ಅಂಜನಾಪುರ ಹಾಗೂ ಅಂಬ್ಲಿಗೊಳ ಜಲಾಶಯಕ್ಕೆ ಕುಟುಂಬ ಸಮೇತರಾಗಿ ಬಾಗಿನ ಅರ್ಪಿಸಿದ ಬಿ.ವೈ. ವಿಜಯೇಂದ್ರ
ಶಿಕಾರಿಪುರ : ಕೆಲವು ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ವಿರೋಧ ಪಕ್ಷದಲ್ಲಿದ್ದಾಗ ಅಂಜನಾಪುರ ಜಲಾಶಯ ಕೋಡಿ ಒಡೆದ ವಿಷಯ ದೂರವಾಣಿ ಮೂಲಕ ವಿಷಯ ತಿಳಿದು ರಾತ್ರೋರಾತ್ರಿ ಬೆಂಗಳೂರಿಂದ ಧಾವಿಸಿ ಇಲ್ಲಿನ ಕಾರ್ಯಕರ್ತರು ಹಾಗೂ ರೈತರೊಂದಿಗೆ ಮರಳು ತುಂಬಿದ ಮೂಟೆ ಹಾಕುವುದರಿಂದ ಕರಸೇವೆ ನಡೆಸಿ ಹರಿದು ಹೋಗುತ್ತಿದ್ದ ನೀರನ್ನು ಸಂಗ್ರಹಿಸಿ ರೈತರ ಬೆಳೆಗೆ ನೀಡುವಲ್ಲಿ ಯಶಸ್ವಿಯಾದರು ಎಂದು ಶಾಸಕ ಬಿ.ವೈ ವಿಜಯೇಂದ್ರ ಹೇಳಿದರು.
ಬುಧವಾರ ತಾಲ್ಲೂಕಿನ ಅಂಜನಾಪುರ ಹಾಗೂ ಅಂಬ್ಲಿಗೊಳ ಜಲಾಶಯಕ್ಕೆ ಕುಟುಂಬ ಸಮೇತರಾಗಿ ಬಾಗಿನ ಅರ್ಪಿಸಿ ರೈತನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನ ಜನತೆಗೆ ಕುಡಿಯುವ ನೀರು ಹಾಗೂ ರೈತರ ಜೀವನಾಡಿ ಆಗಿರುವ ಅಂಜನಾಪುರ ಜಲಾಶಯವು ಕೆಲವು ವರ್ಷಗಳ ಹಿಂದೆ ಕೋಡಿ ಒಡೆದ ಸಂದರ್ಭದಲ್ಲಿ ಯಡಿಯೂರಪ್ಪನವರು ಬೆಂಗಳೂರಿನಲ್ಲಿ ಇದ್ದರು, ದೂರವಾಣಿ ಮೂಲಕ ವಿಷಯವನ್ನು ತಿಳಿದ ಅವರು ರಾತ್ರೋ ರಾತ್ರಿ ಶಿಕಾರಿಪುರಕ್ಕೆ ಧಾವಿಸಿ ಬಂದು ಹರಿದು ಹೋಗುತ್ತಿದ್ದ, ಅಪಾರವಾದ ಜಲ ಸಂಪತ್ತನ್ನು ಗಮನಿಸಿ ಗದ್ಗರಿತರಾಗಿ ಕಣ್ಣೀರು ಹಾಕಿದ ಅವರು, ತಾಲ್ಲೂಕಿನ ಕಾರ್ಯಕರ್ತರು ಹಾಗೂ ರೈತರೊಂದಿಗೆ ಸೇರಿ ಮರಳು ತುಂಬಿದ ಚೀಲಗಳನ್ನು ಅಡ್ಡಲಾಗಿ ಹಾಕುವಂತೆ ಕರಸೇವೆಗೆ ಕರೆನೀಡಿದರಲ್ಲದೇ, ಸ್ವತಃ ತಾವೇ ಇದಕ್ಕೆ ಕೈಜೋಡಿಸುವುದರ ಮೂಲಕ ತಾತ್ಕಾಲಿಕವಾದ ತಡೆಕೋಡಿಗೆ ನಿರ್ಮಿಸಿ ಹರಿದು ಹೋಗುತ್ತಿದ್ದ ನೀರನ್ನು ಸಂಗ್ರಹಿಸಿ ರೈತರಿಗೆ ಆ ವರ್ಷದ ಭತ್ತದ ಬೆಳೆಗೆ ನೀರು ಒದಗಿಸುವಲ್ಲಿ ಯಶಸ್ವಿಯಾದರು. ನಂತರ ಯಡಿಯೂರಪ್ಪರವರು ಮುಖ್ಯಮಂತ್ರಿಯಾದ ಸಮಯದಲ್ಲಿ ಶಿಕಾರಿಪುರದ ಸಮಗ್ರ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಹಿಂದೆಂದೂ ಕಂಡರಿಯದಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಹಾಗಾಗಿ ಕೆಲವು ಕುಹಕ ವಿರೋಧ ಪಕ್ಷದವರು,ಇದನ್ನು ಸಹಿಸದೆ ಅವರ ವಿರೋಧಿಗಳು ಕುಂತಲ್ಲಿ ನಿಂತಲ್ಲಿ ಮಾತನಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಯಡಿಯೂರಪ್ಪನವರು ತಾಲ್ಲೂಕಿಗೆ ಏನು ಮಾಡಿದ್ದಾರೆ ಎಂದು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಅವರಿಗೆ ಅವರದ್ದೇ ಶೈಲಿಯಲ್ಲಿ ನಾವು ಕೂಡ ಅಭಿವೃದ್ಧಿ ಕಾರ್ಯಗಳನ್ನು ತೋರಿಸಿಕೊಡಬೇಕಾಗಿದೆ ಎಂದರು.
ಕಳೆದ ವರ್ಷ ಇದೇ ಸ್ಥಳದಲ್ಲಿ ಅಂಜನಾಪುರ ಜಲಾಶಯ ತುಂಬಿದಾಗ ಯಡಿಯೂರಪ್ಪನವರು ಬಾಗಿನ ಅರ್ಪಿಸಿ ಮುಂದಿನ ದಿನಗಳಲ್ಲಿ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುತ್ತಿದ್ದು, ವಿಜಯೇಂದ್ರ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಘೋಷಿಸಿದರು ತಾಲ್ಲೂಕಿನ ಜನತೆಯ ಆಶೀರ್ವಾದದಿಂದ ಒಂದೇ ವರ್ಷದ ಅವಧಿಯಲ್ಲಿ ನಾನು ಶಾಸಕನಾಗಿ ಇಂದು ತುಂಬಿ ತುಳುಕುತ್ತಿರುವ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದುಕೊಂಡಿದ್ದೇನೆ. ಕಳೆದ 15 ದಿನಗಳ ಹಿಂದೆ ಖಾಲಿ ಆಗಿದ್ದ ಅಂಜನಾಪುರ ಜಲಾಶಯಕ್ಕೆ ತುಂಗಾ ನದಿಯಿಂದ ಹೊಸಳ್ಳಿ ಹತ್ತಿರ ನಿರ್ಮಾಣ ಮಾಡಿರುವ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಿದ್ದು ಮಳೆಯ ನೀರು ಹಾಗೂ ತುಂಗಾ ನದಿಯ ನೀರಿನಿಂದಾಗಿ ಕೇವಲ ಐದು ದಿನದಲ್ಲಿ ಅಂಜನಾಪುರ ಜಲಾಶಯ ಭರ್ತಿಯಾಗಿದೆ.

ತಾಲ್ಲೂಕಿನಲ್ಲಿ ಅತಿಯಾದ ಮಳೆಯಿಂದಾಗಿ ಮೆಕ್ಕೆಜೋಳ ಸೀತದಿಂದಾಗಿ ಹಾಳಾಗುತ್ತಿದ್ದು, ರೈತರು ಮತ್ತೊಮ್ಮೆ ಮೆಕ್ಕಜೋಳದ ಬಿತ್ತನೆ ಮಾಡುವ ಸಂಧರ್ಭ ಬಂದೊದಗಿದೆ. ಈ ಕುರಿತು ಕೃಷಿ ಅಧಿಕಾರಿಗಳ ಜೊತೆಯಲ್ಲಿ ಸಭೆಯನ್ನು ನಡೆಸಿದ್ದೇನಲ್ಲದೇ, ರಸಗೊಬ್ಬರವನ್ನು ದಾಸ್ತಾನು ಮಾಡಿ ಕೃತಕ ಅಭಾವ ಉಂಟುಮಾಡಿ ಕಾಳ ಸಂತೆಯಲ್ಲಿ ವ್ಯಾಪಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದು, ಡಿಎಪಿ ಮತ್ತು ಯೂರಿಯಾ ರಸಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಆದೇಶಿಸಿದ್ದೇನೆ ಎಂದು ಅಧಿಕಾರಿಗಳಿಗೆ ಮತ್ತೊಮ್ಮೆ ಎಚ್ಚರಿಕೆ ಸಂದೇಶ ನಿಡಿದರು.
ಕಾರ್ಯಕ್ರಮದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್ ಟಿ ಬಳೆಗಾರ ಮಾಜಿ ಪುರಸಭಾ ಅಧ್ಯಕ್ಷ ಕೆ ಜಿ ವಸಂತ್ ಗೌಡರು ಶಿಕಾರಿಪುರ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷಪ್ಪ ರೈತಕೆರೆ ಯೋಜನೆ ಅಧ್ಯಕ್ಷರಾದ ಕುಮಾರ ಗೌಡ ಹೊರ ಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ತರಲಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ್ ಎಕ್ಸಿಕ್ಯೂಟಿವ್ ಇಂಜಿನಿಯರ್ ವೆಂಕಟೇಶ್ ವೀರೇಂದ್ರ ಪಾಟೀಲ್ ನಿಂಬೆಗೊಂದಿ ಸಿದ್ಲಿಂಗಪ್ಪ, ಕೊರ್ಲಹಳ್ಳಿ ನಾಗರಾಜ್, ಗಿರೀಶ್ ಧಾರವಾಡ ಮುಂತಾದವರು ಉಪಸ್ಥಿತರಿದ್ದರು.