ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಂಸದ ಬಿ‌.ವೈ ರಾಘವೇಂದ್ರ ಕರೆ

ಶಿಕಾರಿಪುರ : ಬಿರು ಬೇಸಿಗೆಯಲ್ಲಿ ತಾಲ್ಲೂಕಿನ ಯಾವ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಅಲ್ಲಿ ಕೂಡಲೇ ಬೋರ್ ವೆಲ್ ಕೊರೆಸಿ ಜನ ಜಾನುವಾರುಗಳಿಗೆ ಕೂಡಲೇ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲೆಯ ಸಂಸದ ಬಿ ವೈ ರಾಘವೇಂದ್ರರವರು ಕರೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರದಂದು ಸಂಸದ ಬಿವೈಆರ್ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ 43 ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಪಿಡಿಒ ಹಾಗೂ ಕಾರ್ಯದರ್ಶಿಗಳ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಬೇರೆ ಬೇರೆ ತಾಲ್ಲೂಕುಗಳಲ್ಲಿ ಮಳೆಯಾಗಿದ್ದು, ಶಿಕಾರಿಪುರ ತಾಲ್ಲೂಕಿನಲ್ಲಿ  ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮಳೆಯಾಗಿದ್ದು ಬಿಟ್ಟರೆ, ಈಗಿನ ಮಾರ್ಚ್ ತಿಂಗಳವರೆಗೂ ಒಂದೇ ಒಂದು ಸಲ ಮಳೆಯಾಗಿಲ್ಲ. ಇದರಿಂದಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬರುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳು ಹಾಗೂ ಕೆಇಬಿ ಅಧಿಕಾರಿಗಳು ಹಬ್ಬವೆಂದು ಮನೆಯಲ್ಲಿ ಕೂರದೇ ಕೂಡಲೇ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕೆಂದು ಎಚ್ಚರಿಕೆ ನೀಡಿದ್ದಲ್ಲದೇ, ತಾಲ್ಲೂಕಿನ ಅಗ್ರಹಾರ ಮುಚುಡಿ, ಜಾವಗಟ್ಟಿ ಕಾಗಿನಲ್ಲಿ ಸೇರಿದಂತೆ ನಲವತ್ತಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬರುತ್ತಿದ್ದು, ಅನೇಕ ಬೋರ್ ವೆಲ್ ಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಅವುಗಳ ಜೊತೆಗೆ ಇನ್ನೂ ಒಂದು ಬೋರ್ ವೆಲ್ ಕೊರೆಸಲು ಏಜೆನ್ಸಿ ರವರನ್ನು ಸಂಪರ್ಕಿಸಿ ಕೂಡಲೇ ಬೋರ್ ಕೊರೆದು ಅದಕ್ಕೆ ಮೋಟಾರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಜನತೆಗೆ ನೀರು ಒದಗಿಸುವ ಕೆಲಸ ಕೂಡಲೇ ಮಾಡಬೇಕು ಎಂದರು.

ಬೋರ್ ಕೊರೆದು ಎರಡು ಅಥವಾ ಮೂರು ಇಂಚು ನೀರು ಸಿಕ್ಕರೆ ಸಾಕು ಆದಷ್ಟು ಬೇಗನೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕು. ಒಂದು ವೇಳೆ ನೀರಿನ ಪ್ರಮಾಣ ಕಡಿಮೆಯಾದರೆ ಖಾಸಗಿಯವರ ಬಳಿ ಮನವಿ ಮಾಡಿ ಆ ಬೋರ್ ವೆಲ್ ನಿಂದ ಮೊದಲು ಆಯಾಯಾ ಗ್ರಾಮಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾದರೆ ಸರ್ಕಾರದ ಯಾವ ರೀತಿಯ ಕೆಲಸಗಳಿಗೆ ತಡಯಾಗಲಿದೆ ಆದ್ದರಿಂದ ಹಬ್ಬ ಆಚರಣೆ ಚುನಾವಣೆ ನಂತರ ಆಚರಿಸೋಣ ಮೊದಲು ಗ್ರಾಮೀಣ ಪ್ರದೇಶದ ಜನರಿಗೆ ನೀರು ಸರಬರಾಜು ಮಾಡಿ ಎಂದು ಆಗ್ರಹಿಸಿದರು.

ಎಂಎಡಿಬಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ ಮಾತನಾಡಿ, ಪ್ರಕೃತಿಯ ನಿಯಮದ ಪ್ರಕಾರ ಸಾಮಾನ್ಯವಾಗಿ ದೀಪಾವಳಿಯ ನಂತರ ಯುಗಾದಿ ಹಬ್ಬದ ನಡುವೆ ಒಂದೆರಡು ಬಾರಿ ಮಳೆಯಾಗಬೇಕಿತ್ತು ಆದರೆ ತಾಲ್ಲೂಕಿನಲ್ಲಿ ಇದುವರೆಗೂ ಮಳೆಯಾಗಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದ ಅನೇಕ ಬೋರ್ ವೆಲ್ ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆಯಲ್ಲದೇ, ಶಾಸಕರ ಮನೆಗೆ ಗ್ರಾಮೀಣ ಪ್ರದೇಶದ ಜನರು ಆಗಮಿಸಿ ದೂರು ನೀಡುತ್ತಿದ್ದಾರೆ. ಈಗಾಗಲೇ ಅನೇಕ ಕಡೆ ಕೊಳವೆ ಬಾವಿಗಳನ್ನು ತೊಡಿಸಲಾಗಿದೆಯಲ್ಲದೇ, ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಎಲ್ಲಾ ಮನೆ ಮನೆಗೂ ನೀರು ಪೂರೈಕೆಗೆ ಹಣ ಬಿಡುಗಡೆ ಮಾಡಲಾಗಿದ್ದು ಆದಷ್ಟು ಬೇಗ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷೆ ರೇಖಾಬಾಯಿ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೆ ರೇವಣಪ್ಪ, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪರಮೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ನಾಗೇಶ್ ಸೇರಿದಂತೆ ಅನೇಕ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಪಿಡಿಒ ಹಾಗೂ ಕಾರ್ಯದರ್ಶಿಗಳು ಹಾಜರಿದ್ದರು.

“ಚುನಾವಣಾ ನಡೆಯುವ ಮತ್ತು ನೀತಿ ಸಂಹಿತೆ ಜಾರಿಗೆಯ ಮಾಹಿತಿ ನೀಡಿದ ಸಂಸದ ಬಿವೈಆರ್, ಇದೆ ತಿಂಗಳ 27 ಅಥವಾ 28 ಕ್ಕೆ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಘೋಷಣೆಯಾಗಲಿದ್ದು, ನಂತರ ಚುನಾವಣಾ ನೀತಿ ಸಂಹಿತೆ ಜಾರಿಗೆಯಾಗುವ ಸಂಭವದ ಬಗ್ಗೆ ಮಾಹಿತಿ ನೀಡುವ ಮೂಲಕ ತಾಲ್ಲೂಕಿನ ಕಾಗಿನಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಹದಿನೈದನೇ ಹಣಕಾಸಿನಲ್ಲಿ ಬಂದಂತಹಾ ಸುಮಾರು ಇಪ್ಪತ್ತು ಲಕ್ಷ ರೂಪಾಯಿ ಅನುದಾನವನ್ನು ಇದುವರೆಗೂ ಯಾವುದೇ ರೀತಿಯ ಕೆಲಸ ಕಾರ್ಯಗಳಿಗೆ ಬಳಕೆ ಮಾಡದೇ ಇರುವಂತಹ ವಿಷಯ ಇಓ ರವರು ಸಂಸದರಿಗೆ ತಿಳಿಸಿದಾಗ, ಆ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಓ ವಿರುದ್ಧ ಗರಂ ಆದ ಸಂಸದರು, ಹದಿನೈದನೇ ಹಣಕಾಸಿನಲ್ಲಿ ಬಂದಂತಹಾ ಇಪ್ಪತ್ತು ಲಕ್ಷ ರೂಪಾಯಿ ಅನುದಾನವನ್ನು ಇನ್ನೊಂದು ವಾರದಲ್ಲಿ ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಎಲ್ಲೆಲ್ಲಿ ಯಾವ ಯಾವ ಗ್ರಾಮಗಳಲ್ಲಿ  ಕೆಲಸ ಕಾರ್ಯಗಳು ಬಾಕಿ ಇದೆಯೋ ಅವುಗಳನ್ನು ಕೂಡಲೇ ಮಾಡಬೇಕು ಇಲ್ಲದಿದ್ದರೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದರೆ ಪಂಚಾಯಿತಿಯ ಎಲ್ಲಾ ಕೆಲಸಗಳಿಗೆ ತಡಯಾಗಲಿದೆ ಎಂದು ಎಚ್ಚರಿಕೆ ನೀಡಿದರು.”

Related Articles

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Articles

error: Content is protected !!