದಾಚಾರ, ಸದ್ವಿಚಾರಗಳೊಂದಿಗೆ ಬದುಕುವ ಅಭ್ಯಾಸ ನಮ್ಮದಾಗಲಿ. ಬಸದಿಯಲ್ಲಿ ಮನೆಯಲ್ಲಿ ಸ್ವಾಧ್ಯಾಯ ಆರಂಭವಾಗಲಿ. ಶಾಸ್ತ್ರ ಸ್ವಾಧ್ಯಾಯವೇ ಸ್ವಆತ್ಮ. ಸಾಕ್ಷಾತ್ಕಾರಕ್ಕೆ ಕಾರಣವಾಗಬಲ್ಲದು. ತತ್ವಗ್ರಂಥಗಳ, ಪುರಾಣಗಳನ್ನು ಕನಿಷ್ಠ 20 ನಿಮಿಷವಾದರೂ ಓದುವ ಪರಿಪಾಠ ಬೆಳೆಯಲಿ. ಇದರಿಂದ ನಮ್ಮ ಅಜ್ಞಾನ ನಿವೃತ್ತಿಯ ಜೊತೆಗೆ, ಒಳ್ಳೆಯ ವಾತಾವರಣ ನಿರ್ಮಾಣಕ್ಕೂ ಕಾರಣವಾಗುತ್ತದೆ ಎಂದು ಆಶೀರ್ವಚನ ನೀಡಿದರು.


ಹಾಗೆಯೇ ವ್ರತೋಪದೇಶ ಪಡೆದ ಮಕ್ಕಳಿಗೆ ಶ್ರಾವಕರ ಎಂಟು ಮೂಲಗುಣಗಳ ಬಗ್ಗೆ ಸವಿಸ್ತಾರವಾಗಿ ಬೋಧನೆ ಮಾಡಿ, ಅವುಗಳ ಪಾಲನೆಯ ಮಹತ್ವ ಹಾಗೂ ಲಾಭವನ್ನು ದೃಷ್ಟಾಂತಗಳ ಜೊತೆಗೆ ಸವಿವರವಾಗಿ ತಿಳಿಸಿದರು.

‘ವ್ರತೋಪದೇಶ-ಅಕ್ಷರಾಭ್ಯಾಸ’
ಅಂದು ಬೆಳ್ಳಿಗ್ಗೆ 8 ಗಂಟೆಗೆ 42 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವ್ರತೋಪದೇಶ ಹಾಗೂ ಮಧ್ಯಾಹ್ನ 01 ಗಂಟೆಗೆ 15 ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲಾಯಿತು. ನಂತರ ಬಸದಿಯಲ್ಲಿ ಶ್ರುತಸ್ಕಂಧ ಆರಾಧನೆ, ಜಿನವಾಣಿಯ ಅಷ್ಟಾವಧಾನ ಸೇವೆ ನಡೆಯಿತು. ಶ್ರುತಪಂಚಮಿ ನಿಮಿತ್ತ ನಡೆದ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಊರಿನ ಹಾಗೂ ಹೊರ ಊರುಗಳಿಂದ ಧರ್ಮಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

Leave A Reply

Your email address will not be published.

error: Content is protected !!