ಜನರ ಸಂಕಷ್ಟಕ್ಕೆ ನೌಕರರು ಸ್ಪಂದಿಸಿ ; ಬಿಎಸ್‌ವೈ

ಶಿಕಾರಿಪುರ: ಕಾಯಕವೆ ಕೈಲಾಸ ಎನ್ನುವ ಅಣ್ಣ ಬಸವಣ್ಣರ ಧ್ಯೇಯ ಎಲ್ಲ ಸರ್ಕಾರಿ ನೌಕರರು ಅಳವಡಿಸಿಕೊಳ್ಳಬೇಕು ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.


ಪಟ್ಟಣದಲ್ಲಿ ಶುಕ್ರವಾರ ಸರ್ಕಾರಿ ನೌಕರರ ಸಂಘ ತಾಲೂಕು ಘಟಕ ಆಯೋಜಿಸಿದ್ದ ತಾಲೂಕು ಸಮ್ಮೇಳನ, ಗುರುರಾಜ ಕರ್ಜಗಿ ಉಪನ್ಯಾಸ, ಪ್ರತಿಭಾ ಪುರಸ್ಕಾರ, ಸರ್ವ ಸದಸ್ಯರ ಸಭೆ, ಮಹಿಳಾ ದಿನಾಚರಣೆ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಯಾವುದೇ ಸರ್ಕಾರ ಜನಪರವಾಗಿ ನಡೆಯಬೇಕು ಎಂದರೆ ನೌಕರರ ಪಾತ್ರ ಅಮೂಲ್ಯ. ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ನಾಳೆ ಬಾ ಎನ್ನದೆ ಅಂದೆ ಜನರ ಕೆಲಸ ಮಾಡುವ ಮೂಲಕ ಸ್ಪಂದಿಸಿದರೆ ಮಾತ್ರ ನೌಕರರಿಗೆ ಗೌರವ ಬರುತ್ತದೆ. ಸಾರ್ವಜನಿಕರ ಅಳಲಿಗೆ ಧ್ವನಿಯಾಗುವ ನಿಶ್ಚಯದಕ್ಕೆ ಸಮ್ಮೇಳನ ಕಾರಣವಾಗಲಿ ಈ ನಿಟ್ಟಿನಲ್ಲಿ ಎಲ್ಲರೂ ಚಿಂತನೆ ನಡೆಸಬೇಕು ಎಂದರು.


ಸರ್ಕಾರಿ ನೌಕರರ ಸಂಘ ರಾಜ್ಯದಲ್ಲಿ ಸದೃಢವಾಗಿ ಬೆಳೆದಿರುವುದು ಉತ್ತಮ ಬೆಳವಣಿಗೆ. ನೌಕರರ ಸಂಘದ ಅಧ್ಯಕ್ಷ ಎಂದರೆ ಷಡಾಕ್ಷರಿ ಹಾಗಿರಬೇಕು. ಅವರು ನೌಕರರ ಅಳಲನ್ನು ಸರ್ಕಾರಕ್ಕೆ ಗಟ್ಟಿಧ್ವನಿಯಲ್ಲಿ ಪ್ರತಿಪಾದಿಸಿದ ಕಾರಣಕ್ಕೆ ಸರ್ಕಾರ ಶೇ.17ರಷ್ಟು ಸಂಬಳ ಹೆಚ್ಚಳ ಮಾಡಿದೆ. ಏಳನೇ ವೇತನ ಆಯೋಗ ಜಾರಿಗೊಳಿಸಬೇಕು ಎಂದು ನಾನು ಒತ್ತಾಯಿಸಿದ್ದು ಅದು ಶೀಘ್ರದಲ್ಲೆ ತಮಗೆ ಸಿಗಲಿ ಎಂದು ಆಶಿಸಿದರು.


ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶಾಸಕಾಂಗ, ಕರ‍್ಯಾಂಗ ಕೈಜೋಡಿಸಿದರೆ ಏನಾದರೂ ಸಾಧನೆ ಆಗುತ್ತದೆ ಎನ್ನುವುದಕ್ಕೆ ಜಿಲ್ಲೆ, ತಾಲೂಕಿನಲ್ಲಿ ಆಗಿರುವ ಅಭಿವೃದ್ಧಿ ಕಾರ‍್ಯಗಳು ಸಾಕ್ಷಿಯಾಗಿವೆ. ವಿಮಾನ ನಿಲ್ದಾಣ ಉದ್ಘಾಟನೆ ಆಗಿದೆ. ಯಾವುದೆ ನೀರಾವರಿ ಯೋಜನೆ ಆರಂಭಗೊಂಡು ಪೂರ್ಣಗೊಳ್ಳಲು ಮೂರು ಸರಕಾರ ಬರಬೇಕಿತ್ತು ಆದರೆ ಬಿಎಸ್‌ವೈ ಅವಧಿಯಲ್ಲೆ ತಾಲೂಕಿನ ನೀರಾವರಿ ಯೋಜನೆ ಮಂಜೂರಾಗಿ ಪೂರ್ಣಗೊಂಡಿರುವುದು ಹೆಮ್ಮೆಯ ಸಂಗತಿ. ತಾಲೂಕಿನಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ವಿದ್ಯುತ್, ನೀರಾವರಿ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಅಕ್ಕಮಹಾದೇವಿ ಜನ್ಮಸ್ಥಳ ಅಭಿವೃದ್ಧಿ ಮಾಡಿದ್ದು ಅದನ್ನು ಇದೇ ತಿಂಗಳ 17ರಂದು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದರು.


ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮಾತನಾಡಿ, ಅನಾಮಧೇಯ ಪತ್ರದ ಆಧಾರದಲ್ಲಿ ತನಿಖೆ ಮಾಡುವ ಆದೇಶ ರದ್ದು, ಶಿಶುಪಾಲನೆ ರಜೆ, ನಗದು ರಹಿತ ಚಿಕಿತ್ಸೆ, ಆರನೇ ವೇತನ ಆಯೋಗ ಜಾರಿ ಸೇರಿ ಸರಕಾರಿ ನೌಕರರ ಪರವಾದ 24ಆದೇಶ ಜಾರಿಗೊಳಿಸಿದ ಕೀರ್ತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. 7ನೇ ವೇತನ ಆಯೋಗ ಶೀಘ್ರದಲ್ಲೆ ಜಾರಿಗೊಳಿಸಬೇಕು ಎನ್ನುವ ನಮ್ಮ ಧ್ವನಿಗೆ ಬಿಎಸ್‌ವೈ ಸದನದಲ್ಲಿ ಧ್ವನಿಗೂಡಿಸಿದರು ಅವರ ಕೊಡುಗೆ ಎಂದಿಗೂ ನೌಕರರು ಮರೆಯುವುದಿಲ್ಲ. ನೌಕರರ ಹಿತ ಕಾಯುವುದಕ್ಕೆ ಸಂಘ ಬದ್ಧವಾಗಿದೆ ಅದೇರೀತಿ ಸರ್ಕಾರದ ಯೋಜನೆ ಅರ್ಹ ಫಲಾನುಭವಿಗೆ ತಲುಪಿಸುವ ಪ್ರಮಾಣಿಕ ಕೆಲಸ ನಾವೆಲ್ಲರೂ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕಾರ‍್ಯಕ್ರಮದಲ್ಲಿ ಚಿಂತಕ ಗುರುರಾಜ ಕರ್ಜಗಿ ಉಪನ್ಯಾಸ ನೀಡಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ನೌಕರರ ಮಕ್ಕಳಿಗೆ ಪುರಸ್ಕರಿಸಲಾಯಿತು. ಮಹಿಳಾ ದಿನಾಚರಣೆ, ಸರ್ವಸದಸ್ಯರ ಸಭೆ ನಡೆಸಲಾಯಿತು.

ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಡಿ.ಮಧುಕೇಶವ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಉಗ್ರಾಣ ನಿಗಮ ಅಧ್ಯಕ್ಷ ಎಚ್.ಟಿ.ಬಳಿಗಾರ್, ರಾಜ್ಯ ಅರಣ್ಯ ನಿಗಮ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ಸರಕಾರಿ ನೌಕರರ ಸಂಘದ ಆರ್.ಮೋಹನ್‌ಕುಮಾರ್, ಸಿದ್ಧಬಸಪ್ಪ, ಸುಮತಿ, ಎಸ್.ಬಿ.ವಿಶ್ವನಾಥ್, ಬಸವನಗೌಡ ಕೊಣ್ತಿ, ಪಿ.ರೇಣುಕಪ್ಪ, ಡಿ.ಆರ್.ಪುರುಷೋತ್ತಮ, ಎಂ.ರಾಮಚಂದ್ರ ನೌಕರರ ಸಂಘದ ಎಲ್ಲ ವಿಭಾಗಗಳ ಮುಖ್ಯಸ್ಥರು, ಜಿಲ್ಲಾ ಸಂಘದ ಪದಾಧಿಕಾರಿಗಳು ಸಾವಿರಾರು ನೌಕರರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,755FollowersFollow
0SubscribersSubscribe
- Advertisement -spot_img

Latest Articles

error: Content is protected !!