ದಿ ತೋಟಗರ‍್ಸ್ ಸೊಸೈಟಿ ವಾರ್ಷಿಕ ಮಹಾಸಭೆ | 20 ಲಕ್ಷ ರೂ. ನಿವ್ವಳ ಲಾಭ, ಶೇ. 5 ಡಿವಿಡೆಂಡ್ ; ಮ್ಯಾನೇಜರ್‌ಗೆ ಅಭಿನಂದನೆ

0 0

ಸಾಗರ‌: ಇಲ್ಲಿನ ದಿ ತೋಟಗರ‍್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಗುರುವಾರ ನಡೆದಿದ್ದು, ಸಂಸ್ಥೆಯು ಈ ಸಾಲಿನಲ್ಲಿ 65,55,660/-ಲಕ್ಷ ರೂ.ಗಳ ಲಾಭ ಗಳಿಸಿದ್ದು, 20,58,535 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ. 5 ರಷ್ಟು ಲಾಭಾಂಶ ವಿತರಿಸಲಾಗುತ್ತದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಕೆ.ಸಿ.ದೇವಪ್ಪ ತಿಳಿಸಿದರು.


2009 ರಲ್ಲಿ ಸಂಸ್ಥೆಯಲ್ಲಿ 2743 ಸದಸ್ಯರಿದ್ದು, ಇಂದು 3542 ಸದಸ್ಯರಿದ್ದಾರೆ. ಷೇರು ಬಂಡವಾಳ 69 ಲಕ್ಷದ 98 ಸಾವಿರ ಇದೆ. ಕೂಡಿಟ್ಟಿರುವ ನಿಧಿಗಳು 80 ಕೋಟಿ 63 ಲಕ್ಷ ಇದೆ. ಠೇವಣಿಗಳು 13 ಕೋಟಿ 85 ಲಕ್ಷ ರೂ.ಗಳಿವೆ.
ಸಂಘದಲ್ಲಿ ಕೊಂಡೋಡಿಸ್ ತುತ್ತಾ, ಸುಣ್ಣಾ, ರೈನ್ಬೋ ರಾಳ, ರೊಲೆಕ್ಸ್ ರಾಳ, ಬೇವಿನ ಕ಼ಷಾಯ, ತೋಟಕ್ಕೆ ಹಾಕುವ ಡೋಲೋಮೈಟ್ ಸುಣ್ಣ ಮಾರಾಟ ಮಾಡಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ನಿಟ್ಟೂರು ಮತ್ತು ತುಮರಿ ಭಾಗದ ಸದಸ್ಯರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಅಲ್ಲಿನ ಅಡಿಕೆ ಸಂಗ್ರಹಣಾ ಕೇಂದ್ರದಿಂದ ಬಂದ ಅಡಿಕೆಗೆ ವಾಹನ ವೆಚ್ಚದ ಅರ್ಧ ಭಾಗವನ್ನು ಸಂಘವೇ ಭರಿಸುತ್ತಿದೆ ಎಂದರು.


ವಿಶೇಷವಾಗಿ ಸಂಸ್ಥೆಯು ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭಕ್ಕೆ ತಲುಪುತ್ತಿದ್ದು, ರೂ. 5 ಲಕ್ಷ ನಿಧಿಯನ್ನು ಅದಕ್ಕೆ ಮೀಸಲಿಡಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಬ್ಯಾಂಕಿನಿAದ 1 ಕೋಟಿ ರೂ. ಸಾಲ ಪಡೆಯಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.


ಸದಸ್ಯರಾದ ಜಯಪ್ರಕಾಶ್ ಮಾವಿನಕುಳಿಯವರು ಮಾತನಾಡಿ, ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರು ತಮ್ಮ ವೇತನ ಹೆಚ್ಚಿಸಿಕೊಳ್ಳುವುದಕ್ಕಾಗಿ ಚರ್ಚಿಸುತ್ತಾರೆ. ಆದರೆ ಈ ಸಂಸ್ಥೆಯ ದೇವಪ್ಪನವರು ತಮ್ಮ ವೇತನವನ್ನು ಕಟ್ಟಡ ನಿಧಿಗೆ ನೀಡುತ್ತಿದ್ದಾರೆ. ಸಂಸ್ಥೆ ಕೆಲಸಕ್ಕೆ ಬೆಂಗಳೂರಿಗೆ ಹೋಗುವಾಗಲೂ ಯಾವುದೇ ಭತ್ಯೆ ತೆಗೆದುಕೊಳ್ಳುವುದಿಲ್ಲ. ಮನೆ ಕೆಲಸ ಬಿಟ್ಟು ಸಂಸ್ಥೆ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಇದು ಶ್ಲಾಘನೀಯ ವಿಷಯ ಎಂದು ಅವರನ್ನು ಅಭಿನಂದಿಸಿದರು.


ಸಂಸ್ಥೆಗೆ ಬೆಳೆಗಾರರು ವಿಶ್ವಾಸವಿರಿಸಿ ಉತ್ತಮ ಠೇವಣಿ ಇಟ್ಟಿದ್ದಾರೆ. ಹೆಚ್ಚು ಅಡಿಕೆ ಆವಕವಾಗುತ್ತಿರುವುದು ಅಭಿನಂದನೀಯ ಎಂದು ಸೀತಾರಾಮಯ್ಯ ಕಟ್ಟಿನಕೆರೆ ಹೇಳಿದರೆ, ಸಿಬ್ಬಂದಿಗಳ ಭದ್ರತಾ ಠೇವಣಿ ಮತ್ತು ನಿವೃತ್ತ ನಿಧಿಯನ್ನು ಹೆಚ್ಚಿಸಬೇಕು ಎಂದು ಸದಸ್ಯ ದಿನೇಶ್ ಬರದವಳ್ಳಿ ಹೇಳಿದರು.
ಸದಸ್ಯರಾದ ಆರ್.ಎಸ್.ಗಿರಿ ಬೇದೂರು, ವ.ಶಂ.ರಾಮಚಂದ್ರ ಭಟ್, ವಿ.ಜಿ.ಶ್ರೀಧರ, ಯು.ಎಚ್.ರಾಮಪ್ಪ, ಬಿ.ಎಚ್.ರಾಘವೇಂದ್ರ, ಚೇತನರಾಜ್ ಕಣ್ಣೂರು ಮುಂತಾದವರು ಸಂಸ್ಥೆಯ ಕುರಿತು ಮಾತನಾಡಿದರು.


ಮ್ಯಾನೇಜರ್ ಪ್ರಕಾಶ್ ನಿವೃತ್ತಿ-ಬೀಳ್ಕೊಡುಗೆ- ಅಭಿನಂದನೆ :
ಇದೇ ಸಂದರ್ಭದಲ್ಲಿ ದೀರ್ಘ ಕಾಲದಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿರುವ ಪ್ರಕಾಶ್ ವಿ.ಸಿ.ವರದಾಮೂಲ ಮತ್ತು ರೇಖಾ ದಂಪತಿಯನ್ನು ಅಭಿನಂದಿಸಿ ಗೌರವಿಸಲಾಯಿತು.
ಸಂಸ್ಥೆ ಅಧ್ಯಕ್ಷರಾದ ಕೆ.ಸಿ.ದೇವಪ್ಪ ಮಾತನಾಡಿ, ಸಂಸ್ಥೆ ಬೆಳವಣಿಗೆಯಲ್ಲಿ ಪ್ರಕಾಶ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಲೆಕ್ಕಪತ್ರಗಳಿಗೆ ಅಗತ್ಯ ಕಾನೂನು ಮಾಹಿತಿ ನೀಡಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಬೆಳೆಸಿದ್ದಾರೆ. ನಿವೃತ್ತಿ ನಂತರವೂ ಅವರ ಮಾರ್ಗದರ್ಶನ ಸಂಸ್ಥೆಗೆ ಬೇಕು ಎಂದರು.


ಉಪಾಧ್ಯಕ್ಷ ಹು.ಬಾ.ಅಶೋಕ್ ಮಾತನಾಡಿ, 17-01-85 ರಲ್ಲಿ ಪ್ರಕಾಶ್ ಅವರು ಈ ಸಂಸ್ಥೆಯಲ್ಲಿ ಹಂಗಾಮಿ ನೌಕರರಾಗಿ ಸೇರಿದ್ದಾರೆ. 1996 ರಿಂದ 2006 ರವರೆಗೆ ಪ್ರಬಾರ ಮ್ಯಾನೇಜರ್, ನಂತರ 30 ಸೆಪ್ಟೆಂಬರ್ ವರೆಗೂ ಮ್ಯಾನೇಜರ್ ಆಗಿ ಪ್ರಾಮಾಣಿಕತೆ, ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯ ಹಿತೈಷಿಯಾಗಿ ಅವರ ಸಲಹೆ, ಸಹಕಾರ ಮುಂದೆಯೂ ಬೇಕು ಎಂದರು.
ಸದಸ್ಯ ಸೀತಾರಾಮಯ್ಯ ಕಟ್ಟಿನಕೆರೆ ಮಾತನಾಡಿ, ಪ್ರಕಾಶ್ ಅವರು ಕಚೇರಿಗೆ ಬಂದಾಗ ಪ್ರೀತಿ ಆದರದಿಂದ ನಡೆಸಿಕೊಳ್ಳುತ್ತಾರೆ. ಸಂಸ್ಥೆಗೆ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದಾರೆ ಎಂದರು. ಸದಸ್ಯರಾದ ವಿಶ್ವೇಶ್ವರ, ವಸಂತಕುಮಾರ್, ಕೆ.ಟಿ.ಗಣಪತಿ ಪ್ರಕಾಶ್ ಅವರನ್ನು ಅಭಿನಂದಿಸಿ ಮಾತನಾಡಿದರು.


ಸನ್ಮಾನಿತ ಪ್ರಕಾಶ್ ಮಾತನಾಡಿ, ಸಂಸ್ಥೆಗೆ ಯಾವುದೇ ಕಪ್ಪುಚುಕ್ಕೆ ತರುವುದಿಲ್ಲ ಎಂದು ಸೇರುವಾಗಲೇ ಭರವಸೆ ನೀಡಿದ್ದೆ. ಹಾಗೆಯೇ ನಡೆದುಕೊಂಡಿದ್ದೇನೆ. ನನ್ನನ್ನು ಇಲ್ಲಿ ಸೇರಿಸಿದವರು ಎಚ್.ಕೆ.ಮಹಾಬಲಗಿರಿ. 11 ಜನ ಅಧ್ಯಕ್ಷರ ಜತೆ ನಾನು ಕೆಲಸ ಮಾಡಿದ್ದೇನೆ. ನನಗೆ ಸಿಬ್ಬಂದಿ ವರ್ಗ ಸದಾ ಬೆಂಬಲಿಸುತ್ತ ಬಂದಿದೆ. ಆಡಳಿತ ಮಂಡಳಿಯವರು ಸದಾ ಸಹಕಾರ ನೀಡುತ್ತ ಬಂದಿದ್ದಾರೆ. ನನ್ನ ಅನಾರೋಗ್ಯದ ಸಂದರ್ಭದಲ್ಲಿ ಅಧ್ಯಕ್ಷರು ಮನೆಗೆ ಬಂದು ಸಹಾಯ ಮಾಡಿರುವುದು ಮರೆಯಲಾರದ ಕ್ಷಣ ಎಂದರು.
ಸಂಸ್ಥೆ ಉಪಾಧ್ಯಕ್ಷ ಹು.ಬಾ.ಅಶೋಕ್ ಸ್ವಾಗತಿಸಿದರು. ಪಿ.ಎಸ್.ಕೃಷ್ಣಮೂರ್ತಿ ವಂದಿಸಿದರು.

Leave A Reply

Your email address will not be published.

error: Content is protected !!